ಚಂಗಡಿ ಸಮಸ್ಯೆ ಪರಿಹಾರಕ್ಕೆ ಶೀಘ್ರ ಕ್ರಮ

ಚಂಗಡಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಶ್ರೀರೂಪಾ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಚೈತ್ರಾ, ನಟರಾಜು, ಶಿವಕುಮಾರ್, ಕರಿಯಪ್ಪ ಇತರರಿದ್ದರು.
ಚಂಗಡಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಶ್ರೀರೂಪಾ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಚೈತ್ರಾ, ನಟರಾಜು, ಶಿವಕುಮಾರ್, ಕರಿಯಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅರಣ್ಯದಂಚಿನ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ
  • ಜಿಲ್ಲಾಧಿಕಾರಿ ಶ್ರೀರೂಪಾ ಭರವಸೆ
ಹನೂರು: ತಾಲೂಕಿನ ಅರಣ್ಯದಂಚಿನ ಚಂಗಡಿ ಗ್ರಾಮಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಶ್ರೀರೂಪಾ ಅವರು ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.
ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಡಿಸಿ ಶ್ರೀರೂಪಾ ಗ್ರಾಮದಲ್ಲಿ ಸಂಚರಿಸಿ ಜನಜೀವನದ ವಾಸ್ತವ ಸ್ಥಿತಿ ಅರಿತರು. ಬಳಿಕ ಗ್ರಾಮಸ್ಥರೊಂದಿಗೆ ಒಂದೆಡೆ ಕುಳಿತು ಸಭೆ ನಡೆಸಿದರು. ಈ ವೇಳೆ ಜನರು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.
ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕಾರಿಣಿ ಸಮಿತಿ ಸದಸ್ಯ ಚಂಗಡಿ ಕರಿಯಪ್ಪ ಮಾತನಾಡಿ, ಗ್ರಾಮದಲ್ಲಿ ಅಗತ್ಯ ಮೂಲ ಸೌಕರ್ಯವಿಲ್ಲದ ಪರಿಣಾಮ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಗ್ರಾಮವನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸುವ ಸಂಬಂಧ ಸರ್ವೇ ಕಾರ್ಯ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಪುನರ್ವಸತಿಗಾಗಿ ಸ್ಥಳವನ್ನು ಗುರುತಿಸಿದ್ದಾರೆ. ಆದರೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಪರಿಣಾಮ ಪುನರ್ವಸತಿ ಕಾರ್ಯ ಕಳೆದ 7 ವರ್ಷದಿಂದ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಅಧಿಕಾರಿಗಳು ಗ್ರಾಮಕ್ಕೆ ಭೇಟಿಯನ್ನು ನೀಡಿದ್ದಾರೆ. ಆದರೆ ಯಾವುದೇ ಕ್ರಮವಾಗಿಲ್ಲ. ಇದರಿಂದ ಇಲ್ಲಿನ ಜನರು ಕಷ್ಟದ ನಡುವೆ ಜೀವನ ಸಾಗಿಸುತ್ತಿದ್ದಾರೆ. ಗ್ರಾಮದ ಬಹುತೇಕ ಜನರು ಕೂಲಿಗಾಗಿ ನಗರ ಪ್ರದೇಶದತ್ತ ಗುಳೆ ಹೋಗಿದ್ದು, ವಯಸ್ಸಾದವರು ಮಾತ್ರ ಊರಿನಲ್ಲಿದ್ದಾರೆ. ಆದ್ದರಿಂದ ಗ್ರಾಮದ ಜನರಿಗೆ ಪುನರ್ವಸತಿ ಕಲ್ಪಿಸಬೇಕು. ಇಲ್ಲವೇ ಗುರುತಿಸಲಾಗಿರುವ ಸ್ಥಳದಲ್ಲಿ ತಾತ್ಕಾಲಿಕವಾಗಿ ಗುಡಿಸಲು ಹಾಕಿಕೊಂಡು ಜೀವನ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಸಂಜೆಯಾಗುತ್ತಿದ್ದಂತೆಯೇ ಗ್ರಾಮಕ್ಕೆ ಆನೆ, ಚಿರತೆ ಹಾಗೂ ಇನ್ನಿತರ ಕಾಡು ಪ್ರಾಣಿಗಳು ಬರುತ್ತಿದ್ದು, ಆತಂಕದಲ್ಲಿ ದಿನ ದೂಡುತ್ತಿದ್ದೇವೆ. ಹಾಗಾಗಿ ಬೇಗ ಪುನರ್ವಸತಿ ಕಲ್ಪಿಸಿ ಕೊಡಬೇಕು. ಅಲ್ಲಿಯವರೆಗೂ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಾಳಾಗಿರುವ ರಸ್ತೆಯನ್ನು ತಾತ್ಕಾಲಿಕವಾಗಿ ಅರಣ್ಯ ಇಲಾಖೆಯಿಂದ ಸರಿಪಡಿಸಬೇಕು. ಪಡಿತರ ಆಹಾರವನ್ನು ಪಡೆಯುವಲ್ಲಿ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ತಿಳಿಸಿದರು.
ಸಮಸ್ಯೆಗಳನ್ನು ಆಲಿಸಿದ ಬಳಿಕ ಜಿಲ್ಲಾಧಿಕಾರಿ ಶ್ರೀರೂಪಾ ಮಾತನಾಡಿ, ಗ್ರಾಮಕ್ಕೆ ಪುನರ್ವಸತಿ ಸಂಬಂಧ ಶೀಘ್ರ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು. ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮವಹಿಸಲಾಗುವುದು. ಸದ್ಯದಲ್ಲಿನ ಕೆಲ ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು. ತಹಸೀಲ್ದಾರ್ ಕೆ.ಎನ್ ಚೈತ್ರಾ, ಭೂ ಮಾಪನ ಇಲಾಖೆಯ ಸಹಾಯಕ ನಿರ್ದೇಶಕ ನಟರಾಜು, ಆರ್‌ಐ ಶಿವಕುಮಾರ್, ಗ್ರಾಮ ಆಡಳಿತಾಧಿಕಾರಿ ಸುರೇಶ್, ಮುಖಂಡರಾದ ದೊಡ್ಡೇಗೌಡ, ಚಿಕ್ಕಮಾದು, ಮುನಿರಂಗ, ಸಿದ್ದೇಗೌಡ, ಮಾದೇಗೌಡ, ಮಂಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net