ಕೇಬಲ್ ಆಪರೇಟರ್‌ಗಳಿಗೆ ಮಾರ್ಗಸೂಚಿ ಅಗತ್ಯ

sabhe
ಕುಂದಾಪುರದ ತಾಲೂಕು ಪಂಚಾಯಿಯಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನೆ ಸಭೆ ನಡೆಯಿತು.
Published on

ಕುಂದಾಪುರ: ಭಾರಿ ಗಾಳಿ ಮಳೆಗೆ ವಿದ್ಯುತ್ ಕಂಬಕ್ಕೆ ಅಳವಡಿಸಿದ ಟಿವಿ ಕೇಬಲ್ ಲೈನ್ ಮೇಲೆ ವಿದ್ಯುತ್ ತಂತಿ ಬಿದ್ದು ಜನ್ನಾಡಿಯಲ್ಲಿ ಬಾಲಕನೊಬ್ಬನಿಗೆ ಆಘಾತವಾಗಿ ಗಂಭೀರ ಗಾಯಗೊಂಡಿದ್ದಾನೆ. ಇದಕ್ಕೆ ಯಾರು ಹೊಣೆ? ಸರಿಯಾದ ಮಾರ್ಗಸೂಚಿಗಳನ್ನು ಮಾಡಿ ಕೇಬಲ್ ಆಪರೇಟರ್‌ಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕು. ನಿಗದಿತ ಮಾನದಂಡಗಳನ್ನು ಕೇಬಲ್‌ನವರು ಪಾಲಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.

ಕುಂದಾಪುರ ತಾಲೂಕು ಪಂಚಾಯಿತಿಯಲ್ಲಿ ಬುಧವಾರ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಗಂಗೊಳ್ಳಿಯಲ್ಲಿ ಲೈನ್‌ಮೆನ್ ಕೊರತೆ ಇದೆ, ರಾತ್ರಿ ಪಾಳಿಗೆ ಜನ ಇಲ್ಲ ಎಂದು ಜಹೀರ್ ಅಹಮದ್, ಮೊಳಹಳ್ಳಿ ಭಾಗದಲ್ಲಿ ಸಮಸ್ಯೆ ಇದೆ ಎಂದು ವಾಣಿ ಆರ್.ಶೆಟ್ಟಿ, ಕೋಡಿ ಭಾಗದಲ್ಲಿ ಮರಗಳು ಬೀಳುವ ಆತಂಕ ಇದೆ ಎಂದು ಕೋಣಿ ನಾರಾಯಣ ಆಚಾರ್, ಕೆರಾಡಿಯಲ್ಲಿ ಬೋವಿ ಜನಾಂಗದವರ ಮನೆಗಳಿಗೆ ವಿದ್ಯುತ್ ಸಮಸ್ಯೆ ಇದೆ ಎಂದು ಅರುಣ್, ಹೆದ್ದಾರಿ ಬದಿ ಮರಗಳನ್ನು ಅರ್ಧ ಕಡಿದ ಸ್ಥಿತಿಯಲ್ಲಿ ಬಾಕಿ ಇಟ್ಟು ಲೈನ್‌ಗೆ ಸಮಸ್ಯೆ ಆಗುತ್ತಿದೆ ಎಂದು ಅಭಿಜಿತ್ ಪೂಜಾರಿ ಹೇರಿಕುದ್ರು ಹೇಳಿದರು. ಮೆಸ್ಕಾಂ ಕಂಬಗಳಿಗೆ ಕೇಬಲ್ ಲೈನ್ ಅಳವಡಿಸುವುದರಿಂದ ಸಮಸ್ಯೆ ಆಗುತ್ತಿದೆ. ಘನ ವಾಹನಗಳ ಓಡಾಟಕ್ಕೂ ಕಷ್ಟವಾಗಿದೆ ಎಂದು ಚಂದ್ರ ಕಾಂಚನ್ ಹೇಳಿದರು.

ಯಜಮಾನಿ ಹೆಸರು ಬದಲವಾಣೆಗೆ ಅವಕಾಶ: ಗೃಹಲಕ್ಷ್ಮೀ ಯೋಜನೆಯಲ್ಲಿ ಬಾಕಿ ಉಳಿದಿರುವ ಫಲಾನುಭವಿಗಳ ಮನೆಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಕಳುಹಿಸಿ ನೋಂದಣಿ ಮಾಡುವಂತೆ ಗಣೇಶ್ ಕೊರಗ ಕುಂಭಾಶಿ ಒತ್ತಾಯಿಸಿದರು. ಪಡಿತರ ಚೀಟಿಯಲ್ಲಿ ಯಜಮಾನಿ ಬದಲಾವಣೆಗೆ ಅವಕಾಶ ಇದೆ. ಗ್ರಾಮ ಒನ್ ಕೇಂದ್ರ, ಪಡಿತರ ಕೇಂದ್ರಗಳಲ್ಲೂ ಮಾಡಬಹುದು ಎಂದು ಆಹಾರ ನಿರೀಕ್ಷಕರು ಹೇಳಿದರು.

ತಾಂತ್ರಿಕ ಸಮಸ್ಯೆಗಳ ಹೊರತು ಬೇರೆ ಯಾವುದೇ ಸಮಸ್ಯೆಗಳು ಇಲ್ಲ. ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪ್ರಯತ್ನ ಮಾಡಲಾಗುವುದು ಎಂದು ಸಿಡಿಪಿಒ ಉಮೇಶ್ ಕೋಟ್ಯಾನ್ ಹೇಳಿದರು.

ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ, ಸದಸ್ಯರಾದ ಆಶಾ ಕರ್ವಾಲೋ, ಸವಿತಾ ಪೂಜಾರಿ, ಹರ್ಷ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ, ವಿವಿಧ ಇಲಾಖೆಗಳ ಅಧಿಕಾರಿಗಳು ಮೊದಲಾದವರು ಇದ್ದರು.

ಹಕ್ಲಾಡಿ, ಗಂಗೊಳ್ಳಿಗೆ ಬೇಕು ಬಸ್

ಹಕ್ಲಾಡಿ, ಗಂಗೊಳ್ಳಿಗೆ ಬಸ್ ಬೇಕು ಎಂದು ಬೇಡಿಕೆ ಕೇಳಿ ಬಂದಿತು. ಸಂಗಮ್ ತಿರುವಿನಲ್ಲಿ ಬಸ್‌ಗಳನ್ನು ಸಿಗ್ನಲ್ ನೀಡದೇ ಏಕಾಏಕಿ ತಿರುಗಿಸಿ ಅಪಘಾತಕ್ಕೆ ಆಹ್ವಾನ ನೀಡಲಾಗುತ್ತದೆ ಎಂದು ಅಭಿಜಿತ್ ಪೂಜಾರಿ ಹೇಳಿದರು. ಬಡಾಕೆರೆಗೆ ತಾತ್ಕಾಲಿಕ ಪರ್ಮಿಟ್ ವ್ಯವಸ್ಥೆಯಲ್ಲಿ ಬಸ್ ಆರಂಭಿಸಲು ಪತ್ರ ಬರೆಯಲಾಗಿದೆ. ಗಂಗೊಳ್ಳಿಗೆ ಈಗಾಗಲೇ ಬಸ್ ಇದೆ, ಹೊಸ ಮಾರ್ಗ ಅನುಷ್ಠಾನ ಸದ್ಯ ಕಷ್ಟ. ಡಿಪೊದಲ್ಲಿ 50 ಜನ ಚಾಲಕ, ನಿರ್ವಾಹಕರ ಕೊರತೆಯಿದೆ. ನೇಮಕಾತಿ ನಿರೀಕ್ಷೆಯಲ್ಲಿದ್ದೇವೆ. ಬಡಾಕೆರೆಗೆ ತಾತ್ಕಾಲಿಕ ಪರ್ಮಿಟ್‌ಗೆ ಪತ್ರ ಬರೆಯಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ಬಿ.ಟಿ.ನಾಯಕ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net