ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೀದಿ ನಾಟಕವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಚಂದ್ರಶೇಖರ್ ಉದ್ಘಾಟಿಸಿದರು. ಜಯಣ್ಣ, ಚೈತ್ರಾ, ಶೋಭಾ ಇತರರು ಇದ್ದರು.
ಗುಂಡ್ಲುಪೇಟೆ: ಗ್ರಾಮೀಣ ಪ್ರದೇಶದಲ್ಲಿ ಬಯಲು ಶೌಚ, ಮದ್ಯಪಾನ ಮತ್ತು ಮೊಬೈಲ್ ಬಳಕೆ ಹೆಚ್ಚುತ್ತಿದ್ದು, ಇದಕ್ಕೆ ಮಿತಿ ಇರಬೇಕು. ಹೀಗಾಗಿ ಈ ಬಗ್ಗೆ ಜನರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ತಾಲೂಕಿನ ಅಣ್ಣೂರು ಕೇರಿ ಗ್ರಾಮದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿ ಶುಕ್ರವಾರ ಆಯೋಜಿಸಿದ್ದ ಬೀದಿ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರಗಳ ಕಠಿಣ ಪರಿಶ್ರಮದಿಂದ ವ್ಯಾಪಕವಾಗಿದ್ದ ಬಯಲು ಶೌಚಾಲಯ ಪದ್ಧತಿ ಬಹುತೇಕ ನಿರ್ಮೂಲನೆಯಾಗುತ್ತಿದೆ. ಆದರೂ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳ ಬಳಕೆ ಮಾಡುವಲ್ಲಿ ಜನತೆ ಹೆಚ್ಚು ಗಂಭೀರವಾಗಿಲ್ಲ. ಮನುಷ್ಯನಿಗೆ ಬರುವ ಬಹುತೇಕ ಕಾಯಿಲೆಗಳನ್ನು ತಡೆಯುವ ನಿಟ್ಟಿನಲ್ಲಿ ನೀರು ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಮದ್ಯವ್ಯಸನ ಕುಟುಂಬ ಮತ್ತು ಸಮಾಜಕ್ಕೆ ಹಾನಿಕರ. ಹೀಗಾಗಿ ಕುಡಿತದ ಚಟದಿಂದ ದೂರವಾಗಬೇಕು ಎಂದು ಕಿವಿಮಾತು ಹೇಳಿದರು. ಮೊಬೈಲ್ ಈಗ ಸರ್ವವ್ಯಾಪಿಯಾಗಿದ್ದು, ಮಕ್ಕಳು, ಯುವಕರು ಮತ್ತು ಸಾಮಾನ್ಯ ಜನರು ಇದರ ಬಳಕೆ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಸಮಾಜದಲ್ಲಿ ನಾನಾ ರೀತಿಯ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂದು ತಿಳಿಸಿದರು.
ರಂಗ ಜಂಗಮ ಕಲಾ ತಂಡದ ಅಧ್ಯಕ್ಷ ಮಹೇಶ್ ನೇತೃತ್ವದಲ್ಲಿ ಶೌಚಾಲಯ ಬಳಕೆ, ನೀರು ಮತ್ತು ನೈರ್ಮಲ್ಯ ಕುಡಿತದ ಚಟ ಮತ್ತು ಮೊಬೈಲ್ ಬಳಕೆ ಇತರೆ ಸಾಮಾಜಿಕ ಪಿಡುಗುಗಳಿಗೆ ಪೂರಕವಾದ ವಿಷಯಗಳ ಜಾಗೃತಿ ಕುರಿತಾಗಿ ಬೀದಿ ನಾಟಕವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಜಯಣ್ಣ, ಚೈತ್ರಾ, ಶೋಭಾ, ಚಿಕ್ಕತಾಯಮ್ಮ ಹಾಗೂ ಪ್ರಗತಿ-ಬಂಧು ಸ್ವ-ಸಹಾಯ ಸಂಘಗಳ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.