ಕೊಳ್ಳೇಗಾಲದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ತಹಸೀಲ್ದಾರ್ ಬಸವರಾಜು ಮಾತನಾಡಿದರು. ದಿನೇಶ್ ಕುಮಾರ್ ಮೀನಾ ಇದ್ದರು.
ಕೊಳ್ಳೇಗಾಲ:ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಹಕರಿಸಬೇಕು ಎಂದು ತಹಸಿಲ್ದಾರ್ ಬಸವರಾಜು ಹೇಳಿದರು.
ಪಟ್ಟಣದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐಆರ್) ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿ ( ಬಿಎಲ್‌ಎ) ಗಳಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಪ್ರಸ್ತುತ ಮತದಾರರ ಪಟ್ಟಿಯನ್ನು 2002ರ ಮತದಾರರ ಪಟ್ಟಿಗೆ ಹೋಲಿಕೆ ಮಾಡಲಾಗುತ್ತಿದೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಶೇ.96.43 ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದೆ. ಉಳಿದಿರುವ ಶೇ.3.50 ಮತದಾರರ ಮ್ಯಾಪಿಂಗ್ ಮಾಡಲಾಗುತ್ತಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಜೂ.30ರಿಂದ ಜು.29 ರವರೆಗೆ ಬಿಎಲ್‌ಒಗಳು ಪ್ರತಿ ಮನೆಗೆ ಭೇಟಿ ನೀಡಿ 2 ಅರ್ಜಿಗಳನ್ನು ನೀಡುತ್ತಾರೆ. ನಂತರ ನೀಡಲಾದ ನಮೂನೆಗಳನ್ನು ಸ್ವೀಕರಿಸಲಿದ್ದಾರೆ. ಎನ್ಯುಮರೇಶನ್ ಅರ್ಜಿಲ್ಲಿ ಮನೆ ಸದಸ್ಯರ ಸಂಪೂರ್ಣ ಮಾಹಿತಿ ನಮೂದಿಸಬೇಕು ಎಂದು ಹೇಳಿದರು.
ಅರ್ಹ ಮತದಾರರು ಮತ ಪಟ್ಟಿಯಿಂದ ಹೊರಗೆ ಉಳಿಯದಂತೆ ಕಾರ್ಯನಿರ್ವಹಿಸಲು ಬಿಎಲ್‌ಎಗಳ ಸಹಕಾರ ಮುಖ್ಯ. ಮ್ಯಾಪಿಂಗ್ ಆಗದೆ ಉಳಿದಿರುವವರನ್ನು ಬಿಎಲ್‌ಒ ಪತ್ತೆ ಹಚ್ಚಲಿದ್ದಾರೆ. ಅಂತವರು ವಾಸದ ದಾಖಲೆ ನೀಡಬೇಕಾಗುತ್ತದೆ. ಇದರಿಂದ ಕರಡು ಮತದಾರರ ಪಟ್ಟಿಯಲ್ಲಿ ಇವರ ಹೆಸರು ಉಳಿಯಲಿದೆ. ಎನ್ಯುಮರೇಶನ್ ಫಾರಂ ಹಿಂತಿರುಗಿಸುತ್ತಾರೋ ಅವರನ್ನು ಕರಡು ಮತದಾರ ಪಟ್ಟಿಯಲ್ಲಿ ಪ್ರಕಟಗೊಳಿಸಲಾಗುತ್ತದೆ. ನಂತರ ಅರ್ಜಿದಾರರ ಹೆಸರು ಬಿಟ್ಟಿದ್ದರೆ ಆಕ್ಷೇಪಣೆಗೆ ಅವಕಾಶವಿರಲಿದೆ. ಬಿಎಲ್‌ಎಗಳಿಗೂ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಆಕ್ಷೇಪಣೆ ಅರ್ಜಿಯನ್ನು ಇಆರ್‌ಒ ಪರಿಶೀಲಿಸುವರು. ಬಳಿಕ ಅಂತಿಮವಾಗಿ ಮತದಾರರ ಪಟ್ಟಿ ಪ್ರಕಟವಾಗಲಿದೆ. ಅರ್ಹತೆ ಇದ್ದವರ ಹೆಸರು ಬಿಟ್ಟು ಹೋಗಿದ್ದರೆ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು. ಅಲ್ಲಿಯೂ ಅವಕಾಶ ಆಗದಿದ್ದರೆ ರಾಜ್ಯ ಚುನಾವಣಾ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು ಎಂದರು.
ಈ ವೇಳೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಪ್ರಶ್ನೆಗಳಿಗೆ ತಹಸೀಲ್ದಾರ್ ಬಸವರಾಜು ಉತ್ತರಿಸಿದರು.
ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು.
ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ, ಮಾಜಿ ಶಾಸಕ ಎನ್. ಮಹೇಶ್, ಎಸ್.ಬಾಲರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳು ಇದ್ದರು.