ಮಲೆಮಹದೇಶ್ವರ ವನ್ಯಜೀವಿ ಧಾಮದ ವತಿಯಿಂದ ದಿನ್ನಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಚಿಣ್ಣರ ವನದರ್ಶನಕ್ಕೆ ಕರೆದೊಯ್ಯಲಾಯಿತು. ವಿರಾಜ್ ಹೊಸೂರ್, ನಾಗರಾಜು, ವಿನಾಯಕ, ಇತರರು ಇದ್ದರು.
ಹನೂರು: ಮಲೆಮಹದೇಶ್ವರ ವನ್ಯಜೀವಿ ಧಾಮದ ವತಿಯಿಂದ ಮಂಗಳವಾರ ತಾಲೂಕಿನ ದಿನ್ನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಚಿಣ್ಣರ ವನದರ್ಶನಕ್ಕೆ ಕರೆದೊಯ್ಯಲಾಯಿತು.
ಪಟ್ಟಣದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಶಿಕ್ಷಕರೊಂದಿಗೆ ಆಗಮಿಸಿದ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಅಜ್ಜೀಪುರ ಮಾರ್ಗದಲ್ಲಿನ ಸಸ್ಯ ಕ್ಷೇತ್ರಕ್ಕೆ ಕರೆದೊಯ್ಯಲಾಯಿತು. ಬಳಿಕ ಸಸಿ ಬೆಳೆಸುವ ವಿಧಾನವನ್ನು ತಿಳಿಸಲಾಯಿತು.
ಈ ವೇಳೆ ಎಸಿಎಫ್ ವಿರಾಜ್ ಹೊಸೂರ್ ಮಾತನಾಡಿ, ಅರಣ್ಯ ಮನುಕುಲದ ಸಂಪತ್ತು. ಇದರ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯ. ಇದರಿಂದ ಉತ್ತಮ ಪರಿಸರವನ್ನು ಹೊಂದಬಹುದಾಗಿದೆ. ಅರಣ್ಯ ಹಾಗೂ ವನ್ಯಜೀವಿಗಳು ಜೀವಜಲದ ಮೂಲಗಳೇ ಹೊರತು ಆದಾಯದ ಮೂಲವಲ್ಲ. ಮಾಲಿನ್ಯ ಮುಕ್ತ ಪರಿಸರದ ಭವಿಷ್ಯಕ್ಕೆ ಅರಣ್ಯ ಸಂರಕ್ಷಣೆ ಅಗತ್ಯ. ಈ ದೆಸೆಯಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಪ್ರತಿಯೊಬ್ಬರನ್ನು ಭವಿಷ್ಯದ ಪರಿಸರ ಸ್ನೇಹಿ ನಾಗರಿಕರನ್ನಾಗಿಸುವ ಹಾಗೂ ಅರಣ್ಯದ ಅಭಿವೃದ್ಧಿಯಲ್ಲಿ ಪಾಲುದಾರರನ್ನಾಗಿಸುವ ಉದ್ದೇಶದಿಂದ ಇಲಾಖೆ ವತಿಯಿಂದ ಚಿಣ್ಣರ ವನ ದರ್ಶನ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಆದ್ದರಿಂದ ಪ್ರತಿಯೊಬ್ಬರೂ ಇದರ ಪ್ರಯೋಜನವನ್ನು ಪಡೆದುಕೊಂಡು ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಬಳಿಕ ವಿದ್ಯಾರ್ಥಿಗಳನ್ನು ಗೋಪಿನಾಥಂ ಬಳಿಯ ಎರಿಕಯಂಹಳ್ಳ ಅರಣ್ಯ ಪ್ರದೇಶದಲ್ಲಿ ವೀರಪ್ಪನ್‌ನಿಂದ ಹತ್ಯೆಯಾದ ಸ್ಥಳದಲ್ಲಿ ನಿರ್ಮಿಸಿರುವ ಹುತಾತ್ಮ ಡಿಸಿಎಫ್ ಶ್ರೀನಿವಾಸನ್ ಅವರ ಸ್ಮಾರಕ ಹಾಗೂ ಈ ಭಾಗದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಅರಣ್ಯ ಮಹತ್ವದ ಬಗ್ಗೆ ಮಾಹಿತಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಆರ್‌ಎಫ್‌ಒ ನಾಗರಾಜು, ಡಿಆರ್‌ಎಫ್‌ಒಗಳಾದ ವಿನಾಯಕ, ಅಶೋಕ್, ಸುರೇಶ್, ಶಿಕ್ಷಕರು ಹಾಗೂ ಇಲಾಖೆಯ ಸಿಬ್ಬಂದಿ ಇದ್ದರು.