ಪರಿಸರ ಉಳಿಸಿ, ಬೆಳೆಸುವ ದೃಢ ನಿರ್ಧಾರವಿರಲಿ

ಹನೂರಿನ ಶ್ರೀವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಎಂ.ಆರ್. ಮಂಜುನಾಥ್ ಉದ್ಘಾಟಿಸಿದರು. ಪ್ರತಿಭಾ, ರಾಜೇಂದ್ರನ್, ಸುರೇಶ್‌ನಾಯ್ಡು, ಮಧುಸೂದನ್, ಡಾ.ಮಹೇಶ್ ಚಿಕ್ಕಲ್ಲೂರು ಇತರರಿದ್ದರು.
ಹನೂರಿನ ಶ್ರೀವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಎಂ.ಆರ್. ಮಂಜುನಾಥ್ ಉದ್ಘಾಟಿಸಿದರು. ಪ್ರತಿಭಾ, ರಾಜೇಂದ್ರನ್, ಸುರೇಶ್‌ನಾಯ್ಡು, ಮಧುಸೂದನ್, ಡಾ.ಮಹೇಶ್ ಚಿಕ್ಕಲ್ಲೂರು ಇತರರಿದ್ದರು.
Published on
ಹನೂರು: ಪರಿಸರ ಮನುಕುಲದ ಸಂಪತ್ತು. ಹಾಗಾಗಿ ಪರಿಸರವನ್ನು ಉಳಿಸಿ, ಬೆಳೆಸಲು ಪ್ರತಿಯೊಬ್ಬರೂ ದೃಢ ನಿರ್ಧಾರ ಹೊಂದಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ಸಲಹೆ ನೀಡಿದರು.
ಪಟ್ಟಣದ ಶ್ರೀವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಜನಪರ ಸಾಹಿತ್ಯ ಪರಿಷತ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹನೂರು ಕ್ಷೇತ್ರ ಉಳಿದೆಲ್ಲ ಕ್ಷೇತ್ರಗಳಿಗಿಂತ ಭೌಗೋಳಿಕವಾಗಿ ವಿಭಿನ್ನವಾಗಿದ್ದು, ಶೇ.67ರಷ್ಟು ಪ್ರದೇಶ ಅರಣ್ಯದಿಂದ ಆವೃತವಾಗಿದೆ. ಇಲ್ಲಿ ಜನವಸತಿ ಪ್ರದೇಶವಿದ್ದು, ಮಾನವ-ವನ್ಯಜೀವಿ ಸಂಘರ್ಷದ ನಡುವೆಯೂ ಜನರು ಜೀವನ ನಡೆಸುತ್ತಿದ್ದಾರೆ. ಇಲ್ಲಿನ ಪ್ರಕೃತಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವರದಾನವಾಗಿದ್ದು, ಪರಿಸರ ಪ್ರೇಮವನ್ನು ಮೂಡಿಸುತ್ತದೆ. ಆದ್ದರಿಂದ ಶಿಕ್ಷಕರು ಮಕ್ಕಳಿಗೆ ಪರಿಸರದ ಮಹತ್ವವನ್ನು ತಿಳಿಸಿಕೊಡಬೇಕು. ಶಾಲಾ ವಾತಾವರಣದಲ್ಲಿ ಮಕ್ಕಳು ಸಸಿ ನೆಟ್ಟು ಪೋಷಿಸುವಂತಾಗಬೇಕು. 6ನೇ ತರಗತಿಯಿಂದ ಮೇಲ್ಪಟ್ಟ ಮಕ್ಕಳಲ್ಲಿ ಪಠ್ಯದ ಜತೆಗೆ ಪರಿಸರ ಮಹತ್ವವನ್ನು ತಿಳಿಸಿಕೊಡುವ ಪ್ರಾಯೋಗಿಕ ಚಟುವಟಿಕೆ ಆರಂಭವಾಗಬೇಕು. ಪಾಲಕರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ಸುತ್ತಮುತ್ತ ಪರಿಸರವನ್ನು ಕಾಪಾಡುವಂತೆ ತಿಳಿವಳಿಕೆ ನೀಡಬೇಕು. ಇದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ. ಇನ್ನು ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿನಿತ್ಯ ಪರಿಸರವನ್ನು ಸಂರಕ್ಷಿಸುವಂತಹ ಕೆಲಸವಾಗದಾಗ ಮಾತ್ರ ಪ್ರಕೃತಿಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಈ ಬಗ್ಗೆ ಮನದಟ್ಟು ಮಾಡಿಕೊಂಡು ಪರಿಸರ ಸಂರಕ್ಷಿಸಬೇಕು ಎಂದು ತಿಳಿಸಿದರು.
ಇದಕ್ಕೂ ಮೊದಲು ಶಾಸಕರು ಶಾಲಾ ಆವರಣದಲ್ಲಿ ಅಧಿಕಾರಿಗಳ ಜತೆಗೂಡಿ ಸಸಿ ನೆಟ್ಟು ನೀರೆರೆದರು. ಕಾರ್ಯಕ್ರಮದಲ್ಲಿ ಬಿಇಒ ಪ್ರತಿಭಾ, ಬಿಆರ್‌ಸಿ ವೆಂಕಟೇಶ್, ಪಪಂ ಮುಖ್ಯಾಧಿಕಾರಿ ರೇಖಾ, ಶಿಕ್ಷಣ ಸಂಸ್ಥೆ ವ್ಯವಸ್ಥಾಪಕ ರಾಜೇಂದ್ರನ್, ಕಾರ್ಯದರ್ಶಿ ಸುರೇಶ್‌ನಾಯ್ಡು, ಪ್ರಾಂಶುಪಾಲ ಮಧುಸೂದನ್, ಜನಪರ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮಹೇಶ್ ಚಿಕ್ಕಲ್ಲೂರು, ಎಲ್ಲರೊಳಗೊಂದಾಗು ಮಂಕುತಿಮ್ಮನ ಕಗ್ಗ ಟ್ರಸ್ಟ್ ಸಂಸ್ಥಾಪಕ ವಿನಯ್‌ಕುಮಾರ್, ಜ್ಞಾನೋದಯ ಟ್ರಸ್ಟ್‌ನ ಭಾಸ್ಕರ್ ಮತ್ತಿತರರಿದ್ದರು.
ಜಾಗೃತಿ ಜಾಥಾಕ್ಕೆ ಚಾಲನೆ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶುಕ್ರವಾರ ಪಟ್ಟಣದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಆಯೋಜಿಸಿದ್ಧ ಜಾಗೃತಿ ಜಾಥಾಕ್ಕೆ ತಹಸೀಲ್ದಾರ್ ಕೆ.ಎನ್.ಚೈತ್ರಾ ಚಾಲನೆ ನೀಡಿದರು. ಬಳಿಕ ಶಿಕ್ಷಕರು, ಪಪಂ ನೌಕರರು, ಪೌರ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತಾ ಸಾಗಿ ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು.
ಬಿಇಒ ಪ್ರತಿಭಾ, ಪಪಂ ಮುಖ್ಯಾಧಿಕಾರಿ ರೇಖಾ, ಬಿಆರ್‌ಸಿ ವೆಂಕಟೇಶ್, ಶಿಕ್ಷಣ ಸಂಯೋಜಕರಾದ ಅಶೋಕ್, ಮಹೇಶ್, ಮುಖ್ಯ ಶಿಕ್ಷಕ ಶಿವಮಲ್ಲು ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net