ಹನೂರು ತಾಲೂಕಿನ ಉದ್ದನೂರು ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಆರ್ ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು. ಉದ್ದನೂರು ಪ್ರಸಾದ್, ನಾಗಣ್ಣ, ಶಿವರುದ್ರ, ಕ್ಯಾತಯ್ಯ ಇತರರಿದ್ದರು.
ಗ್ರಾಮೀಣ ಪ್ರದೇಶದ ಜನರಿಗೆ ಮೂಲ ಸೌಕರ್ಯ ಒದಗಿಸುವುದರ ಜತೆಗೆ ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ತಾಲೂಕಿನ ಉದ್ದನೂರು ಗ್ರಾಮದಲ್ಲಿ ಶನಿವಾರ 1.26 ಕೋಟಿ ರೂ. ವೆಚ್ಚದಲ್ಲಿನ ಸಿಮೆಂಟ್ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರಸ್ತೆಗಳ ಅಭಿವೃದ್ಧಿ ಗ್ರಾಮಾಭಿವೃದ್ಧಿಗೆ ಪೂರಕ. ಆದರೆ ಉದ್ದನೂರು ಗ್ರಾಮದಲ್ಲಿ ರಸ್ತೆ ಹಾಗೂ ಮುಖ್ಯ ರಸ್ತೆ ಹದಗೆಟ್ಟಿದ್ದ ಕಾರಣ ಅಭಿವೃದ್ಧಿಗೆ ತೊಡಕ್ಕಾಗಿ ಪರಿಣಮಿಸಿದೆ. ರಸ್ತೆ ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಹಾಗಾಗಿ 1.26 ಕೋಟಿ ರೂ.ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಗ್ರಾಮದ ದೊಡ್ಡಕೆರೆ ಅಭಿವೃದ್ಧಿಗೆ 20 ಲಕ್ಷ ರೂ. ಅನುದಾನ ನೀಡಲಾಗಿದ್ದು, ಕೆಲಸ ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ. ಗ್ರಾಮದಿಂದ ಹನೂರಿಗೆ ಸಂಪರ್ಕ ಕಲ್ಪಿಸುವ ಹಾಳಾಗಿರುವ ಮುಖ್ಯ ರಸ್ತೆ ಹಾಗೂ ಹುಲುಸುಗುಡ್ಡೆ ಸಂಪರ್ಕ ರಸ್ತೆ ಅಭಿವೃದ್ಧಿಗೆ ಗಮನ ಹರಿಸಲಾಗಿದೆ. ಗ್ರಾಮದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಪಿಎಸಿಸಿ ನಿರ್ದೇಶಕ ಲಿಂಗೇಗೌಡ, ಮುಖಂಡರಾದ ನಾಗಣ್ಣ, ಶಿವರುದ್ರ, ಕ್ಯಾತಯ್ಯ, ಕೃಷ್ಣನಾಯ್ಕ, ಸೋಮಣ್ಣ, ಕೃಷ್ಣಮೂರ್ತಿ, ಗೋವಿಂದ, ಶಿವಣ್ಣ, ಪುಟ್ಟಸ್ವಾಮಿ ಹಾಗೂ ಇನ್ನಿತರರಿದ್ದರು.