ಕಾಡಾನೆಗಳ ದಾಂಧಲೆಯಿಂದ ಫಸಲು ನಾಶ

ಹನೂರು ತಾಲೂಕಿನ ಮಂಗಲ ಸಮೀಪದ ಗುಂಡಾಪುರ ಭಾಗದಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸಿದ ಕಾಡಾನೆಗಳು
ಹನೂರು ತಾಲೂಕಿನ ಮಂಗಲ ಸಮೀಪದ ಗುಂಡಾಪುರ ಭಾಗದಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸಿದ ಕಾಡಾನೆಗಳು
Published on

ಪ್ರಮುಖ ಮುಖ್ಯಾಂಶಗಳು

  • ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ
ಹನೂರು: ತಾಲೂಕಿನ ಮಂಗಲ ಸಮೀಪದ ಗುಂಡಾಪುರ, ರಾಮನಗುಡ್ಡೆ ಕೆರೆ ಹಾಗೂ ಹುಲುಸುಗುಡ್ಡೆ ಭಾಗದಲ್ಲಿ ಶನಿವಾರ 2 ಕಾಡಾನೆಗಳು ದಾಂಧಲೆ ನಡೆಸಿದ್ದು, ಜಮೀನಿನಲ್ಲಿ ಬೆಳೆದಿದ್ದ ಫಸಲು ಹಾಗೂ ತಂತಿ ಬೇಲಿಯನ್ನು ನಾಶಪಡಿಸಿವೆ.
ಈ ಭಾಗದಲ್ಲಿ ಈವರೆಗೂ ಕಾಡುಪ್ರಾಣಿಗಳ ಹಾವಳಿಯೇ ಇರಲಿಲ್ಲ. ಆದರೆ ಶನಿವಾರ ಬೆಳಗ್ಗೆ ಸಮೀಪದ ಅರಣ್ಯ ಪ್ರದೇಶದಿಂದ ರಾಮನಗುಡ್ಡೆ ಕೆರೆಗೆ ನೀರು ಕುಡಿಯಲು ಆಗಮಿಸಿದ 2 ಕಾಡಾನೆಗಳು ಈ ಭಾಗದ ಹುಲುಸುಗುಡ್ಡೆ, ಗುಂಡಾಪುರ ಹಾಗೂ ಇನ್ನಿತರ ಕಡೆಗಳ ಜಮೀನುಗಳಿಗೆ ನುಗ್ಗಿ ದಾಂಧಲೆ ನಡೆಸಿವೆ. ಈ ವೇಳೆ ಕೆಲವರ ಜಮೀನಿನಲ್ಲಿ ಫಸಲು ಹಾಗೂ ತಂತಿ ಬೇಲಿಯನ್ನು ತುಳಿದು ನಾಶಪಡಿಸಿವೆ. ಸುಮಾರು ಒಂದು ಗಂಟೆಗಳ ಕಾಲ ಅಡ್ಡಾದಿಡ್ಡಿಯಾಗಿ ಕಾಡಾನೆಗಳು ಓಡಾಡಿದೆ. ಇದರಿಂದ ಭಯಭೀತರಾದ ಗುಂಡಾಪುರ ಭಾಗದ ರೈತರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದರು. ಆದರೆ ಇಲಾಖೆಯ ಸಿಬ್ಬಂದಿ ಆಗಮಿಸುವಷ್ಟರೊಳಗೆ ಸ್ಥಳೀಯ ರೈತರೇ ಹರಸಾಹಸ ಪಟ್ಟು ಕಾಡಾನೆಗಳನ್ನು ಕಾಡಿನತ್ತ ಓಡಿಸಿದರು.
ಕಡಿವಾಣಕ್ಕೆ ಆಗ್ರಹ : ಈ ಭಾಗದಲ್ಲಿ ಈವರೆಗೂ ಕಾಡು ಪ್ರಾಣಿಗಳು ಅದರಲ್ಲೂ ಕಾಡಾನೆಗಳ ಹಾವಳಿಯೇ ಇರಲಿಲ್ಲ. ಆದರೀಗ 2 ಕಾಡಾನೆಗಳು ಆಗಮಿಸಿದ್ದು, ಆತಂಕ ಉಂಟು ಮಾಡಿದೆ. ಮುಂದಿನ ದಿನಗಳಲ್ಲಿ ಕಾಡಾನೆಗಳು ತನ್ನ ಚಾಳಿ ಮುಂದುವರಿಸುವ ಸಾಧ್ಯತೆ ಇದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಗಳು ಜಮೀನಿನತ್ತ ಬಾರದಂತೆ ಕಡಿವಾಣ ಹಾಕುವಂತೆ ರೈತರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net