ಓದಿನ ಜತೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಿ

ಹನೂರಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮವನ್ನು ತಹಸೀಲ್ದಾರ್ ಕೆ.ಎನ್ ಚೈತ್ರಾ ಉದ್ಘಾಟಿಸಿದರು. ಮಹೇಶ್, ಗುರುಸ್ವಾಮಿ, ಕೃಷ್ಣೇಗೌಡ, ಶಿವಮಲ್ಲು, ಚಂದ್ರಶೇಖರ್, ಮಹೇಶ್ ಇತರರಿದ್ದರು.
ಹನೂರಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮವನ್ನು ತಹಸೀಲ್ದಾರ್ ಕೆ.ಎನ್ ಚೈತ್ರಾ ಉದ್ಘಾಟಿಸಿದರು. ಮಹೇಶ್, ಗುರುಸ್ವಾಮಿ, ಕೃಷ್ಣೇಗೌಡ, ಶಿವಮಲ್ಲು, ಚಂದ್ರಶೇಖರ್, ಮಹೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಕೆ.ಎನ್ ಚೈತ್ರಾ ಸಲಹೆ
  • ತಾಲೂಕು ಮಟ್ಟದ ಸ್ಪರ್ಧೆ
ಹನೂರು: ಚಲಿಸುವಂತೆ ಭಾಸವಾಗುತ್ತಿದ್ದ ಮಣ್ಣಿನ ಮಾದರಿಯ ಮೊಸಳೆ, ಜಿಂಕೆ, ಮೀನು, ಹಾವಭಾವದೊಂದಿಗೆ ಪ್ರದರ್ಶಿಸಿದ ಛದ್ಮ ವೇಷಧಾರಿಗಳ ಭಂಗಿಗಳು, ಮಾದಪ್ಪನ ಗೀತೆಗೆ ನರ್ತನ, ಭಾವನೆಗಳೊಂದಿಗೆ ಭಾವಗೀತೆ ಹಾಡಿದರು. ಆಕರ್ಷಿಸುವಂತಿದ್ದ ವಿವಿಧ ಬಣ್ಣದ ರಂಗೋಲಿ, ನಕ್ಕು ನಲಿಸಿದ ಪ್ರಾಣಿ, ಪಕ್ಷಿಗಳ ಮಿಮಿಕ್ರಿ...
ಪಟ್ಟಣದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮ ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಸಾಕ್ಷೀಕರಿಸಿತು.
ಶೈಕ್ಷಣಿಕ ವಲಯದ 13 ಕ್ಲಸ್ಟರ್‌ಗಳ ಶಾಲೆಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಜಯ ಗಳಿಸಿ ಶಿಕ್ಷಕರು ಹಾಗೂ ಸಹಪಾಠಿಗಳೊಂದಿಗೆ ಲವಲವಿಕೆಯಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಸ್ಪರ್ಧಾ ಭಾವದೊಂದಿಗೆ ಕ್ರಿಯಾಶೀಲತೆಯಿಂದ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆಯನ್ನು ತೀರ್ಪುಗಾರರ ಸಮ್ಮುಖದಲ್ಲಿ ಅನಾವರಣಗೊಳಿಸಿದರು.
ಮಣ್ಣಿನ ಮಾದರಿ ತಯಾರಿಕೆ ಹಾಗೂ ರಂಗೋಲಿ ಸ್ಪರ್ಧೆಯನ್ನು ಶಾಲಾವರಣದಲ್ಲಿ ಆಯೋಜಿಸಿದ್ದರೆ, ಉಳಿದ ಸ್ಪರ್ಧೆಗಳು ನಿಗದಿಪಡಿಸಿದ್ದ ಆಯಾ ಶಾಲಾ ಕೊಠಡಿಯಲ್ಲಿ ನಡೆಯಿತು. ಕ್ಲಸ್ಟರ್‌ಗಳ ಸಿಆರ್‌ಪಿ, ಶಿಕ್ಷಕರು ಆಗಮಿಸಿದ್ದರು. ಇನ್ನು ಶಾಲೆಯ ಆವರಣವನ್ನು ಎತ್ತಿನ ಗಾಡಿಯ ಬಂಡಿ, ತಳಿರು ತೋರಣ ಹಾಗೂ ವಿವಿಧ ವಿನ್ಯಾಸವುಳ್ಳ ಬಣ್ಣ ಬಣ್ಣದ ಬಟ್ಟೆಗಳಿಂದ ಸಿಂಗಾರ ಮಾಡಲಾಗಿತ್ತು. ಆಗಮಿಸಿದ್ದ ಗಣ್ಯರನ್ನು ಕುಂಭಕಳಸ ಹೊತ್ತ ಹೆಣ್ಣು ಮಕ್ಕಳು ಬಿಇಒ ಮಹೇಶ್ ಹಾಗೂ ಶಿಕ್ಷಕರ ಸಮ್ಮುಖದಲ್ಲಿ ಆತ್ಮೀಯವಾಗಿ ಸ್ವಾಗತಿಸಿ ವೇದಿಕೆಗೆ ಕರೆ ತಂದರು. ನೆರೆದಿದ್ದ ಮಕ್ಕಳ ಮೊಗದಲ್ಲಿ ಸಂತಸ ಮನೆ ಮಾಡಿತ್ತು. ಹಾಗಾಗಿ ಶನಿವಾರ ಶಾಲಾ ಆವರಣದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಕಾರ್ಯಕ್ರಮವು ಸುಸೂತ್ರವಾಗಿ ನಡೆಯಿತು.
ವೇದಿಕೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕೆ.ಎನ್ ಚೈತ್ರಾ ಮಾತನಾಡಿ, ಶಿಕ್ಷಣ ಓದಿಗಷ್ಟೇ ಸೀಮಿತವಾಗಬಾರದು. ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತಾಗಬೇಕು. ಎಲ್ಲರಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಹಾಗಾಗಿ ಪ್ರತಿಭೆಯ ಅನಾವರಣಕ್ಕೆ ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ಇದು ಭವಿಷ್ಯದ ಜೀವನಕ್ಕೆ ಸಹಕಾರಿಯಾಗಿದೆ. ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಯುವಂತಾಗುತ್ತದೆ. ಈ ದೆಸೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಿಕೆ ಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಇಒ ಮಹೇಶ್, ಬಿಆರ್‌ಸಿ ವೆಂಕಟೇಶ್, ಶಿಕ್ಷಣ ಸಂಯೋಜಕರಾದ ಅಶೋಕ್, ಮಹೇಶ್, ಚಿನ್ನಪ್ಪಯ್ಯ, ದೈಹಿಕ ಶಿಕ್ಷಣ ಪರಿವೀಕ್ಷಕ ಕೆಂಪರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವಮಲ್ಲು, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮಲಿಂಗಂ, ಪರಿಶಿಷ್ಟ ಜಾತಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಾದೇಶ್, ಮುಖ್ಯ ಶಿಕ್ಷಕ ವೀರಪ್ಪ ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net