ಪರಿಶಿಷ್ಟ ಜಾತಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಆದ್ಯತೆ: ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿಕೆ

aravinda limbavali-1
Published on

ಮಹದೇವಪುರ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದು, ಆ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಮನವಿ ಮಾಡಿದ್ದಾರೆ.

ಗ್ರಾಮಾಂತರ ಮಂಡಲ ಎಸ್ಸಿ ಮೋರ್ಚಾ ಅಧ್ಯಕ್ಷ ಆದೂರು ಮುನಿರಾಜು ಅಧ್ಯಕ್ಷತೆಯಲ್ಲಿ ಕ್ಷೇತ್ರದ ಕಾಟಂನಲ್ಲೂರಿನಲ್ಲಿ ಭಾನುವಾರ ಆಯೋಜಿಸಿದ್ದ ಎಸ್ಸಿ ಮೋರ್ಚಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್’ ಪರಿಕಲ್ಪನೆಯಲ್ಲಿ ಎನ್‌ಡಿಎ ಸರ್ಕಾರ ಕೆಲಸ ಮಾಡುತ್ತಿದೆ. ಅಂಬೇಡ್ಕರ್ ಅವರನ್ನು ಸ್ಮರಿಸುವ ಉದ್ದೇಶದಿಂದ ಮೋದಿ, ಅವರ ಜೀವನದ 5 ಪ್ರಮುಖ ಸ್ಥಳಗಳ ಅಭಿವೃದ್ಧಿಗೆ ‘ಪಂಚತೀರ್ಥ’ ಎಂದು ಘೋಷಿಸಿದ್ದಾರೆ. ಪರಿಶಿಷ್ಟ ಜಾತಿಗಳ ಉದ್ಧಾರಕ್ಕಾಗಿ ಆದ್ಯತೆ ನೀಡಿದ್ದಾರೆ. ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಹಾಸ್ಟೆಲ್, ಕೋಚಿಂಗ್ ಸೌಲಭ್ಯ ಹೆಚ್ಚಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮನೆ, ಶೌಚಗೃಹ, ಕುಡಿಯುವ ನೀರು, ವಿದ್ಯುತ್ ಸೇರಿ ಇತರ ಸೌಲಭ್ಯವನ್ನು ತಲುಪಿಸುವ ಮೂಲಕ ಸಮಾನತೆ ಸ್ಥಾಪಿಸಿದ್ದಾರೆ ಎಂದರು.

ನಾವೆಲ್ಲರೂ ಅಂಬೇಡ್ಕರ್ ಅವರಿಗೆ ಚಿರಋಣಿಯಾಗಿರಬೇಕು. ಎಸ್ಸಿ-ಎಸ್ಟಿ ಜನಾಂಗಕ್ಕೆ ನ್ಯಾಯ ಸಿಗಲೆಂದು ಮೀಸಲಾತಿ ತಂದರು. ಆ ಕಾರಣಕ್ಕಾಗಿ ನಾನು ಶಾಸಕನಾದೆ. ಇನ್ನೂ ಹಲವು ಮಂದಿ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ, ಶಾಸಕ, ಸಂಸದ ಮತ್ತು ಮಂತ್ರಿಗಳಾಗಿದ್ದಾರೆ. ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಎಸ್ಸಿಗೆ ಶೇ.17, ಎಸ್ಸಿಗೆ ಶೇ.7ಕ್ಕೆ ಹೆಚ್ಚಿಸಿ ಮೀಸಲಾತಿ ಕಲ್ಪಿಸಿದ್ದರು. ಇದರಿಂದ ಇವೆರೆಡು ಜಾತಿಗಳ ಮೀಸಲಾತಿ ಪ್ರಮಾಣವು ಶೇ.24ಕ್ಕೆ ಹೆಚ್ಚಾಯಿತು. ಬಿಜೆಪಿಯಿಂದ ಮಾತ್ರ ಸಮಾಜದಲ್ಲಿ ಸಮಾನ ಸಾಮರಸ್ಯ ರೂಪಿಸಲಾಗುತ್ತಿದೆ ಎಂದರು.

ಗ್ರಾಮಾಂತರ ಮಂಡಲದ ಅಧ್ಯಕ್ಷ ಎಚ್.ಎಸ್. ಪಿಳ್ಳಪ್ಪ, ಎಸ್ಸಿ ಮೋರ್ಚಾ ಉಸ್ತುವಾರಿ ಜ್ಯೋತಿಪುರ ವೇಣು, ಮೇಲುಸ್ತುವಾರಿ ಬೈರತಿ ಕುಮಾರ್, ಗ್ರಾಮಾಂತರ ಮಂಡಲ ಎಸಿ ಮೋರ್ಚಾ ಅಧ್ಯಕ್ಷ ಆದೂರು ಮುನಿರಾಜು, ಉಪಾಧ್ಯಕ್ಷ ಗುಂಡೂರು ಡಿ.ವಾಸುದೇವ, ಪ್ರಧಾನ ಕಾರ್ಯದರ್ಶಿ ಆರ್. ಅಶೋಕ್, ಸಮಾಜದ ಮುಖಂಡರಾದ ಎನ್.ಸಿ. ಕೃಷ್ಣಪ್ಪ, ಕೆ.ವಿ. ನಾಗರಾಜು ಸೇರಿ ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net