ಸಚಿವ ಸ್ಥಾನದ ಮನವಿಯನ್ನು ಹೈಕಮಾಂಡ್ ಪುರಸ್ಕರಿಸಲಿದೆ

ಶಾಸಕ ಎ.ಆರ್.ಕೃಷ್ಣಮೂರ್ತಿ
ಶಾಸಕ ಎ.ಆರ್.ಕೃಷ್ಣಮೂರ್ತಿ
Published on
ಕೊಳ್ಳೇಗಾಲ : ಸಚಿವ ಸ್ಥಾನ ನೀಡಿಬೇಕೆಂಬ ನನ್ನ ಮನವಿಯನ್ನು ಹೈಕಮಾಂಡ್ ಪುರಸ್ಕರಿಸಲಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾತನಾಡಿದ ಅವರು, 1997ರಲ್ಲಿ ಚಾಮರಾಜಗರ ಜಿಲ್ಲೆ ಉದಯವಾಯಿತು. ಇಲ್ಲಿಯವರೆವಿಗೆ ಎಚ್.ನಾಗಪ್ಪ, ರಾಜುಗೌಡ, ಎಚ್.ಎಸ್.ಮಹದೇವ ಪ್ರಸಾದ್, ಸಿ.ಪುಟ್ಟರಂಗಶೆಟ್ಟಿ ಅವರು ಜಿಲ್ಲಾ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರನ್ನು ಹೊರತುಪಡಿಸಿದರೆ ಬೇರೆಯವರಿಗೆ ಅವಕಾಶವಾಗಿಲ್ಲ. ಹೊರಗಿನ ಜಿಲ್ಲೆಗಳಿಗೆ ಸೇರಿದವರೇ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಎಲ್ಲ ಸಮುದಾಯವರು ಜಿಲ್ಲೆ ಮಂತ್ರಿಯಾಗುವ ಅವಕಾಶ ದೊರೆತಿದೆ. ಆದರೆ, ಕೊಳ್ಳೇಗಾಲ ಮೀಸಲು ವಿಧಾನ ಕ್ಷೇತ್ರದಿಂದ ಆಯ್ಕೆಯಾದ ಯಾವ ಶಾಸಕರಿಗೂ ಜಿಲ್ಲಾ ಉಸ್ತುವಾರಿ ಆಗಲು ಅವಕಾಶ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ನನಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದ್ದೇನೆ ಎಂದರು.
1994 ಮತ್ತು 1999 ಎರಡು ಅವಧಿಗೆ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಇದೀಗ 2023ರಲ್ಲಿ ಅತ್ಯಧಿಕ ಮತ ಪಡೆದು ಮೀಸಲು ಕ್ಷೇತ್ರ ಶಾಸಕನಾಗಿ ಜನ ಸೇವೆ ಮಾಡುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯಾಗಿ 30 ವರ್ಷವಾದರೂ ಕೊಳ್ಳೇಗಾಲ ಮೀಸಲು ಕ್ಷೇತ್ರದ ಶಾಸಕನಿಗೆ ಕಾಂಗ್ರೆಸ್ ಸಚಿವ ಸ್ಥಾನ ನೀಡಿಲ್ಲ. ನನಗೂ ಸಚಿವ ಸ್ಥಾನ ನಿಭಾಯಿಸಲು ಶಕ್ತಿ ಇದೆ. ಹಾಗಾಗಿ 3 ಬಾರಿಗೆ ಶಾಸಕನಾಗಿರುವ ನನಗೆ ಸಚಿವ ಸ್ಥಾನ ನೀಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿಂದಿನ ಸಿಎಂ ಸಿದ್ದರಾಮಯ್ಯ, ಇಂದಿನ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದು ನನ್ನ ಮನವಿಗೆ ಪುರಸ್ಕರಿಸಲಿದ್ದಾರೆಂಬ ನಂಬಿಕೆ, ವಿಶ್ವಾಸ ನನಗಿದೆ ಎಂದರು.
ಪರಿಶಿಷ್ಟ ಜಾತಿ ಸಮುದಾಯದ ಪ್ರತಿನಿಧಿಯಾಗಿದ್ದ ಎಚ್.ಸಿ.ಮಹದೇವಪ್ಪ ಅವರನ್ನು ಯಾವ ಕಾರಣದಿಂದ ಸಚಿವ ಸಂಪುಟದ ಮೊದಲನೇ ಹಂತದ ಪಟ್ಟಿಯಲ್ಲಿ ಅವಕಾಶವಾಗಿಲ್ಲ ಎಂಬುದು ನನಗೆ ತಿಳಿದಿಲ್ಲ. ಅವರಿಗೆ ಸಚಿವ ಸ್ಥಾನ ಸಿಗಬೇಕೆಂಬುದು ಎಲ್ಲರ ಆಶಯವಾಗಿತ್ತು. ಸಚಿವ ಸ್ಥಾನ ಆಕಾಂಕ್ಷಿಯಾಗಿ ಪರಿಶಿಷ್ಟ ಜಾತಿ ಬಲಗೈ ಸೇರಿದ ನನ್ನನ್ನು ಸೇರಿದಂತೆ ಎಚ್.ಸಿ.ಮಹದೇವಪ್ಪ, ಮಳವಳ್ಳಿ ನರೇಂದ್ರಸ್ವಾಮಿ, ಪ್ರಸಾದ್ ಅಬ್ಬಯ್ಯ, ಶಿವಣ್ಣ, ಶ್ರೀನಿವಾಸ್ ಇದ್ದಾರೆ. 2028ರ ಚುನಾವಣೆ ಜಯ ಸಾಧಿಸುವ ನಿಟ್ಟಿನಲ್ಲಿ ಯಾರಿಗೆ ಸಚಿವ ಸ್ಥಾನ ನೀಡುವುದು ಸೂಕ್ತ ಎಂಬುದಾಗಿ ಕಾಂಗ್ರೆಸ್ ವರಿಷ್ಠರ ಚಿಂತನೆಯಾಗಿದ್ದು ತೀರ್ಮಾನ ಅವರೇ ಮಾಡಲಿದ್ದಾರೆ ಎಂದರು.
ಕೈಯಲ್ಲಿ ಬೆಣ್ಣೆ ಇಟ್ಕೊಂಡು ತುಪ್ಪ ಹುಡುಕಬಾರದು: ಎಚ್.ಸಿ.ಮಹದೇವಪ್ಪ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಜು.11ರಂದು ಬೆಂಗಳೂರಿನಲ್ಲಿ ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಅವರು ಕರೆ ನೀಡಿರುವ ಹೋರಾಟದ ಬಗ್ಗೆ ಶಾಸಕರು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಜ್ಞಾನ ಪ್ರಕಾಶ ಸ್ವಾಮೀಜಿ ಪಾತ್ರ ಹೆಚ್ಚಿದೆ. ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಗಟ್ಟಿ ಧ್ವನಿಯಾಗಿದ್ದಾರೆ. 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಬೇಕೆಂಬುದು ವರಿಷ್ಠರ ಮತ್ತು ಸ್ವಾಮೀಜಿ ಅವರ ಆಶಯವಾಗಿದೆ. ಸಚಿವ ಸ್ಥಾನದ ಮೊದಲ ಪಟ್ಟಿಯಲ್ಲಿ ಈಗಾಗಲೆ ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಮುನಿಯಪ್ಪ ಅವರಿಗೆ ಅವಕಾಶವಾಗಿದೆ. ಉಳಿದ ಸ್ಥಾನವನ್ನು ಸಮುದಾಯಕ್ಕೆ ಸೇರಿದ ಶಾಸಕರಿಗೆ ಹೆಚ್ಚಿನ ರೀತಿಯಲ್ಲಿ ನೀಡಬೇಕು ಎಂಬುದು ಸ್ವಾಮೀಜಿ ಅವರ ಒತ್ತಾಸೆಯಾಗಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ.
ಬೆಂಗಳೂರಿನಲ್ಲಿ ನಡೆಯಲಿರುವ ಹೋರಾಟ ಒಬ್ಬರ ಪರವಾಗಿಲ್ಲ. ಸಮುದಾಯದ ಪರವಾದ ಹೋರಾಟ ಎಂದು ಭಾವಿಸಿದ್ದೇನೆ. ಚಾಮರಾಜನಗರ ಜಿಲ್ಲೆಯಲ್ಲಿ ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪ ಹುಡುಕಿದಂತೆ ಆಗಬಾರದು. ಇದನ್ನು ಬೆಂಗಳೂರಿನಲ್ಲಿ ಕೈಗೊಂಡಿರುವ ಸಭೆಗೆ ಜಿಲ್ಲೆಯ ನಮ್ಮ ಸಮುದಾಯದ ಜನರನ್ನು ಸೇರಿಸಲು ಅವಣಿಸುತ್ತಿರುವ ಜಿಲ್ಲೆಯ ಪ್ರಮುಖ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net