ಭಯದ ನಡುವೆಯೇ ಮಾದಪ್ಪ ಬೆಟ್ಟಕ್ಕೆ ಭಕ್ತರ ಯಾತ್ರೆ

ಕಾವೇರಿ ನದಿಯನ್ನು ದಾಟಿ ಅರಣ್ಯ ಪ್ರದೇಶದ ಮೂಲಕ ಮಲೆಮಹದೇಶ್ವರ ಬೆಟ್ಟಕ್ಕೆ ಬುಧವಾರ ಸಾಗಿದ ಕಾಲ್ನಡಿಗೆ ಭಕ್ತರು.
ಕಾವೇರಿ ನದಿಯನ್ನು ದಾಟಿ ಅರಣ್ಯ ಪ್ರದೇಶದ ಮೂಲಕ ಮಲೆಮಹದೇಶ್ವರ ಬೆಟ್ಟಕ್ಕೆ ಬುಧವಾರ ಸಾಗಿದ ಕಾಲ್ನಡಿಗೆ ಭಕ್ತರು.
Published on

ಪ್ರಮುಖ ಮುಖ್ಯಾಂಶಗಳು

  • ಮಹಾಶಿವರಾತ್ರಿ ಜಾತ್ರೆಗೆ ಪಾದಯಾತ್ರೆ ಆರಂಭ
  • ಚಿರತೆ ಸೆರೆಗೆ ಮುಂದಾದ ಅರಣ್ಯ ಇಲಾಖೆ
ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ತಾಳುಬೆಟ್ಟದ ಮಾರ್ಗದಲ್ಲಿ ಚಿರತೆ ಹಾವಳಿ ಭಯದ ನಡುವೆಯೇ ಭಕ್ತರು ಬುಧವಾರ ಬೆಟ್ಟಕ್ಕೆ ಸಾಗಿದರು.
ಮ.ಬೆಟ್ಟದಲ್ಲಿ ಫೆ.14 ರಿಂದ 18ರವರೆಗೆ ಮಹಾಶಿವರಾತ್ರಿ ಜಾತ್ರೆ ಜರುಗಲಿದೆ. ಕಾವೇರಿ ನದಿ ದಾಟಿ ಶಾಗ್ಯ ಮಾರ್ಗವಾಗಿ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರ ಯಾತ್ರೆ ಮಂಗಳವಾರವೇ ಆರಂಭವಾಗಿದ್ದು, ಸಾವಿರಾರು ಭಕ್ತರು ತೆರಳಿದರು. ಆದರೆ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ತಾಳುಬೆಟ್ಟದ ಮಾರ್ಗದಲ್ಲಿ ಕಾಲ್ನಡಿಗೆಯ ಭಕ್ತರೊಬ್ಬರನ್ನು ಚಿರತೆಯೊಂದು ಬಲಿ ಪಡೆದಿದ್ದ ಬೆನ್ನಲ್ಲೇ ಮಂಗಳವಾರ ಶ್ರೇಯಸ್ ಎಂಬ 8 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದ್ದು, ಭಕ್ತರನ್ನು ಬೆಚ್ಚಿ ಬೀಳಿಸಿದೆ.
ಬುಧವಾರ ರಾಮನಗರ, ಕನಕಪುರ, ಚನ್ನಪಟ್ಟಣ, ಮಾಗಡಿ, ಬಿಡದಿ, ಕೆಂಗೇರಿ ಇತರ ಕಡೆಗಳಿಂದ ಅಪಾರ ಭಕ್ತರು ಕಾವೇರಿ ನದಿ ದಾಟಿ ಅರಣ್ಯ ಪ್ರದೇಶದ ಮೂಲಕ ಸಾಗರೋಪಾದಿಯಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿರುವುದು ಒಂದೆಡೆಯಾದರೆ, ಇತ್ತ ಕೊಳ್ಳೇಗಾಲ-ಹನೂರು ಮಾರ್ಗವಾಗಿ ಚಾಮರಾಜನಗರ, ಮೈಸೂರು, ಮಂಡ್ಯ, ನರಸೀಪುರ, ಮಳವಳ್ಳಿ ಮೊದಲಾದ ಊರುಗಳಿಂದ ಸಾವಿರಾರು ಪಾದಯಾತ್ರಿಗಳು ತೆರಳಿದರು. ಇದರಲ್ಲಿ ಬಹುತೇಕ ಭಕ್ತರು ಭಯದಿಂದಲೇ ಮ.ಬೆಟ್ಟಕ್ಕೆ ಸಾಗಿದರೆ, ಕೆಲ ಭಕ್ತರಲ್ಲಿ ಮಾದಪ್ಪನ ಕಾಪಾಡುತ್ತಾನೆ ಎಂಬ ನಂಬಿಕೆ ಮನದಲ್ಲಿಟ್ಟುಕೊಂಡು ತೆರಳಿದರು. ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಕಾವೇರಿ ನದಿ ದಡದಲ್ಲಿ ಎಸ್‌ಡಿಆರ್‌ಎಫ್, ಡಿಆರ್‌ಎಫ್, ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ. ಜತೆಗೆ ತಾಳುಬೆಟ್ಟದ ಮಾರ್ಗದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದ್ದು, ಗಸ್ತು ಮಾಡಲಾಗುತ್ತಿದೆ.
ಭಕ್ತರ ಸುರಕ್ಷತೆಗೆ ಅಗತ್ಯ ಕಟ್ಟೆಚ್ಚರ: ಅರಣ್ಯ ಇಲಾಖೆ ಭಕ್ತರು ಸುರಕ್ಷತೆಯ ದೃಷ್ಟಿಯಿಂದ 8 ತಂಡಗಳನ್ನು ಮಾರ್ಗದ ಅಲ್ಲಲ್ಲಿ ನಿಯೋಜಿಸಿದೆ. ಆದರೆ ಮಂಗಳವಾರ ತಾಳುಬೆಟ್ಟದ ಮಾರ್ಗದಲ್ಲಿ ಮತ್ತೆ ಚಿರತೆ ದಾಳಿ ಮಾಡಿದೆ. ಇದು ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿದೆ. ಘಟನೆ ನಡೆದ ಕೆಲ ಗಂಟೆಗಳ ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಡ್ರೋನ್ ಕ್ಯಾಮರಾದಲ್ಲಿ ಚಿರತೆ ಇರುವುದು ದೃಢಪಟ್ಟಿದ್ದು, ಚಿರತೆ ಸೆರೆಗೆ ಅಗತ್ಯ ಕ್ರಮವಹಿಸಿದ್ದಾರೆ. ಕಾಲ್ನಡಿಗೆಯ ಭಕ್ತರು ಮೆಟ್ಟಿಲುಗಳ ಮೂಲಕ ತೆರಳದೇ ಮುಖ್ಯ ರಸ್ತೆ ಬದಿಯಲ್ಲಿ ತೆರಳುವಂತೆ ಅರಣ್ಯ ಇಲಾಖೆ ಭಕ್ತರಲ್ಲಿ ಅರಿವು ಮೂಡಿಸುತ್ತಿದ್ದು, ಭಕ್ತರ ಸುರಕ್ಷತೆಯ ಬಗ್ಗೆ ಕಟ್ಟೆಚ್ಚರ ವಹಿಸಿದೆ.
ಮಾದಪ್ಪನನ್ನು ನಂಬಿ ತೆರಳುತ್ತಿರುವ ಭಕ್ತರು: ಮಹಾ ಶಿವರಾತ್ರಿ ಜಾತ್ರೆಗೆ ಮ.ಬೆಟ್ಟಕ್ಕೆ ಲಕ್ಷಾಂತರ ಭಕ್ತರು ತಂಡೋಪತಂಡವಾಗಿ ಕಾಲ್ನಡಿಗೆಯಲ್ಲಿ ತೆರಳುವುದು ವಾಡಿಕೆ. ಹಾಗಾಗಿ ಶಿವರಾತ್ರಿ ವೇಳೆ ಕಾಡು ಪ್ರಾಣಿಗಳಿಂದ ಪ್ರಾಣಹಾನಿ ಸಂಭವಿಸಿರಲಿಲ್ಲ. ಆದರೆ ಇದೀಗ ಚಿರತೆ ಹಾವಳಿಯಿಂದ ಭಕ್ತರು ಭಯಭೀತರಾಗಿದ್ದಾರೆ. ಆದರೂ ಗುಂಪಾಗಿ ತೆರಳುತ್ತಿರುವುದರಿಂದ ಹಾಗೂ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಈ ಮಾರ್ಗದಲ್ಲಿ ಕಟ್ಟೆಚ್ಚರ ವಹಿಸಿರುವುದರಿಂದ ಭಕ್ತರು ಜಯಘೋಷವನ್ನು ಮೊಳಗಿಸುತ್ತಾ ಮಾದಪ್ಪನನ್ನು ನಂಬಿ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾರೆ.
ಅಗತ್ಯ ಕ್ರಮಕ್ಕೆ ಸೂಚನೆ: ಚಿರತೆ ಸೆರೆಗೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮ ವಹಿಸಿದ್ದಾರೆ. ಬುಧವಾರ ಸ್ಥಳಕ್ಕೆ ಸಿಸಿಎಫ್ ಮಾಲತಿಪ್ರಿಯ ಅವರು ಆಗಮಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮಕ್ಕೆ ಸೂಚನೆ ನೀಡಿದರು.
ಒಟ್ಟಿನಲ್ಲಿ ತಾಳುಬೆಟ್ಟದ ಮಾರ್ಗದಲ್ಲಿ ಚಿರತೆ ದಾಳಿಯಿಂದ ಭಕ್ತರು ಆತಂಕಕ್ಕೆ ಒಳಗಾಗಿದ್ದು, ಮ.ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದು ಹಾಗೂ ಹರಕೆ ಹೊತ್ತಿರುವ ವಿವಿಧ ಸೇವಾ ಕಾರ್ಯಗಳಲ್ಲಿ ಭಾಗಿಯಾಗಿ ಮನೆಗೆ ಸೇರಬೇಕು ಎನ್ನುವ ತವಕ ಬಹುತೇಕ ಭಕ್ತರ ಮನದಲ್ಲಿದೆ ಎಂದು ಹೇಳಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net