ಬಸ್ ಸಮಸ್ಯೆ ಪರಿಹರಿಸಲು ಸೂಚನೆ : ಶಾಸಕರ ಕಚೇರಿಯಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಸಭೆ

manavi
ಕೆಎಸ್‌ಆರ್‌ಟಿಸಿ ಬಸ್‌ಗಳ ಬೇಡಿಕೆ ಹಾಗೂ ನಿಲುಗಡೆ ಸಮಸ್ಯೆ ಸಹಿತ ಪ್ರಯಾಣಿಕರ ಅಹವಾಲುಗಳ ಬಗ್ಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೇತೃತ್ವದಲ್ಲಿ ಶಾಸಕರ ಕಚೇರಿಯಲ್ಲಿ ಸಭೆ ನಡೆಯಿತು.
Published on

ಬಂಟ್ವಾಳ: ಕೆಎಸ್‌ಆರ್‌ಟಿಸಿ ಬಸ್‌ಗಳ ಬೇಡಿಕೆ ಹಾಗೂ ನಿಲುಗಡೆ ಸಮಸ್ಯೆ ಸಹಿತ ಪ್ರಯಾಣಿಕರ ಅಹವಾಲುಗಳು ಬಂದ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೇತೃತ್ವದಲ್ಲಿ ಶಾಸಕರ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಯಿತು.

ಪುತ್ತೂರು ವಿಭಾಗೀಯ ಸಂಚಾರ ಅಧಿಕಾರಿ ಮುರಳೀಧರ ಆಚಾರ್ಯ, ಮಂಗಳೂರು ವಿಭಾಗೀಯ ಸಂಚಾರ ಅಧಿಕಾರಿ ಕಮಲ್ ಕುಮಾರ್, ಬಂಟ್ವಾಳ ಡಿಪೊ ಮ್ಯಾನೇಜರ್ ಶ್ರೀಷ ಭಟ್, ಮಂಗಳೂರು ಮೂರನೇ ಡಿಪೋ ಮ್ಯಾನೇಜರ್ ಮಂಜುನಾಥ್ ಉಪಸ್ಥಿತರಿದ್ದು, ಪೂರಕ ಮಾಹಿತಿ ನೀಡಿದರು. ಕೆಲ ಸಮಸ್ಯೆಗಳ ಕುರಿತು ವಿಭಾಗೀಯ ನಿಯಂತ್ರಣಾಧಿಕಾರಿಗೆ ಶಾಸಕರು ಕರೆ ಮಾಡಿ ಸೂಚನೆಗಳನ್ನು ನೀಡಿದರು.

ಮಡಿಕೇರಿಗೆ ತೆರಳುವ ಬಸ್‌ಗಳು ಮಾಣಿಯಲ್ಲಿ ಈಗಾಗಲೇ ಸ್ಟಾಪ್ ನೀಡುತ್ತಿದ್ದು, ಕಲ್ಲಡ್ಕದಲ್ಲೂ ನೀಡುವಂತೆ ಶಾಸಕರು ಸೂಚಿಸಿದ್ದು, ಅಧಿಕಾರಿಗಳು ಸ್ಪಂದಿಸಿದರು.

ಸರಪಾಡಿ ಕಡೆಗೆ ಸಂಚಾರ ಆರಂಭಗೊಂಡ ಬಸ್ ಕೆಲವೇ ದಿನಗಳಲ್ಲಿ ತಿರುಗಾಟ ನಿಲ್ಲಿಸಿದ್ದು, ಅದನ್ನು ಮತ್ತೆ ಆರಂಭಿಸುವಂತೆ ಸೂಚಿಸಲಾಯಿತು. ಖಾಸಗಿ ವಾಹನಗಳು ಕೆಎಸ್ಸಾರ್ಟಿಸಿ ಬಸ್‌ಗೆ ಸ್ಪರ್ಧೆ ಎನ್ನುವಂತೆ ಅದೇ ಹೊತ್ತಿನಲ್ಲಿ ಆಗಮಿಸುವುದು, ಖಾಲಿ ಬಸ್ ಗಳಿದ್ದರೂ ಬಸ್‌ಗೆ ಹತ್ತದೇ ಇರುವುದೇ ಮೊದಲಾದ ವಿಚಾರದ ಕುರಿತು ಚರ್ಚಿಸಲಾಯಿತು. ಬಸ್ ಪಾಸ್ ವ್ಯವಸ್ಥೆಯ ಕುರಿತು ಕೆಲವೊಂದು ಗೊಂದಲಗಳನ್ನು ಪರಿಹರಿಸಲಾಯಿತು.

ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್, ಪ್ರಮುಖರಾದ ದೇವದಾಸ ಶೆಟ್ಟಿ, ವಜ್ರನಾಥ ಕಲ್ಲಡ್ಕ, ದಿನೇಶ್ ಅಮ್ಟೂರು, ಆನಂದ ಶಂಭೂರು, ಜಯರಾಮ ರೈ, ಸದಾನಂದ ನಾವೂರು ಮತ್ತಿತರರು ಉಪಸ್ಥಿತರಿದ್ದರು.

ಕರೊನಾ ಕಾಲದಲ್ಲಿ ನಿಂತಿದ್ದ ಸಂಚಾರ ಆರಂಭ

ಆಗಸ್ಟ್ ತಿಂಗಳಾಂತ್ಯದಲ್ಲಿ ಸಿಬ್ಬಂದಿ ನೇಮಕವಾಗಲಿದ್ದು, ಈ ಸಂದರ್ಭ ಹೆಚ್ಚುವರಿ ಬಸ್‌ಗಳನ್ನು ಅವಶ್ಯಕತೆ ಇದ್ದಲ್ಲಿ ಹಾಕುವ ಕುರಿತು ಸೂಚನೆ ನೀಡಲಾಯಿತು. ಬಾಳ್ತಿಲ, ಶಂಭೂರು, ಸರಪಾಡಿ ಸಹಿತ ಬಿ.ಸಿ.ರೋಡ್ ಪೇಟೆಯಲ್ಲಿ ಬಸ್ ನಿಲುಗಡೆ, ಪ್ರಯಾಣಿಕರ ಬವಣೆಯ ಕುರಿತು ಸ್ಥಳೀಯರು ಶಾಸಕರ ಮೂಲಕ ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಕರೊನಾ ಕಾಲದಲ್ಲಿ ನಿಂತಿದ್ದ ಕೆಲ ರೂಟ್‌ಗಳ ಬಸ್ ಸೇವೆಗಳನ್ನು ಮರುಸ್ಥಾಪಿಸುವುದಾಗಿ ತಿಳಿಸಿದರು.

ಆಗಸ್ಟ್‌ನಲ್ಲಿ ಸಿಬ್ಬಂದಿ ಕೊರತೆ ನೀಗುವ ಸಂಭವ

ಬೆಳಗಿನ ಅವಧಿಯಲ್ಲಿ ಬಿ.ಸಿ.ರೋಡಿನಲ್ಲಿ 141 ಬಸ್‌ಗಳು ಓಡಾಡುತ್ತಿದ್ದು, ಹೆಚ್ಚುವರಿ ಬಸ್‌ಗಳ ಬೇಡಿಕೆಯನ್ನು ಪರಿಶೀಲಿಸುವುದಾಗಿ ಅಧಿಕಾರಿಗಳು ತಿಳಿಸಿದರು. ಈಗಾಗಲೇ 46 ಬಸ್‌ಗಳು ಧರ್ಮಸ್ಥಳ-ಮಂಗಳೂರು ರೂಟ್‌ನಲ್ಲಿ ಸಂಚರಿಸುತ್ತಿದ್ದು, ನಾಲ್ಕು ಸೂಪರ್ ಫಾಸ್ಟ್ ಬಸ್‌ಗಳು ಓಡಾಡುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಸಿಬ್ಬಂದಿ ಕೊರತೆ ಆಗಸ್ಟ್‌ನಲ್ಲಿ ನೀಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಮಂಗಳೂರಿನಿಂದ ಶಂಭೂರಿಗೆ ಹೋಗುವ ಹಾಲ್ಟ್ ಬಸ್ ಕರೊನಾ ಸಂದರ್ಭ ನಿಂತಿತ್ತು. ಅದನ್ನು ಮರುಆರಂಭಿಸುವಂತೆ ಬೇಡಿಕೆಗೆ ಸ್ಪಂದನೆ ದೊರಕಿತು. ಪುತ್ತೂರು-ಮಂಗಳೂರು ಬಸ್ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಹೆಚ್ಚು ಬೇಕು ಎಂಬ ಬೇಡಿಕೆ ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net