ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಕೆ.ಎಂ.ಮಹೇಶ್ ಉದ್ಘಾಟಿಸಿದರು. ಶ್ರೀಸರ್ಪಭೂಷಣ ಸ್ವಾಮೀಜಿ, ಶ್ರೀಷಡಕ್ಷರಿ ಸ್ವಾಮೀಜಿ, ಚಂದ್ರಶೇಖರ್ ಇದ್ದರು.
ಗುಂಡ್ಲುಪೇಟೆ :ರಕ್ತದಾನ ಮಹಾದಾನವಾಗಿದ್ದು, ಇದರಿಂದ ಮತ್ತೊಂದು ಜೀವವನ್ನು ಉಳಿಸಿದ ಸಮಾಧಾನ ಸಿಗುತ್ತದೆ ಎಂದು ತೆರಕಣಾಂಬಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಕೆ.ಎಂ.ಮಹೇಶ್ ಹೇಳಿದರು.
ತಾಲೂಕಿನ ತೆರಕಣಾಂಬಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಹರವೆಯ ಶ್ರೀ ಚನ್ನಬಸವೇಶ್ವರ ವಿದ್ಯಾಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಹಣ ಕೊಟ್ಟರೆ ಏನು ಬೇಕಾದರೂ ಸಿಗುತ್ತದೆ. ಆದರೆ ಮನುಷ್ಯನ ಬದುಕಿಗೆ ಅಗತ್ಯವಾದ ರಕ್ತ ಮಾತ್ರ ಫ್ಯಾಕ್ಟರಿಯಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು ಗಾಯಗೊಂಡು ಜೀವನ್ಮರಣದ ಹೋರಾಟ ನಡೆಸುವ ಅಮೂಲ್ಯ ಜೀವಗಳನ್ನು ಉಳಿಸಲು ರಕ್ತ ದಾನಿಗಳ ಕೊಡುಗೆ ಮಹತ್ವದ್ದಾಗಿದೆ. ಅಲ್ಲದೆ ರಕ್ತದಾನ ಮಾಡಿದವರ ದೇಹವು ಮತ್ತಷ್ಟು ಹೊಸ ರಕ್ತವನ್ನು ಉತ್ಪಾದಿಸುವುದರಿಂದ ದಿಢೀರ್ ಹೃದಯಾಘಾತ ಮುಂತಾದ ಸಮಸ್ಯೆಗಳಿಂದ ಪಾರಾಗಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹರವೆ ವಿರಕ್ತ ಮಠದ ಶ್ರೀಸರ್ಪಭೂಷಣ ಸ್ವಾಮೀಜಿ, ಹಂಗಳ ಮಠದ ಶ್ರೀಷಡಕ್ಷರಿ ಸ್ವಾಮೀಜಿ, ಚಾಮರಾಜನಗರ ರೋಟರಿ ಸಂಸ್ಥೆಯ ಚಂದ್ರಶೇಖರ್, ಸಿಮ್ಸ್ ರಕ್ತ ನಿಧಿ ಕೇಂದ್ರದ ವೈದ್ಯರು, ಯೋಜನಾ ಕಚೇರಿಯ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.