ಹೈಕಮಾಂಡ್ ಅಂಗಳಕ್ಕೆ ಜಾತಿಗಣತಿ ಬಿಕ್ಕಟ್ಟು

Caste Census
Published on

ಬೆಂಗಳೂರು: ಜಾತಿ ಗಣತಿ ವಿಚಾರ ರಾಜ್ಯದ ಆಡಳಿತಾರೂಢ ಕಾಂಗ್ರೆಸನ್ನು ಇಬ್ಬಂದಿಗೆ ಸಿಲುಕಿಸಿದೆ. ಪರಸ್ಪರ ಆರೋಪ- ಪ್ರತ್ಯಾರೋಪದ ಬಳಿಕ ಇದೀಗ ದೂರು ಕೊಡುವ ಹಂತ ತಲುಪಿದೆ. ಜಾತಿ ಗಣತಿ ಕುರಿತಾಗಿನ ಕಾಂತರಾಜು ವರದಿಯನ್ನು ಸರ್ಕಾರ ಸ್ವೀಕರಿಸಬೇಕು ಎಂದು ಒಂದು ಬಣ ಬಲವಾದ ವಾದ ಮಂಡಿಸುತ್ತಿದ್ದರೆ, ಮತ್ತೊಂದೆಡೆ ಯಾವುದೇ ಕಾರಣಕ್ಕೂ ವರದಿ ಮಂಡನೆಗೆ ಅವಕಾಶ ಕೊಡಬಾರದೆಂದು ಇನ್ನೊಂದು ಗುಂಪು ಒತ್ತಡ ತಂತ್ರ ಅನುಸರಿಸಲು ಆರಂಭಿಸಿದೆ.

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಸಮುದಾಯದ ನಾಯಕರು ಈ ಕುರಿತು ಮಹತ್ವದ ಸಭೆ ನಡೆಸಿದ್ದಾರೆ. ಬಳಿಕ ಬೆಂಗಳೂರಿನ ಸದಾಶಿವನಗರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಜಾತಿ ಜನಗಣತಿ ವಿವಾದ ಹೈಕಮಾಂಡ್ ಅಂಗಳಕ್ಕೆ ತಲುಪಿದಂತಾಗಿದೆ. ಕಾಂತರಾಜ್ ವರದಿ ಬಗ್ಗೆಯೇ ಸುದೀರ್ಘ ಚರ್ಚೆ ನಡೆಸಿದ್ದಾರೆ. ವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಿಲ್ಲ, ಮಾಹಿತಿ ಸಂಗ್ರಹ ಸರಿಯಾಗಿ ನಡೆದಿಲ್ಲ. ವರದಿ ಜಾರಿಯಿಂದ ಸಮುದಾಯಕ್ಕೆ ಅನ್ಯಾಯವಾಗಲಿದೆ. ಒಕ್ಕಲಿಗರ ಸಮುದಾಯವೂ ಆಕ್ಷೇಪ ಎತ್ತಿದೆ. ಹೀಗಾಗಿ ಸಹಿಸಂಗ್ರಹ ಅಭಿಯಾನ ಕೂಡ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ವರದಿ ಸ್ವೀಕಾರ ಮಾಡಲು ಆತುರ ತೋರಬಾರದು ಎಂದು ಸೂಚನೆ ನೀಡಲು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಜಾತಿ ಗಣತಿ ವಿರೋಧಿಸುತ್ತಿಲ್ಲ. ಆದರೆ, ಕಾಂತರಾಜು ವರದಿ ವೈಜ್ಞಾನಿಕವಾಗಿಲ್ಲ. ಅದನ್ನು ಸ್ವೀಕರಿಸುವ ತಪ್ಪನ್ನೇ ಸರ್ಕಾರ ಮಾಡಬಾರದು ಎಂಬ ವಾದವನ್ನು ಬಲಗೊಳಿಸುವ ಪ್ರಯತ್ನ ನಡೆದಿದೆ. ವರದಿ ಸ್ವೀಕರಿಸಬೇಕೆಂಬ ನಿಲುವಿಗೆ ಅಂಟಿಕೊಂಡರೆ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನೇ ಭೇಟಿ ಮಾಡಿ ಮನವರಿಕೆ ಮಾಡಿಕೊಡಲು ತಂಡ ಸಿದ್ಧವಾಗಿದೆ. ವೀರಶೈವ ಲಿಂಗಾಯತ ಮುಖಂಡರ ಖರ್ಗೆ ಭೇಟಿ ಬೆಳವಣಿಗೆ ತರುವಾಯ ಖರ್ಗೆ ಹಾಗೂ ಸಿಎಂ ಸಿದ್ದರಾಮಯ್ಯ ತೆಲಂಗಾಣದಲ್ಲಿ ಮುಖಾಮುಖಿ ಯಾಗಿದ್ದಾರೆ. ಈ ವೇಳೆ ಜಾತಿಗಣತಿ ಬಗ್ಗೆ ಯಾವುದೇ ಪ್ರಸ್ತಾಪವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ತೆಲಂಗಾಣ ಚುನಾವಣೆ ಬಳಿಕ ಪ್ರಮುಖ ನಾಯಕರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುವ ಇರಾದೆ ಹೈಕಮಾಂಡ್​ಗೆ ಇದ್ದಂತಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ. ಪಂಚರಾಜ್ಯ ಚುನಾವಣೆ ವೇಳೆ ರಾಹುಲ್ ಗಾಂಧಿ ಕೂಡ ಜಾತಿಗಣತಿ ಕುರಿತು ಹೆಚ್ಚೆಚ್ಚು ಪ್ರಸ್ತಾಪ ಮಾಡುತ್ತಿದ್ದಾರೆ. ಇದು ಸಿದ್ದರಾಮಯ್ಯ ಬಣದ ಆಶಯಕ್ಕೆ ಬಲ ನೀಡಿದರೆ, ಕಾಂತರಾಜು ವರದಿ ವಿರೋಧಿಸುತ್ತಿರುವವರಿಗೆ ಕೊಂಚ ಕಸಿವಿಸಿ ಎನಿಸುತ್ತಿದೆ.

ಮರು ಸಮೀಕ್ಷೆಗೆ ಪಟ್ಟು

ಕಾಂತರಾಜು ವರದಿ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಅಲ್ಲದೇ ಸಮೀಕ್ಷೆ ನಡೆಸಿ ಎಂಟು ವರ್ಷಗಳು ಕಳೆದಿವೆ. ವರದಿ ಅಂಕಿ-ಸಂಖ್ಯೆ ಸೋರಿಕೆ ಆಗಿರುವುದರಿಂದ ಪ್ರಮುಖ ಸಮುದಾಯಗಳು ವಿರೋಧಿಸಲು ಸಂಘಟಿತವಾಗುತ್ತಿವೆ. ಹೀಗಾಗಿ ಹೊಸದಾಗಿ ಸಮೀಕ್ಷೆ ನಡೆಸಬೇಕು. ಇದಕ್ಕೆ ನಮ್ಮ ಬೆಂಬಲ ಇರಲಿದೆ ಎಂಬ ವಾದ ಬಲಗೊಳಿಸುವ ಪಯತ್ನ ಕಾಂಗ್ರೆಸ್ ನಾಯಕರಿಂದಲೇ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net