ಹಿತರಕ್ಷಣಾ ಸಮಿತಿ ಸಭೆಗೆ ಪರಿಶಿಷ್ಟರ ಬಹಿಷ್ಕಾರ

ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ /ವರ್ಗದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮೋಹನ್ ಕುಮಾರ್ ಮಾತನಾಡಿದರು. ಎಂ.ಎಸ್.ತನ್ಮಯಿ, ಷಣ್ಮುಗಂ, ಭಾಸ್ಕರ್ ನಾಯಕ್, ಶಶಿಧರ್, ಶರವಣ ಇದ್ದರು.
ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ /ವರ್ಗದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮೋಹನ್ ಕುಮಾರ್ ಮಾತನಾಡಿದರು. ಎಂ.ಎಸ್.ತನ್ಮಯಿ, ಷಣ್ಮುಗಂ, ಭಾಸ್ಕರ್ ನಾಯಕ್, ಶಶಿಧರ್, ಶರವಣ ಇದ್ದರು.
Published on
ಗುಂಡ್ಲುಪೇಟೆ: ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ, ವರ್ಗದ ಹಿತರಕ್ಷಣಾ ಸಮಿತಿ ಸಭೆಗೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಗೈರಾದ ಹಿನ್ನೆಲೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಸಮುದಾಯದ ಮುಖಂಡರು ಸಭೆ ಬಹಿಷ್ಕರಿಸಿ ಹೊರ ನಡೆದರು.
ಪರಿಶಿಷ್ಟರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮೂರು ತಿಂಗಳಿಗೊಮ್ಮೆ ಕರೆಯಬೇಕಿದ್ದ ಸಭೆಯನ್ನು ತಾಲೂಕು ಆಡಳಿತ 6 ತಿಂಗಳ ಬಳಿಕ ಆಯೋಜಿಸಿದೆ. ಆದರೆ, ಸಮುದಾಯದ ಬಗ್ಗೆ ಕೇವಲವಾಗಿ ಕಾಣುವ ಅಧಿಕಾರಿಗಳು ಸಭೆಗೆ ಗೈರಾಗಿದ್ದಲ್ಲದೆ ತಳಮಟ್ಟದ ಸಿಬ್ಬಂದಿಯನ್ನು ಕಳುಹಿಸಿ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಮುಖಂಡರು ಆಕ್ರೋಶ ಹೊರಹಾಕಿದರು. ಗೈರಾದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.
ಇಲಾಖೆಗಳ ಮೇಲಧಿಕಾರಿಗಳು ಪದೇ ಪದೆ ಸಭೆಗೆ ಗೈರಾಗುತ್ತಿದ್ದಾರೆ. ಸಭೆಗೆ ದಿನಾಂಕ ನಿಗದಿಯಾದರೂ ಉದ್ದೇಶಪೂರ್ವಕವಾಗಿ ಸಭೆಗೆ ಗೈರಾಗಿದ್ದಲ್ಲದೆ ಸಮಜಾಯಿಷಿ ನೀಡಲು ಕೆಳ ಹಂತದ ಸಿಬ್ಬಂದಿಯನ್ನು ಕಳುಹಿಸಿದ್ದಾರೆ ಎಂದು ವಕೀಲ ಕಾಂತರಾಜು ದೂರಿದರು.
ಮೇಲಧಿಕಾರಿಗಳ ಪರವಾಗಿ ಸಮಜಾಯಿಷಿ ನೀಡಲು ಹಾಜರಾಗಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ದಲಿತ ಮುಖಂಡರು, ಸಮುದಾಯದ ಸಮಸ್ಯೆಗೆ ಸ್ಪಂದಿಸಲು ಸಮಯವಿಲ್ಲದ ಅರಣ್ಯ ಇಲಾಖೆ ಅಧಿಕಾರಿಗಳು ಖಾಸಗಿ ವ್ಯಕ್ತಿಗಳಿಗೆ ಎಣ್ಣೆ ಪಾರ್ಟಿ ಮಾಡಲು ಕಾಡಿನೊಳಗೆ ಅವಕಾಶ ಮಾಡಿಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಎಲ್ಲ ಅಧಿಕಾರಿಗಳ ಹಾಜರಾತಿಯಲ್ಲಿ ಸಭೆ ನಡೆಸಲು ದಿನಾಂಕ ನಿಗದಿ ಮಾಡುವಂತೆ ಒತ್ತಾಯಿಸಿ ಹೊರನಡೆದರು.
ನಂತರ ತಹಸೀಲ್ದಾರ್ ಎಂ.ಎಸ್.ತನ್ಮಯಿ ಮಾತನಾಡಿ, ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು. ಸಭೆಯನ್ನು ಜೂ.18ಕ್ಕೆ ನಿಗದಿಪಡಿಸಲಾಗುವುದು ಎಂದು ಹೇಳಿದರು.
ತಾಲೂಕು ಪಂಚಾಯಿತಿ ಇಒ ಷಣ್ಮುಗಂ, ಬಿಇಒ ಸ್ವಾಮಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್, ಶಿಶು ಅಭಿವೃದ್ಧಿ ಅಧಿಕಾರಿ ಹೇಮಾವತಿ, ಸೆಸ್ಕ್ ಎಇಇ ಕೆ.ಎಂ.ಸಿದ್ಧಲಿಂಗಪ್ಪ, ಪುರಸಭೆ ಮುಖ್ಯಾಧಿಕಾರಿ ಶರವಣ, ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂಪಾಷಾ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಮಾದೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಅಬಕಾರಿ ಇಲಾಖೆ ಎನ್.ದೀಪು, ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಶ್ರೀಧರ್ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net