ಹಾಸ್ಟೆಲ್, ಇಂದಿರಾ ಕ್ಯಾಂಟೀನ್, ಬಳೇಮಂಟಪಕ್ಕೆ ಡಿಸಿ ಭೇಟಿ

ಯಳಂದೂರು ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಕ್ಕೆ ಜಿಲ್ಲಾಧಿಕಾರಿ ಶ್ರೀರೂಪಾ ಬುಧವಾರ ಭೇಟಿ ನೀಡಿ ನೌಕರರಿಂದ ಮಾಹಿತಿ ಪಡೆದರು.
ಯಳಂದೂರು ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಕ್ಕೆ ಜಿಲ್ಲಾಧಿಕಾರಿ ಶ್ರೀರೂಪಾ ಬುಧವಾರ ಭೇಟಿ ನೀಡಿ ನೌಕರರಿಂದ ಮಾಹಿತಿ ಪಡೆದರು.
Published on
ಯಳಂದೂರು: ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯ, ಇಂದಿರಾ ಕ್ಯಾಂಟೀನ್ ಹಾಗೂ ಐತಿಹಾಸಿಕ ಬಳೇಮಂಟಪಕ್ಕೆ ಜಿಲ್ಲಾಧಿಕಾರಿ ಶ್ರೀರೂಪಾ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಟ್ಟಣದ ಬಳೇಪೇಟೆಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ದುರಸ್ತಿ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವ ಸಂಬಂಧ ಅಸಮಾಧಾನಗೊಂಡರು. ಕಾಮಗಾರಿ ಆರಂಭಗೊಂಡು ಹಲವು ತಿಂಗಳಾದರೂ ಮುಗಿದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಇಲ್ಲಿನ ಕಿಟಕಿಗಳನ್ನು ದುರಸ್ತಿಗೊಳಿಸಿ ಶುಚಿತ್ವ ಕಾಪಾಡಬೇಕು, ಸುಣ್ಣ-ಬಣ್ಣ ಬಳಿಯುವ ಕೆಲಸವನ್ನು ಬೇಗ ಪೂರ್ಣಗೊಳಿಸಬೇಕು. ವಾರದೊಳಗೆ ಕಾಮಗಾರಿ ಮುಗಿಸಬೇಕು ಎಂದು ಗಡುವು ನೀಡಿದರು.
ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಬೆಳಗ್ಗೆ ವಿದ್ಯಾರ್ಥಿಗಳಿಗೆ ತಿಂಡಿ ನೀಡದಿರುವ ಕುರಿತು ಅಡುಗೆ ಸಹಾಯಕರಿಂದ ಮಾಹಿತಿ ಪಡೆದರು. ನಂತರ ಇಲ್ಲಿನ ವಾರ್ಡನ್‌ಗಳಿಗೆ ಎಚ್ಚರಿಕೆ ನೀಡಿದರು. ಆದರೆ, ವಿದ್ಯಾರ್ಥಿಗಳು ಇಲ್ಲಿಗೆ ಬಂದಿಲ್ಲದ ಕಾರಣ ಅಡುಗೆ ಮಾಡಿಲ್ಲ ಎಂದು ವಾರ್ಡನ್ ಮಾಹಿತಿ ನೀಡಿದರು.
ಪಟ್ಟಣದಲ್ಲಿರುವ ಬಳೇಮಂಟಪ ಆಕರ್ಷಕ ಕೆತ್ತನೆಯಿಂದ ಕೂಡಿದೆ. ಇದರ ಸುತ್ತ ಅಶುಚಿತ್ವ ಇದ್ದು ಶುಚಿತ್ವ ಕಾಪಾಡಬೇಕು. ಮಂಟಪ ಇರುವುದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊರತೆ ಇದ್ದು ಇಲ್ಲಿಗೆ ನಾಮಫಲಕ ಅಳವಡಿಸಬೇಕು. ಈ ಬಗ್ಗೆ ಪ್ರಚಾರಕ್ಕೆ ಆದ್ಯತೆ ನೀಡಬೇಕು ಎಂದು ಇಲ್ಲಿನ ಅರ್ಚಕ ಮಹೇಶ್, ಚಂದ್ರಮೌಳಿ, ದೀಕ್ಷಿತ್, ರಾಮಣ್ಣ ಸೇರಿದಂತೆ ಹಲವರು ಮನವಿ ಮಾಡಿದರು. ಈ ಬಗ್ಗೆ ಕ್ರಮ ವಹಿಸುವುದಾಗಿ ಡಿಸಿ ಭರವಸೆ ನೀಡಿದರು.
ನಂತರ ಪಟ್ಟಣ ಪಂಚಾಯಿತಿ ಬಳಿ ಇರುವ ಇಂದಿರಾ ಕ್ಯಾಂಟೀನ್‌ಗೆ ಡಿಸಿ ಭೇಟಿ ನೀಡಿ, ಆಹಾರ ಗುಣಮಟ್ಟ ಪರಿಶೀಲಿಸಿದರು. ಗುಣಮಟ್ಟದಲ್ಲಿ ಆಹಾರ ತಯಾರಿಕೆ ಮಾಡುತ್ತಿಲ್ಲ. ಸ್ವಚ್ಛತೆ ಕಾಪಾಡುತ್ತಿಲ್ಲ. ನಿಗದಿತ ಪ್ರಮಾಣದಲ್ಲಿ ಆಹಾರ ತಯಾರಿಕೆ ಆಗುತ್ತಿಲ್ಲ, ಶುದ್ಧ ಕುಡಿಯುವ ನೀರು ಪೂರೈಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಇದನ್ನು ಸರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮುನಿರಾಜು, ಸಹಾಯಕ ನಿರ್ದೇಶಕ ಕೇಶವಮೂರ್ತಿ, ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಆರೋಗ್ಯಾಧಿಕಾರಿ ರಾಘವೇಂದ್ರ, ಜೆಇ ನಾಗೇಂದ್ರ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ರಮೇಶ್‌ಕುಮಾರ್, ಜೆಇ ನಂದೀಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net