ಹನೂರು: ಗ್ರಾಮದ ದೊಡ್ಡಕೆರೆ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ತಾಲೂಕಿನ ಪಿ.ಜಿ.ಪಾಳ್ಯಕ್ಕೆ ಭಾನುವಾರ ಭೇಟಿ ನೀಡಿದ್ದ ವೇಳೆ ಪುರಾತನ ದೊಡ್ಡಕೆರೆಗೆ ತೆರಳಿ ಪರಿಶೀಲಿಸಿ ಮಾತನಾಡಿದರು.
ಗ್ರಾಮದ ಪುರಾತನ ಕಾಲದ ದೊಡ್ಡಕೆರೆ ಈ ಹಿಂದೆ ನೀರಿನ ಪ್ರಮುಖ ಮೂಲವಾಗಿತ್ತು. ಮಳೆಗಾಲದ ವೇಳೆ ಯಥೇಚ್ಛವಾದ ನೀರು ಸಂಗ್ರಹವಾಗುತ್ತಿತ್ತು. ಅಂತರ್ಜಲ ವೃದ್ಧಿಯಿಂದ ಗ್ರಾಮವು ಸಮೃದ್ಧಿಯಿಂದ ಕೂಡಿತ್ತು. ಆದರೆ ಹಲವು ವರ್ಷಗಳ ಹಿಂದೆ ಈ ಕೆರೆ ಒತ್ತುವರಿಯಾಗಿತ್ತು. ಇದನ್ನು ಮನಗಂಡು ಭೂ ಮಾಪನಾ ಇಲಾಖೆಯಿಂದ ಅಧಿಕಾರಿಗಳಿಂದ ಸರ್ವೇ ಕಾರ್ಯ ನಡೆಸಲಾಗಿದೆ. ರೈತರೇ ಸ್ವಯಂ ಪ್ರೇರಿತವಾಗಿ ಒತ್ತುವರಿಯನ್ನು ತೆರೆವುಗೊಳಿಸಿರುವುದು ಕೆರೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಜತೆಗೆ ನೀರು ತುಂಬಿಸಲು ಅಗತ್ಯ ಕ್ರಮವಹಿಸಲಾಗುವುದು. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ಮುಂದಿನ ದಿನಗಳಲ್ಲಿ ಮಳೆಗಾಲದಲ್ಲಿ ನೀರು ಸಂಗ್ರಹಣೆಯಾಗಲಿದೆ. ಬೇಸಿಗೆ ವೇಳೆ ಜನ, ಜಾನುವಾರುಗಳ ನೀರಿನ ಸಮಸ್ಯೆ ನೀಗಲಿದೆ. ಇನ್ನು ಮುಂದಿನ ದಿನಗಳಲ್ಲಿ ಅಗತ್ಯ ಮೂಲ ಸೌಕರ್ಯ ಸೇರಿದಂತೆ ಗ್ರಾಮದ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.