ಹನೂರು: ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಹುಚ್ಚು ನಾಯಿ ಕಡಿತ ಪ್ರಕರಣ ಹಿನ್ನೆಲೆಯಲ್ಲಿ ಗುರುವಾರ ಪಶುಪಾಲನಾ ಇಲಾಖೆಯಿಂದ ಸಾಕು ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಲಾಯಿತು.
ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕಳೆದ ಮೂರ‌್ನಾಲ್ಕು ದಿನಗಳಿಂದ ಮಕ್ಕಳು ಸೇರಿದಂತೆ ಸುಮಾರು 13ಕ್ಕೂ ಹೆಚ್ಚು ಜನರು ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿದ್ದರು. ಇದರಿಂದ ಜನರು ಭಯಭೀತರಾಗಿದ್ದು, ಪಶುಪಾಲನಾ ಇಲಾಖೆ ಅಧಿಕಾರಿಗಳು ನಾಯಿಗಳಿಗೆ ಲಸಿಕೆ ನೀಡುವಂತೆ ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಪಶು ವೈದ್ಯಾಧಿಕಾರಿ ಡಾ. ಶಿವರಾಜು ಅವರ ಮಾರ್ಗದರ್ಶನದಲ್ಲಿ ಇಲಾಖೆ ಸಿಬ್ಬಂದಿ ತಂಡ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಗೋಡೆಸ್ಟ್‌ನಗರ, ಏರಿಕಾಡು, ಸಂದನಪಾಳ್ಯ ಹಾಗೂ ಈ ಭಾಗದ ಹಲವು ಗ್ರಾಮಗಳಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮವಾಗಿ ಸಾಕು ನಾಯಿಗಳಿಗೆ ಉಚಿತ ರೇಬಿಸ್ ಲಸಿಕೆ ನೀಡಲಾಯಿತು. ದಾಳಿ ನಡೆಸಿರುವ ಹುಚ್ಚು ನಾಯಿ ಈಗಾಗಲೇ ಮೃತಪಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಸಾಕು ನಾಯಿಗಳಿಗೆ ಲಸಿಕೆ ನೀಡಲಾಗುತ್ತಿದೆ. ಆದ್ದರಿಂದ ಗ್ರಾಮಸ್ಥರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದರು.
ಪಶು ಅಧಿಕಾರಿ ಜೋಗಪ್ಪ, ಪಶು ಪರೀಕ್ಷಕರಾದ ಕ್ರಿಸ್ಟಿಸನ್, ಸಿದ್ದಪ್ಪಾಜಿ, ಬಸವರಾಜು, ಸಿಬ್ಬಂದಿ ಶಿವರಾಜು, ಮನೋಹರ್, ನವೀನ್‌ಕುಮಾರ್, ಕೀರ್ತಿ, ಧನುಷ್ ಭಾಗವಹಿಸಿದ್ದರು.