ಹನೂರು: ಪಟ್ಟಣದ ಆದಿ ಜಾಂಬವರ ಕಾಲನಿಗೆ ಶುಕ್ರವಾರ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.
ಕಾಲನಿಯ 2 ಬಡಾವಣೆಯ ತೊಂಬೆಗಳಿಗೆ ಕಳೆದ ಒಂದು ತಿಂಗಳಿನಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ತುಂಬ ಸಮಸ್ಯೆ ಎದುರಿಸುತ್ತಿದ್ದೇವೆ. ಪ್ರತಿನಿತ್ಯ ಕೂಲಿ ಬಿಟ್ಟು ನೀರಿಗಾಗಿ ಅಲೆಯುವಂತಾಗಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಲ್ಲಿ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇನ್ನು ಕೆಲ ಮನೆಗಳು ಶಿಥಿಲಗೊಂಡಿವೆ. ಒಂದೇ ಮನೆಯಲ್ಲೇ 2-3 ಕುಟುಂಬಗಳು ವಾಸಿಸುತ್ತಿವೆ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಮನೆ ಮಂಜೂರು ಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಬಳಿಕ ಮಾತನಾಡಿದ ಶಾಸಕ ಎಂ.ಆರ್.ಮಂಜುನಾಥ್, ಕಾಲನಿಗೆ ಪ್ರಸ್ತುತ ಬೋರ್ ಮೂಲಕ ನೀರು ಪೂರೈಕೆಯಾಗುತ್ತಿದೆ. ಸದ್ಯದಲ್ಲಿಯೇ ಮೋಟಾರ್ ಅಳವಡಿಸಿ ಕಾವೇರಿ ನೀರು ಸರಬರಾಜು ಮಾಡಲಾಗುವುದು. ಇದರಿಂದ ನೀರಿನ ಸಮಸ್ಯೆ ನೀಗಲಿದೆ. ಇನ್ನು ಮುಂದಿನ ದಿನಗಳಲ್ಲಿ ಕಾಲನಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸುವುದರ ಮೂಲಕ ವಸತಿ ಇಲ್ಲದವರಿಗೆ ಮನೆ ಮಂಜೂರು ಮಾಡಿಕೊಡುವುದಾಗಿ ಹಾಗೂ ಕಾಲನಿಯ ದೇಗುಲದ ಸುತ್ತ ಕಾಂಪೌಂಡ್ ನಿರ್ಮಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾದರ ಮಹಾಸಭಾದ ತಾಲೂಕು ಅಧ್ಯಕ್ಷ ಸುದೇಶ್, ಮುಖಂಡರಾದ ರಂಗಸ್ವಾಮಿ, ಗೋವಿಂದ, ಸಿದ್ದರಾಜು, ನಟರಾಜು ಹಾಗೂ ಇನ್ನಿತರರಿದ್ದರು.
ಅಗತ್ಯ ಕ್ರಮಕೈಗೊಂಡು ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಶಾಸಕರು ಪಪಂ ನೌಕರ ಮದನ್‌ಗೆ ಸೂಚಿಸಿದರು.