ಸ್ಕಾರ್ಪಿಯೋ ಕಾರು ಪಲ್ಟಿ; ಇಬ್ಬರು ಸಾವು, 4 ಮಂದಿಗೆ ಗಾಯ

ವಿಜಯವಾಣಿ - 2025-03-06T192640.420
Published on

ಚಿಂತಾಮಣಿ: ತಾಲ್ಲೂಕಿನ ಪವಿತ್ರ ಯಾತ್ರಾಸ್ಥಳವಾದ ಮುರಗಮಲ್ಲಾ ರಸ್ತೆಯ ಕಾಗತಿ ಗ್ರಾಮದ ಸಮೀಪದಲ್ಲಿ ಸ್ಕಾರ್ಪಿಯೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಾಗತಿ ಮತ್ತು ಕೊಂಗತಿಮ್ಮನಹಳ್ಳಿ ರಸ್ತೆಯ ಮದ್ಯದಲ್ಲಿ ಪಲ್ಟಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಘಟನೆ ಇಂದು ಮಧ್ಯಾಹ್ನ ಸುಮಾರು 3 ಗಂಟೆ ಆಸುಪಾಸಿನಲ್ಲಿ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ಬೆಂಗಳೂರಿನ ಗುರುಪ್ಪನಪಾಳ್ಯದ ನಿವಾಸಿಗಳಾದ ವಾಹಿದ್ (55) ಮತ್ತು ವಾಹನ ಚಾಲನೆ ಮಾಡುತ್ತಿದ್ದ ಅವರ ಪುತ್ರ ಸಕ್ಲೈನ್​ (32) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಸರ್ಧಾರ್, ನಗೀನಾ, ಶೋಹೆಬ್, ಅಮರೀನ್ ಮತ್ತು ಮಕ್ಕಳಾದ ಹಸನೈನ್ (3) ಮತ್ತು ಮರಿಯಮ್ (2) ಗಾಯಗೊಂಡಿದ್ದು, ಆಶ್ವರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅಗಮಿಸಿದ ಕೆಂಚರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುರಗಮಲ್ಲಾ ಹೊರಠಾಣೆಯ ಎಎಸ್‌ಐ ಚಂದ್ರ, ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್​ ಕಾದು ಕೊನೆಗೆ ತಮ್ಮದೇ ಸ್ವಂತ ಕಾರಿನಲ್ಲಿ ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿತೆ ಆಸ್ಪತ್ರೆಗೆ ಕರೆದೊಯ್ದು, ಸೂಕ್ತ ಚಿಕಿತ್ಸೆಗೆ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net