

ಪುತ್ತೂರು ಗ್ರಾಮಾಂತರ: ಕಾರೊಂದು ರಸ್ತೆ ಬದಿಯ ಆಳ ಭಾಗದಲ್ಲಿರುವ ಅಡಕೆ ತೋಟಕ್ಕೆ ಪಲ್ಟಿಯಾಗಿ ಉರುಳಿ ಬಿದ್ದ ಘಟನೆ ಪುತ್ತೂರು-ಈಶ್ವರಮಂಗಲ ರಸ್ತೆಯಲ್ಲಿ ನೆಟ್ಟಣಿಗೆ ಮುಡ್ನೂರು ಗ್ರಾಮದ ಸಾಂತ್ಯ ಎಂಬಲ್ಲಿ ಗುರುವಾರ ಸಂಭವಿಸಿದೆ.
ಕೇರಳದ ಯುವಕನೊಬ್ಬ ಕುಂಬ್ರದಿಂದ ಈಶ್ವರಮಂಗಲ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಸಾಂತ್ಯದಲ್ಲಿ ನಿಯಂತ್ರಣ ಕಳಕೊಂಡು ರಸ್ತೆ ಬದಿಯಲ್ಲಿರುವ ಅಡಕೆ ತೋಟಕ್ಕೆ ಉರುಳಿಬಿದ್ದು ತೋಟದಲ್ಲಿನ ತೆಂಗಿನ ಮರವೊಂದಕ್ಕೆ ಎರಗಿ ನಿಂತಿದೆ. ತೋಟದಲ್ಲಿದ್ದ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಕಾರಿನೊಳಗೆ ಸಿಲುಕಿಕೊಂಡಿದ್ದ ಯುವಕ ಮತ್ತು ಯುವತಿಯನ್ನು ಕಾರಿನ ಬಾಗಿಲು ತೆಗೆದು ಹೊರತೆಗೆದಿದ್ದಾರೆ.
ಕಾರು ಹಾನಿಗೊಂಡಿದ್ದರೂ ಅದರಲ್ಲಿದ್ದ ಯುವಕ ಮತ್ತು ಆತನ ಜತೆಗಿದ್ದ ಕೇರಳದ ಪರಪ್ಪೆಯ ಪಿಯುಸಿ ವಿದ್ಯಾರ್ಥಿನಿಯಾದ ಯುವತಿ ಯಾವುದೇ ಗಾಯಗಳಿಲ್ಲದೆ ಪವಾಡ ಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ.