ನಾದುರಸ್ತಿಯಲ್ಲಿದೆ ನಂದಿಕೂರು ರೈಲ್ವೆ ಸೇತುವೆ

nandikoor bridge
ಹೊಂಡಗಳಿಂದ ಸಂಚಾರಕ್ಕೆ ತೊಡಕಾಗಿರುವ ನಂದಿಕೂರು ರೈಲ್ವೆ ಮೇಲ್ಸೇತುವೆ.
Published on

ಹೇಮನಾಥ್ ಪಡುಬಿದ್ರಿ

ಕೊಂಕಣ ರೈಲ್ವೆ ನಿರಾಸಕ್ತಿ, ನಿರಾಕ್ಷೇಪಣಾ ಪತ್ರ ಗೊಂದಲದಿಂದಾಗಿ ನಂದಿಕೂರು ರೈಲ್ವೆ ಸೇತುವೆ ತೀರಾ ನಾದರುಸ್ತಿಯಲ್ಲಿದ್ದು ಸಂಚಾರ ದುಸ್ತರವಾಗಿದೆ. ಲೋಕೋಪಯೋಗಿ ಇಲಾಖೆಯಿಂದ ನಾಲ್ಕು ಬಾರಿ ತೇಪೆ ಕಾರ್ಯ ನಡೆದಿದ್ದು ಬಿಟ್ಟರೆ ಶಾಶ್ವತ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ.

ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ನಂದಿಕೂರು ರೈಲ್ವೇ ಸೇತುವೆಗೆ ವರ್ಷದ ಹಿಂದೆಯಷ್ಟೇ ಸಂಪೂರ್ಣ ಮರುಡಾಂಬರೀಕರಣ ನಡೆಸಲಾಗಿತ್ತು. ಆದರೆ ಕೆಲವೇ ತಿಂಗಳಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿ ಕಳಪೆ ಕಾಮಗಾರಿ ಎಂದು ಸಾಬೀತುಗೊಂಡಿದೆ. ಈ ಭಾಗದ ಜನರು ಸೇತುವೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸರ್ಕಾರಿ ಕಚೇರಿಗಳಿಗೆ ವರ್ಷಗಳಿಂದಲೂ ಅಲೆಯುತ್ತಿದ್ದರೂ ಪರಿಹಾರ ಮಾತ್ರ ಶೂನ್ಯ.

ಪ್ರಮುಖ ಸಂಪರ್ಕ ಹೆದ್ದಾರಿ: ಈ ಮಾರ್ಗವಾಗಿ ಯುಪಿಸಿಎಲ್, ನಂದಿಕೂರು ಕೈಗಾರಿಕಾ ಪ್ರದೇಶ, ಶಾಲಾ-ಕಾಲೇಜು, ಬ್ಯಾಂಕ್‌ಗಳು ಸೇರಿದಂತೆ ಕಾರ್ಕಳ ಕಡೆ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಘನವಾಹನಗಳ ಸತತ ಸಂಚಾರದಿಂದ ಸೇತುವೆ ಹಾಳಾಗುತ್ತಿದೆ. ಪಾದಚಾರಿಗಳು ನಡೆದುಕೊಂಡು ಹೋಗುವುದೇ ದುಸ್ತರವಾಗಿದೆ. ಕೆಲವು ತಿಂಗಳ ಹಿಂದೆ ಸ್ಥಳೀಯರು ಮಾರ್ಗದ ಮಧ್ಯದಲ್ಲೇ ಗಿಡ ನೆಟ್ಟು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದರು.

ರೈಲ್ವೆ ಇಲಾಖೆಯಿಂದ ಅಸಹಕಾರ: ಪಡುಬಿದ್ರಿ- ಕಾರ್ಕಳ ರಸ್ತೆಯು ರಾಜ್ಯ ಹೆದ್ದಾರಿಯಾಗಿದ್ದು, ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿದೆ. ಸೇತುವೆ ಕೊಂಕಣ ರೈಲ್ವೆ ಇಲಾಖೆಗೆ ಸೇರಿದೆ. ಸ್ಥಳೀಯರು ಸೇತುವೆ ಸಮಸ್ಯೆ ಕುರಿತು ಕೊಂಕಣ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದರೂ ಪ್ರಯೋಜನವಾಗಿಲ್ಲ. ನಾಲ್ಕು ಬಾರಿ ಲೋಕೋಪಯೋಗಿ ಇಲಾಖೆಯೇ ತಾತ್ಕಾಲಿಕವಾಗಿ ದುರಸ್ತಿಗೊಳಿಸಿದೆ. ಆದರೆ ರೈಲ್ವೆ ಇಲಾಖೆ ತನಗೂ ಇದಕ್ಕೂ ಸಂಬಂಧವಿಲ್ಲದಂತಿದೆ.

ಸೇತುವೆ ದುರಸ್ತಿಗೆ ಸಂಬಂಧಿಸಿ ವರ್ಷದೆ ಹಿಂದೆ ಸಂಸದರ ಸಹಿತ ಕೊಂಕಣ ರೈಲ್ವೆ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿತ್ತು. ಇಲಾಖೆಯಿಂದ ಸ್ಪಂದನೆ ದೊರೆತಿಲ್ಲ. ಮತ್ತೊಮ್ಮೆ ಬೇಡಿಕೆ ಸಲ್ಲಿಸಲಾಗುವುದು. ಲೋಕೋಪಯೋಗಿ ಇಲಾಖೆಯಿಂದ ತುರ್ತು ದುರಸ್ತಿಗೂ ಒತ್ತಾಯಿಸಲಾಗಿದ್ದು, ಮಳೆ ಕಡಿಮೆಯಾದ ಕೂಡಲೇ ಕಾಮಗಾರಿ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸೌಮ್ಯಲತಾ ಶೆಟ್ಟಿ, ಅಧ್ಯಕ್ಷೆ ಪಲಿವಾರು ಗ್ರಾಪಂ. ಕೊಂಕಣ ರೈಲ್ವೆ ಇಲಾಖೆ ವ್ಯಾಪ್ತಿಯ ಈ ಸೇತುವೆ ನಿರ್ವಾಣಕ್ಕೆ ನಿರಾಕ್ಷೇಪಣಾ ಪತ್ರ ನೀಡಿದರೆ ನಾವು ವಾಡಲು ತಯಾರಿದ್ದೇವೆ. ಸಮಸ್ಯೆ ಕುರಿತಂತೆ ಪರಿಶೀಲನೆ ನಡೆಸಿದ್ದು, ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಮನೋಜ್ ಅಮೀನ್, ಇಂಜಿನಿಯರ್, ಲೋಕೋಪಯೋಗಿ ಇಲಾಖೆ ಉಡುಪಿ. https://www.vijayavani.net/humiliation-and-defeat-are-stepping-stones-to-success https://www.vijayavani.net/appreciation-for-the-work-of-the-quota-association

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net