ಪಟ್ಟಣದ ವ್ಯಾಪ್ತಿಯಲ್ಲಿರುವ ಈ 2 ಮಾರ್ಗದ ರಸ್ತೆಯು ಸುಮಾರು 3 ಕಿ.ಮೀ ಅಂತರ ಹೊಂದಿದೆ. ಪಿಡಬ್ಲುೃಡಿ ಇಲಾಖೆಗೆ ಒಳಪಟ್ಟಿರುವ ಬಂಡಳ್ಳಿಗೆ ತೆರಳುವ ರಸ್ತೆ ಮಾರ್ಗದಲ್ಲಿ ಬ್ಯಾಂಕ್‌ಗಳು, ಅಂಚೆ ಕಚೇರಿ, ಗ್ಯಾಸ್, ಬೈಕ್ ಷೋ ರೂಮ್‌ಗಳು, ಹೋಟೆಲ್, ಮದ್ಯದಂಗಡಿ ಹಾಗೂ ಅಂಗಡಿ ಮುಂಗಟ್ಟುಗಳು ಹೆಚ್ಚಿನ ಸಂಖ್ಯೆಯಲ್ಲಿದೆ. ಇದರಿಂದ ಈ ರಸ್ತೆಯು ಹೆಚ್ಚು ಜನರು ಸಂಚರಿಸುವ ಮಾರ್ಗವಾಗಿದೆ. ಅಲ್ಲದೆ ಇದೇ ಮಾರ್ಗದಲ್ಲಿ ಕ್ರಿಸ್ತರಾಜ ಶಿಕ್ಷಣ ಸಂಸ್ಥೆ, ಜಿ.ವಿ ಗೌಡ ಸರ್ಕಾರಿ ಪ್ರೌಢಶಾಲೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಇದ್ದು, ನಿತ್ಯ ಸಾವಿರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಜತೆಗೆ ಕೆಲಸ ಕಾರ್ಯಗಳ ನಿಮಿತ್ತ ಶಿಕ್ಷಕರು ಬಿಇಒ ಕಚೇರಿಗೆ ತೆರಳುವ ಮುಖ್ಯ ರಸ್ತೆಯಾಗಿದೆ.