ಬಂಡೀಪುರದಲ್ಲಿ ಫೈರ್‌ಲೈನ್ ನಿರ್ಮಾಣ ಕಾರ್ಯ ಶುರು

ಬಂಡೀಪುರ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಫೈರ್‌ಲೈನ್ ನಿರ್ಮಾಣ ಮಾಡಲು ಕಳೆಗಳನ್ನು ತೆರವುಗೊಳಿಸುತ್ತಿರುವುದು.
ಬಂಡೀಪುರ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಫೈರ್‌ಲೈನ್ ನಿರ್ಮಾಣ ಮಾಡಲು ಕಳೆಗಳನ್ನು ತೆರವುಗೊಳಿಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಅಗ್ನಿ ಅವಘಡದಿಂದ ಕಾಡು ರಕ್ಷಣೆಗೆ ಅರಣ್ಯ ಇಲಾಖೆ ಕ್ರಮ
  • ಕಳೆಗಳನ್ನು ಬೇರು ಸಮೇತ ತೆರವು
ಗುಂಡ್ಲುಪೇಟೆ: ಬೆಂಕಿ ಅವಘಡದಿಂದ ಬಂಡೀಪುರವನ್ನು ರಕ್ಷಿಸಲು ಅರಣ್ಯ ಇಲಾಖೆ ಡಿಸೆಂಬರ್ ಆರಂಭದಲ್ಲಿಯೇ ಫೈರ್‌ಲೈನ್ ನಿರ್ಮಾಣ ಕಾರ್ಯ ಆರಂಭಿಸಿದೆ. ಜತೆಗೆ ಅರಣ್ಯದಲ್ಲಿ ಗರಿಕೆ ಹುಲ್ಲಿನ ಬೆಳವಣಿಗೆಗೆ ಮಾರಕವಾಗುವ ಕಳೆ ಗಿಡಗಳನ್ನು ಬೇರು ಸಮೇತ ತೆರವುಗೊಳಿಸುವ ಕಾರ್ಯ ನಡೆಸಿದೆ.
ಈ ಬಾರಿ ಸಾಕಷ್ಟು ಮಳೆಬಿದ್ದ ಪರಿಣಾಮ ಅರಣ್ಯ ಪ್ರದೇಶದ ಎಲ್ಲ ಕೆರೆಕಟ್ಟೆಗಳಲ್ಲಿ ನೀರಿನ ಸಂಗ್ರಹವಿದೆ. ಅಲ್ಲದೆ ಆಗಾಗ ಬೀಳುತ್ತಿರುವ ಸಣ್ಣ ಪುಟ್ಟ ಮಳೆಯಿಂದ ಹುಲ್ಲು ಹಾಗೂ ಮರಗಿಡಗಳು ಇನ್ನೂ ಹಸಿರಾಗಿದ್ದರೂ ಅರಣ್ಯ ಇಲಾಖೆ ಬೆಂಕಿ ಅವಘಡದ ಬಗ್ಗೆ ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಡಿಸೆಂಬರ್ ಮೊದಲ ವಾರದಿಂದಲೇ ಎಲ್ಲ 13 ವಲಯಗಳಲ್ಲಿಯೂ 2850 ಕಿಮೀ ಉದ್ದಕ್ಕೂ ಲಾಂಟಾನ ಮುಂತಾದ ಕಳೆಗಳನ್ನು ತೆಗೆದು ಫೈರ್‌ಲೈನ್ ನಿರ್ಮಾಣ ಮಾಡಲಾಗುತ್ತಿದೆ. ಇಲಾಖೆಯ ಸಿಬ್ಬಂದಿ ಜತೆಗೆ ಫೈರ್ ವಾಚರ್‌ಗಳು ಹುಲಿ ಯೋಜನೆಯ ಅರಣ್ಯ ಪ್ರದೇಶಗಳ ನಿಗದಿತ ಸ್ಥಳಗಳಲ್ಲಿ ಕಳೆಗಳನ್ನು ತೆರವುಗೊಳಿಸಲಾರಂಭಿಸಿದ್ದಾರೆ.
ಬಂಡೀಪುರ ಹುಲಿ ಯೋಜನೆಯ ಅರಣ್ಯ ಪ್ರದೇಶದಲ್ಲಿ ತಮಿಳುನಾಡು ಹಾಗೂ ಕೇರಳವನ್ನು ಸಂಪರ್ಕಿಸುವ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿದ್ದು ಇಲ್ಲಿ ಪ್ರತಿದಿನವೂ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಆದ್ದರಿಂದ ಅರಣ್ಯ ಇಲಾಖೆ ಪ್ರತಿ ವರ್ಷವೂ ರಸ್ತೆ ಬದಿಗಳಲ್ಲಿ ಬೆಳೆದಿರುವ ಪೊದೆಗಳನ್ನು ತೆರವುಗೊಳಿಸುತ್ತಿದ್ದರೂ ಮತ್ತೆ ಬೆಳೆಯುತ್ತಿವೆ. ಇದರಿಂದ ರಸ್ತೆ ಬದಿಯ ಪೊದೆಗಳ ಮರೆಯಲ್ಲಿರುವ ವನ್ಯಜೀವಿಗಳು ವಾಹನಗಳ ಮೇಲೆ ದಾಳಿಗೆ ಮುಂದಾಗುತ್ತಿವೆ. ರಸ್ತೆ ದಾಟಲು ಮುಂದಾಗುವ ವನ್ಯಜೀವಿಗಳು ವಾಹನಗಳಿಗೆ ಕಾಣದೆ ಅಪಘಾತಗಳು ಸಂಭವಿಸುತ್ತವೆ. ಗೊಬ್ಬರದ ಗಿಡ ಎಂದು ಕರೆಯಲಾಗುವ ಸಸಿಗಳು ಮರಗಳಾಗಿ ಇಡೀ ಅರಣ್ಯವನ್ನು ವ್ಯಾಪಿಸುತ್ತಿದ್ದು ಇವುಗಳ ಬುಡದಲ್ಲಿ ಹುಲ್ಲು ಗರಿಕೆ ಸೇರಿದಂತೆ ಯಾವುದೇ ಸಸಿಗಳನ್ನು ಬೆಳೆಯಲು ಬಿಡುತ್ತಿಲ್ಲ. ಇದರಿಂದ ಸಸ್ಯಾಹಾರಿ ವನ್ಯಜೀವಿಗಳಿಗೆ ಮೇವಿನ ಕೊರತೆಯಾಗುತ್ತಿದೆ
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಬಾರಿ ಗೊಬ್ಬರದ ಗಿಡಗಳನ್ನು ಬುಡಸಮೇತ ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದೆ. ಎಂ ಆ್ಯಂಡ್ ಯು ಎಂಬ ಸಂಸ್ಥೆಯ ಸಹಕಾರದಿಂದ ಸಣ್ಣ ಮತ್ತು ದೊಡ್ಡ ಕಳೆಗಳನ್ನು ತೆರವುಗೊಳಿಸುತ್ತಿದೆ. ವ್ಯಾಪಕವಾಗಿ ಬೆಳೆದಿರುವ ಗಿಡಗಳ ಕಾಂಡದವರೆಗೂ ಕತ್ತರಿಸಿ ಬುಡವನ್ನು ಜೆಸಿಬಿಗಳಿಂದ ಬೇರು ಸಮೇತ ತೆಗೆಯಲಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net