ಪಲ್ಸ್ ಪೋಲಿಯೋ ಅಭಿಯಾನಕ್ಕೆ ಎಲ್ಲರೂ ಸಹಕರಿಸಲಿ

ಹನೂರಿನಲ್ಲಿ ಪಲ್ಸ್ ಪೋಲಿಯೋ ಅಭಿಯಾನದ ಅಗತ್ಯ ಸಿದ್ಧತೆ ಕುರಿತು ತಹಸೀಲ್ದಾರ್ ಕೆ.ಎನ್ ಚೈತ್ರಾ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಡಾ.ಪ್ರಕಾಶ್, ಮಹೇಶ್, ರಂಗಸ್ವಾಮಿ, ಶಶಿಕಲಾ, ಪ್ರಕಾಶ್ ಇತರರಿದ್ದರು.
ಹನೂರಿನಲ್ಲಿ ಪಲ್ಸ್ ಪೋಲಿಯೋ ಅಭಿಯಾನದ ಅಗತ್ಯ ಸಿದ್ಧತೆ ಕುರಿತು ತಹಸೀಲ್ದಾರ್ ಕೆ.ಎನ್ ಚೈತ್ರಾ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಡಾ.ಪ್ರಕಾಶ್, ಮಹೇಶ್, ರಂಗಸ್ವಾಮಿ, ಶಶಿಕಲಾ, ಪ್ರಕಾಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಕೆ.ಎನ್. ಚೈತ್ರಾ ಸೂಚನೆ
  • ಸಮನ್ವಯ ಸಮಿತಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ
ಹನೂರು: ಪ್ರತಿಯೊಬ್ಬರೂ ಸಮನ್ವಯತೆಯಿಂದ ಕಾರ್ಯನಿರ್ವಹಿಸುವುದರ ಮೂಲಕ 5 ವರ್ಷದೊಳಗಿನ ಪ್ರತಿಯೊಂದು ಮಗು ಪಲ್ಸ್ ಪೋಲಿಯೋ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ತಹಸೀಲ್ದಾರ್ ಕೆ.ಎನ್ ಚೈತ್ರಾ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಸೋಮವಾರ ಪಲ್ಸ್ ಪೋಲಿಯೋ ಅಭಿಯಾನದ ಅಗತ್ಯ ಸಿದ್ಧತೆ ಕುರಿತು ಆಯೋಜಿಸಿದ್ದ ಸಮನ್ವಯ ಸಮಿತಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಪಲ್ಸ್ ಪೋಲಿಯೋ ಹನಿ ಜೀವ ರಕ್ಷಣೆ ಹಾಗೂ ಉತ್ತಮ ಆರೋಗ್ಯದ ದೃಷ್ಟಿಯಿಂದ ಪ್ರತಿ ಮಗುವಿಗೂ ಅತ್ಯವಶ್ಯಕ. ಹಾಗಾಗಿ ಪಲ್ಸ್ ಪೋಲಿಯೋ ಅಭಿಯಾನವನ್ನು ಸಮರ್ಪಕ ಅನುಷ್ಠಾನಗೊಳಿಸುವಂತೆ ಈಗಾಗಲೇ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ. ಹನೂರು ತಾಲೂಕಿನಲ್ಲಿ ಹೆಚ್ಚು ಕಾಡಂಚಿನ ಗ್ರಾಮಗಳು ಹಾಗೂ ಸೋಲಿಗರ ಹಾಡಿಗಳಿವೆ. ಹಾಗಾಗಿ ವಿವಿಧ ಇಲಾಖೆಯ ಸಹಭಾಗಿತ್ವ ಅತೀ ಮುಖ್ಯ. ಆದ್ದರಿಂದ ಪ್ರತಿಯೊಬ್ಬರೂ ಸಹಕರಿಸುವುದರ ಮೂಲಕ ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಈ ದೆಸೆಯಲ್ಲಿ ಡಿ.20 ರಂದು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಜತೆಗೆ ಶಾಲೆಯಲ್ಲಿ ಪ್ರಾರ್ಥನೆ ವೇಳೆ ಮಕ್ಕಳಿಗೆ ತಿಳಿಸಬೇಕಿದೆ. ಡಿ.21 ರಂದು ಬೂತ್‌ಗಳಲ್ಲಿ ಲಸಿಕೆ ನೀಡಲಿದ್ದು, ಮುಂದುವರಿದು 3 ದಿನಗಳ ಕಾಲ ಮನೆ ಹಾಗೂ ಜನವಸತಿ ಪ್ರದೇಶದಲ್ಲಿ ಲಸಿಕೆ ನೀಡಬೇಕಿದೆ. ಒಟ್ಟಿನಲ್ಲಿ ಲಸಿಕೆಯಿಂದ ಯಾವುದೇ ಮಗು ವಂಚಿತರಾಗದಂತೆ ನೋಡಿಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಕಾಶ್ ಮಾತನಾಡಿ, ಈಗಾಗಲೇ ಭಾರತ ಪೋಲಿಯೋ ಮುಕ್ತವಾಗಿದೆ. ಆದರೆ ಇಲ್ಲಿನ ನಾಗರಿಕರು ವಿದೇಶಗಳಿಗೆ ತೆರಳಿ ಆಗಮಿಸುವುದರಿಂದ ಎಚ್ಚರ ವಹಿಸಬೇಕಿದೆ. ಪೋಲಿಯೋ ಹನಿ ಜೀವವನ್ನು ರಕ್ಷಿಸುತ್ತದೆ. ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಹಾಗಾಗಿ ಮಗುವಿಗೆ ಲಸಿಕೆ ಹಾಕಿಸುವಂತೆ ಪ್ರತಿಯೊಬ್ಬರೂ ಜನರಲ್ಲಿ ಜಾಗೃತಿ ಮೂಡಿಸಬೇಕು. ತಾಲೂಕಿನಲ್ಲಿ 133 ಲಸಿಕೆ ಕೇಂದ್ರಗಳು ಕಾರ್ಯನಿರ್ವಹಿಸಲಿದ್ದು, ಪ್ರತಿ ಬೂತ್‌ಗೆ ನಾಲ್ವರಂತೆ 532 ಸಿಬ್ಬಂದಿ ನಿಯೋಜಿಸಲಾಗಿದೆ. 11 ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. ಈ ಬಗ್ಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ತಿಳಿಸಿದರು.
ಬಿಇಒ ಮಹೇಶ್, ಸೆಸ್ಕ್ ಎಇಇ ರಂಗಸ್ವಾಮಿ, ತಾಪಂ ಲೆಕ್ಕಾಧೀಕ್ಷಕಿ ಶಶಿಕಲಾ, ಪಪಂ ಆರೋಗ್ಯಾಧಿಕಾರಿ ಪ್ರಕಾಶ್, ಹೋಲಿ ಕ್ರಾಸ್ ಸಂಸ್ಥೆಯ ಸಿಸ್ಟರ್ ಮೇರಿ, ಪ್ರಿಯಾ ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net