ಸರ್ಕಾರದಿಂದ ವಿಶೇಷ ಅನುದಾನ ತಂದು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ನೂತನ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಂಗಳವಾರ ಜಿಲ್ಲೆಗೆ ಆಗಮಿಸಿದ ಅವರು ಕೊಳ್ಳೇಗಾಲ ಪಟ್ಟಣದದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮಾತನಾಡಿದರು.
ಮಳೆ ಅಭಾವದಿಂದ ಜಿಲ್ಲೆಯಲ್ಲಿ ಬರ ಹಾಗೂ ಕುಡಿಯುವ ನೀರಿನ ಪರಿಸ್ಥಿತಿಯನ್ನು ಜಿಲ್ಲೆಯ ಶಾಸಕರ ಜತೆ ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ. ಕೊಳ್ಳೇಗಾಲ, ಗುಂಡ್ಲುಪೇಟೆ, ಚಾಮರಾಜನಗರ ಪಟ್ಟಣ ಅಭಿವೃದ್ಧಿಯಾಗಬೇಕಿದೆ. ಈ ಪಟ್ಟಣಗಳು ಸ್ವಂತಿಕೆಯಿಂದ ಅಭಿವೃದ್ಧಿಗೊಳ್ಳಲು ಆರ್ಥಿಕ ಮೂಲಗಳಿಲ್ಲ. ಹಾಗಾಗಿ ಸರ್ಕಾರದಿಂದ ವಿಶೇಷ ಅನುದಾನ ಅಗತ್ಯವಿದೆ. ಚಾಮರಾಜನಗರ, ಹನೂರಿನಲ್ಲಿ ನೀರಿನ ಸಮಸ್ಯೆಯಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ ಭಾಗಶಃ ನೀರಿನ ಸಮಸ್ಯೆಯಿದೆ. ಈ ಬಗ್ಗೆ ಕ್ರಮವಹಿಸಲಾಗುವುದು ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯವಿದೆ. ನನಗೆ ಸಚಿವ ಸ್ಥಾನ ದೊರೆಯಲು ನನ್ನ 4 ಬಾರಿ ಶಾಸಕನಾಗಿರುವ ಅನುಭವ ಹಾಗೂ ಉಪ್ಪಾರ ಸಮಾಜದ ಏಕೈಕ ಶಾಸಕ ಎಂಬುದು ಇರಬಹುದು. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.
ಹಾಸ್ಯ ಚಟಾಕಿ ಹಾರಿಸಿದ ಸಚಿವ:
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ ಶಾಸಕರಿಗೆ ಸಚಿವ ಸ್ಥಾನ ದೊರೆತಿಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಯಾವುದೇ ಅಧಿಕಾರ ಬೇಕೆಂದರೆ ಪ್ರಯತ್ನ ಮಾಡಬೇಕು. ಹಣ್ಣು ಬೇಕೆಂದರೆ ಮರಕ್ಕೆ ಕಲ್ಲು ಒಡೆಯಬೇಕು. ಬಹುಕಾಲದಿಂದ ಕಲ್ಲು ಒಡೆದು ಪ್ರಯತ್ನಿಸಿದ್ದರಿಂದ ನನಗೆ ಹಣ್ಣು ಸಿಕ್ಕಿದೆ ಅಷ್ಟೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ನಾವೆಲ್ಲರೂ ಕಾಂಗ್ರೆಸ್ ಪಕ್ಷದವರು ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತೇವೆ ಎಂದರು.
ಆತ್ಮೀಯವಾಗಿ ಸ್ವಾಗತಿಸಿದ ಶಾಸಕ:
ಸಚಿವ ಸಿ.ಪುಟ್ಟರಂಗಶೆಟ್ಟಿ ಅವರನ್ನು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಸಚಿವರ ಮೇಲೆ ಹೂಮಳೆ ಗೈದರು. ಬಳಿಕ ಮಾತನಾಡಿದ ಅವರು, ಎರಡನೇ ಬಾರಿಯ ಸಂಪುಟ ವಿಸ್ತರಣೆ ವೇಳೆ 60ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ರೇಸ್‌ನಲ್ಲಿ ಮೂರಕ್ಕಿಂತಲೂ ಹೆಚ್ಚು ಬಾರಿ ಗೆದ್ದವರು ಇದ್ದರು. ಅಂತೆಯೇ, ನಾನು ಪೈಪೋಟಿ ನೀಡಿದ್ದೆ. ಮುಂದಿನ ವರ್ಷ ಚಾಮರಾಜನಗರ ಜಿಲ್ಲೆಯಾಗಿ 30 ವರ್ಷ ತುಂಬಲಿದೆ. ಹಿಂದೆ ಕೊಳ್ಳೇಗಾಲ ಶಾಸಕರಾಗಿದ್ದ ಎನ್.ಮಹೇಶ್ ಅವರು ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದ ಅಲ್ಪಾವಧಿಗೆ ಮಂತ್ರಿ ಆಗಿದ್ದರು. ಇದನ್ನು ಹೊರತುಪಡಿಸಿದರೆ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಗೆದ್ದ ಯಾವ ಶಾಸಕರಿಗೂ ಮಂತ್ರಿ ಸ್ಥಾನ ದೊರೆತಿಲ್ಲ. ನಾನು ಮೂರು ಬಾರಿ ಶಾಸನಾಗಿರುವ ಅನುಭವವಿದೆ. ಹಾಗಾಗಿ ಅವಕಾಶ ಕೊಡಿ ಎಂದು ವರಿಷ್ಠರಿಗೆ ಮನವಿ ಮಾಡಿದ್ದೆ. ನನ್ನ ಹೆಸರು ಮೊನ್ನೆವರೆಗೂ ಚರ್ಚೆಯಲ್ಲಿತ್ತು. ಆದರೆ, ಅಂತಿಮವಾಗಿ ನನ್ನ ಹೆಸರು ಪ್ರಕಟವಾಗಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಅವರೊಂದಿಗೆ ಕೈ ಜೋಡಿಸುವೆ ಎಂದು ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ಉಪ್ಪಾರ ನಿಗಮ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಹನೂರು ಬ್ಲಾಕ್ ಅಧ್ಯಕ್ಷ ಮುಕುಂದ ವರ್ಮ, ನಗರಸಭೆ ಮಾಜಿ ಅಧ್ಯಕ್ಷೆ ರೇಖಾ, ಮಾಜಿ ಸದಸ್ಯರು, ಮುಖಂಡರು ಇದ್ದರು.