ಹಳ್ಳ ಹಿಡಿಯುತ್ತಿರುವ ಕಲಾಪ, ಯಡಿಯೂರಪ್ಪ ಆಕ್ಷೇಪ; ಉಪದೇಶ ನೀಡುವುದರಿಂದ ಸಮಸ್ಯೆಗೆ ಪರಿಹಾರ ಸಿಗದು..

bsy
Published on

ಬೆಳಗಾವಿ: ನೀತಿ-ನಿರೂಪಣೆ, ಶಾಸನ ರಚನೆ, ರಾಜ್ಯದ ಪ್ರಮುಖ ವಿಷಯಗಳನ್ನು ರ್ಚಚಿಸಬೇಕಾದ ಸದನದ ಕಲಾಪ ಹಳ್ಳ ಹಿಡಿಯುತ್ತಿರುವ ಬಗ್ಗೆ ಗಂಭೀರ ಚರ್ಚೆ ನಡೆದು, ಪಕ್ಷಭೇದ ಮರೆತು ಕಳವಳ ವ್ಯಕ್ತವಾಯಿತು. ವಿಧಾನಸಭೆಯಲ್ಲಿ ಬುಧವಾರ ಶೂನ್ಯವೇಳೆ ಗ್ರಾಪಂಗಳ ವಿದ್ಯುತ್, ನೀರಿನ ಬಿಲ್ ಹೊರೆ ಬಗ್ಗೆ ಜೆಡಿಎಸ್​ನ ಕೆ.ಎಂ.ಶಿವಲಿಂಗೇಗೌಡ ಪ್ರಸ್ತಾಪಿಸಿದ ವೇಳೆ ನಡೆದ ಚರ್ಚೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಉತ್ತರಿಸಿದರು. ಆದರೂ ಹಲವು ಸದಸ್ಯರು ಪೈಪೋಟಿಯ ಮೇಲೆ ಇದೇ ವಿಷಯದಲ್ಲಿ ಚರ್ಚೆಗೆ ಮುಂದಾದಾಗ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಆಕ್ಷೇಪಿಸಿ, ನಿಯಮಾವಳಿ ಚೌಕಟ್ಟು ಹಾಕಬೇಕು ಎಂದು ಸ್ಪೀಕರ್​ಗೆ ವಿನಂತಿಸಿದ್ದು ಗಂಭೀರ ಚರ್ಚೆಯ ತಿರುವು ಪಡೆಯಿತು. ಮಾಜಿ ಸ್ಪೀಕರ್ ಕೆ.ಆರ್.ರಮೇಶ್​ಕುಮಾರ್ ಮಾತನಾಡಿ, ತರಬೇತಿಗೆ ಶಾಸಕರು ಬರಲ್ಲ, ಹಾಜರಾತಿ ಬಗ್ಗೆ ಆಯಾ ಪಕ್ಷದ ಸಚೇತಕರು ಗಣನೆಗೆ ತೆಗೆದುಕೊಳ್ಳಲ್ಲ. ಸದನದ ನಿಯಮಾವಳಿಯನ್ನೂ ಅರ್ಥ ಮಾಡಿಕೊಳ್ಳುವುದಿಲ್ಲ, ಪ್ರತಿ ಸಾರಿ ಸಭಾಧ್ಯಕ್ಷರನ್ನು ಅಸಹಾಯಕ ಸ್ಥಿತಿಗೆ ದೂಡಿ, ಆ ಪೀಠದಲ್ಲಿ ಕುಳಿತವರು ತೀವ್ರ ಮಾನಸಿಕ ವೇದನೆ ಅನುಭವಿಸುವುದು ತಪ್ಪಿಲ್ಲ. ಸದನದ ಪಾವಿತ್ರ್ಯತೆ-ಘನತೆ, ಹಿಂದಿನ ತ್ಯಾಗ-ಬಲಿದಾನ ತಿಳಿದು ನಡೆದುಕೊಳ್ಳಬೇಕು ಎಂದು ತಿಳಿ ಹೇಳಿದರು.

ಅರಾಜಕತೆ ಸೃಷ್ಟಿಯ ಎಚ್ಚರಿಕೆ: ಸ್ಪೀಕರ್ ಮಾತನಾಡಿ, ಹಿರಿಯರ ತ್ಯಾಗ ತಿಳಿದು ಪವಿತ್ರ ಭಾವನೆ ಹಾಗೂ ಒಳ್ಳೆಯ ನಡವಳಿಕೆಯನ್ನು ಸದನದಲ್ಲಿ ರೂಢಿಸಿಕೊಳ್ಳಬೇಕು. ಸಮಾಜವು ಅವಲೋಕಿಸುವ ಅಂತಃಶಕ್ತಿಯನ್ನು ಕಳೆದುಕೊಂಡಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಅರಾಜಕ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂದು ಎಚ್ಚರಿಸಿದರು. ಮಾಧುಸ್ವಾಮಿ ಮಾತನಾಡಿ, ತುರ್ತು ಅನಿವಾರ್ಯ ಸಂದರ್ಭದಲ್ಲಿ ಪ್ರಮುಖ ಘಟನೆಗಳನ್ನು ಪ್ರಸ್ತಾಪಿಸಲು ಅವಕಾಶವಿದೆ. ಆದರೆ ಅಂತಹ ವಿಷಯಗಳಿಗೆ ಹೆಚ್ಚಿನ ಸಮಯ ವ್ಯಯವಾಗಿ ಶಾಸನ, ನೀತಿ-ನಿರೂಪಣೆ, ಮುಖ್ಯ ವಿಚಾರ, ಉತ್ತರದಾಯಿತ್ವ ಗೌಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸದನದ ಕಾಳಜಿ ಅರ್ಥವಾಗುತ್ತದೆ. ಅದೇ ಕಾಲಕ್ಕೆ ಸದಸ್ಯರ ಭಾವನೆಯನ್ನು ತಿಳಿದುಕೊಳ್ಳುವ ಅಗತ್ಯವೂ ಇದೆ ಎಂದ ಕೃಷ್ಣಬೈರೇಗೌಡ, ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಧಾವಂತದಲ್ಲಿ ಸದಸ್ಯರಿದ್ದು, ಅಧಿವೇಶನದಲ್ಲಿ ಕಾಲಾವಕಾಶದ ಕೊರತೆಯು ಈ ಪರಿಸ್ಥಿತಿ ತಂದೊಡ್ಡಿದೆ ಎಂದರು. ಮಧ್ಯೆ ಪ್ರವೇಶಿಸಿದ ಎಚ್.ಡಿ.ರೇವಣ್ಣ ಅವರು ‘ಆಯಾ ಪಕ್ಷದ ಸದಸ್ಯರ ಸಂಖ್ಯಾಬಲದ ಪ್ರಕಾರ ಕಾಲಮಿತಿ ನಿಗದಿಪಡಿಸಿ, ಪಾರ್ಲಿಮೆಂಟ್​ನಲ್ಲಿರುವ ಪದ್ಧತಿ ಅನುಸರಿಸಬೇಕು’ ಎಂಬ ಸಲಹೆ ನೀಡಿದರೆ, ‘ರಾಜ್ಯದ ಅಭಿವೃದ್ಧಿ ಮತ್ತು ಜನರ ಹಿತ ಚರ್ಚೆಗಿಂತ ರಾಜಕೀಯ ಮೇಲಾಟವೇ ಹೆಚ್ಚು’ ಎಂದು ಎ.ಟಿ.ರಾಮಸ್ವಾಮಿ ಚುಚ್ಚಿದರು.

ಬಿಎಸ್​ವೈ ಸಲಹೆ: ಬೆಳಗಾವಿಯಲ್ಲಿ ಅಧಿವೇಶನ ಶುರುವಾದಾಗಿನಿಂದ ಇಂತಹ ವರ್ತನೆ ಗಮನಿಸುತ್ತಿರುವೆ. ಉಪದೇಶ ನೀಡುವುದರಿಂದ ಸಮಸ್ಯೆಗೆ ಪರಿಹಾರ ಸಿಗದು. ನಿಯಮಾವಳಿ ಕಾರ್ಯರೂಪಕ್ಕೆ ತರುವುದು ಸ್ಪೀಕರ್ ಜವಾಬ್ದಾರಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲಹೆ ನೀಡಿದರು. ನಿಯಮಗಳು ಮತ್ತು ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರುವುದು ಸ್ಪೀಕರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಹೊಣೆಗಾರಿಕೆಯಾಗಿದೆ. ಯಾರು ಏನೇ ಹೇಳಲಿ, ನಿಲುವು ಬಿಗಿಯಾಗಿರಬೇಕು ಎಂದರು. ಪ್ರತ್ಯುತ್ತರ ಧಾಟಿಯಲ್ಲಿ ಸ್ಪೀಕರ್ ಮಾತನಾಡಿ, ವ್ಯವಸ್ಥೆ ಚೆನ್ನಾಗಿ ನಡೆಸಿಕೊಂಡು ಹೋಗುವುದಕ್ಕೆ ಸಾಮೂಹಿಕ ಹೊಣೆಗಾರಿಕೆ ಇದೆ. ನಾನು ಕೈಗೊಂಡ ನಿರ್ಣಯವನ್ನು ಸರ್ಕಾರ, ಪ್ರತಿಪಕ್ಷ ಜತೆಗೆ ಇಡೀ ಸದನ ಬೆಂಬಲಿಸಬೇಕು ಎಂದರು. ಗಂಭೀರ ಚರ್ಚೆಗೆ ಸಿಎಂ ಉತ್ತರಿಸಿದ ನಂತರ ಶೂನ್ಯ ವೇಳೆಯನ್ನು ಸ್ಪೀಕರ್ ಮೊಟುಕುಗೊಳಿಸಿ, ಉತ್ತರ ಕರ್ನಾಟಕದ ವಿಷಯಗಳ ಮೇಲಿನ ಚರ್ಚೆಗೆ ಅವಕಾಶ ಕಲ್ಪಿಸಿದರು.

ಮರು ಪರಿಶೀಲನೆಗೆ ಸಲಹೆ: ಸದನದ ನಡವಳಿಕೆ ಕುರಿತು ನಡೆದ ಗಂಭೀರ ಚರ್ಚೆಗೆ ಪೂರಕವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಕಾರ್ಯ-ಕಲಾಪಗಳ ನೀತಿ-ನಿಯಮಗಳ ಪುನರ್ ಪರಿಶೀಲನೆಯ ಅಗತ್ಯವಿದೆ ಎಂಬ ಸಲಹೆ ನೀಡಿದರು. ಅಧಿವೇಶನದ ಅವಧಿ ವಿಸ್ತರಿಸಬೇಕು ಎಂಬ ಸಲಹೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಿದ್ದು, ರ್ಚಚಿಸಿ ಮುಂಬರುವ ಅಧಿವೇಶನಗಳ ಅವಧಿ ವಿಸ್ತರಣೆಗೆ ತೀರ್ವನಿಸಲಾಗುವುದು ಎಂದು ಭರವಸೆ ನೀಡಿದರು. ಸದಸ್ಯರ ಸಂಖ್ಯಾಬಲಕ್ಕೆ ಅನುಗುಣವಾಗಿ ಸಮಯ ನಿಗದಿಪಡಿಸಬೇಕೆಂಬ ಸಲಹೆ ಪರಿಗಣನೆಗೆ ಯೋಗ್ಯವಾಗಿದ್ದು, ಚರ್ಚೆ ಫಲಪ್ರದವಾಗುವುದು ಅಷ್ಟೇ ಮುಖ್ಯವಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್-ಬಿಜೆಪಿಗೆ ಎಚ್​ಡಿಕೆ ಚಾಟಿ: ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿ ಉತ್ತರ ಕರ್ನಾಟಕದ ನೀರಾವರಿ ಯೋಜನೆ ಅನುಷ್ಠಾನ ವಿಚಾರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ವಿಫಲತೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಎತ್ತಿ ತೋರಿಸಿದರು. ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ, ಮೇಕೆದಾಟು, ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಅವಶ್ಯಕತೆ ಇದೆ. ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಚಾಟಿ ಬೀಸಿದರು. 2013ರಿಂದ 2018ರ ಅವಧಿಯಲ್ಲಿದ್ದ ಕಾಂಗ್ರೆಸ್ ಸರ್ಕಾರ ನೀಡಿದ ಭರವಸೆಯನ್ನು ಪ್ರಸ್ತಾಪಿಸಿ, ಕಾಂಗ್ರೆಸ್ ನಡಿಗೆ ಕೖಷ್ಣೆ ಕಡೆಗೆ ಎಂದು ಪಾದಯಾತ್ರೆ ಮಾಡಿ ಪ್ರತಿ ವರ್ಷ 10 ಸಾವಿರ ನೀಡುತ್ತೇವೆ ಎಂದಿದ್ದ ಕಾಂಗ್ರೆಸ್ ಸರ್ಕಾರ ಐದು ವರ್ಷಗಳಲ್ಲಿ ಕೊಟ್ಟಿದ್ದು ಕೇವಲ 8,076 ಕೋಟಿ ರೂ. ಈವರೆಗೆ ಎಲ್ಲ ಸರ್ಕಾರಗಳು ಸೇರಿ 13,320 ಕೋಟಿ ರೂ. ಮಾತ್ರ ಖರ್ಚು ಮಾಡಿವೆ. 1.34 ಲಕ್ಷ ಎಕರೆ ಭೂಮಿಸ್ವಾಧೀನ ಆಗಬೇಕಾಗಿದೆ. ಈಗಿನ ವೇಗದಲ್ಲೇ ಭೂಸ್ವಾಧೀನ ಆದರೆ ಎಷ್ಟು ವರ್ಷ ಬೇಕಾಗುತ್ತದೆ ಎಂದು ನಾವೆಲ್ಲ ಯೋಚಿಸಬೇಕು ಎಂದರು. ಕಳಸಾ ಬಂಡೂರಿ ಯೋಜನೆಗೆ ಅಡಿಗಲ್ಲು ಹಾಕಿ 14 ವರ್ಷ ಆಗಿದೆ. 10 ಸಾವಿರ ಕೋಟಿ ರೂ. ಖರ್ಚು ಮಾಡಿದ್ದರೂ ನೀರು ಬಳಕೆಯಾಗುತ್ತಿಲ್ಲ. ಮೇಕೆದಾಟು ವಿಷಯದಲ್ಲೂ ಬದ್ಧತೆ ಬೇಕಾಗಿದೆ ಎಂದು ಎಚ್​ಡಿಕೆ ಹೇಳಿದರು. ಬಂಡೆಪ್ಪ ಕಾಶಂಪುರ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಇನ್ನೂ ಕೇಂದ್ರ ಪರಿಗಣಿಸಿಲ್ಲ. ಈ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ರಾಜ್ಯ ಸರ್ಕಾರ ಜಾಹಿರಾತು ನೀಡಿದ್ದಷ್ಟೇ ಬಂತು ಎಂದು ಕುಟುಕಿದರು.

ಗೌಡರ ಮಾಡೆಲ್ ಏಕಿಲ್ಲ?: ಎಚ್.ಡಿ. ದೇವೇಗೌಡರು ಕೃಷ್ಣಾ ಮೇಲ್ದಂಡೆ ಯೋಜನೆಗೆ ತೋರಿದ ಕಾಳಜಿ ಮತ್ತು ಅನುಷ್ಠಾನದ ಮಾದರಿಯನ್ನು ಗೌಡ ಮಾಡಲ್ ಎಂದು ವರ್ಲ್ಡ್ ಬ್ಯಾಂಕ್ ಉಲ್ಲೇಖಿಸಿತ್ತು. ಇದನ್ನು ನಾವು ಗಮನಿಸ ಬೇಕು ಎಂದು ತಮ್ಮ ತಂದೆಯ ಕಾರ್ಯವೈಖರಿ ನೆನಪಿಸಿಕೊಂಡ ಕುಮಾರಸ್ವಾಮಿ, ಅಧಿಕಾರದಲ್ಲಿದ್ದ ಸಣ್ಣ ಅವಧಿಯಲ್ಲಿ ಕನಿಷ್ಠ ಕಾಲಮಿತಿಯಲ್ಲಿ ಯಾವ ರೀತಿ ಭೂಸ್ವಾಧೀನ ಮಾಡಿಕೊಳ್ಳಲಾಯಿತೆಂದು ಐಎಎಸ್ ಅಧಿಕಾರಿ ಜಮದಾರ್ ದಾಖಲಿಸಿದ್ದನ್ನು ಸದನದಲ್ಲಿ ಉಲ್ಲೇಖಿಸಿದರು.

ಹಳ್ಳಿ ಬೀದಿ ದೀಪಗಳ ನಿರ್ವಹಣೆಗೆ ಸ್ವಯಂಚಾಲಿತ ವ್ಯವಸ್ಥೆ: ಹಳ್ಳಿಗಳಲ್ಲಿ ಬೀದಿ ದೀಪಗಳು ಹಾಗೂ ಕುಡಿಯುವ ನೀರು ಪೂರೈಕೆ ಟ್ಯಾಂಕ್​ಗಳ ನಿರ್ವಹಣೆಗೆ ಸ್ವಯಂಚಾಲಿತ ವ್ಯವಸ್ಥೆ ಶೀಘ್ರವೇ ಜಾರಿಗೆ ಬರಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿಧಾನಸಭೆಯಲ್ಲಿ ಪ್ರಕಟಿಸಿದರು. ರಾಜ್ಯದಲ್ಲಿ ಎಲ್ಲ ಗ್ರಾಪಂಗಳು 2015ರಿಂದ ವಿದ್ಯುತ್ ಬಿಲ್ ಕಟ್ಟಿಲ್ಲ. ಇದರಿಂದಾಗಿ 4,229 ಕೋಟಿ ರೂ. ಬಾಕಿಯಿದೆ. 15ನೇ ಹಣಕಾಸು ಸೇರಿದಂತೆ ವಿವಿಧ ಮೂಲಗಳಿಂದ ಅನುದಾನ ಪಾಲು ಹೆಚ್ಚಿದ್ದರೂ ಈ ಸಮಸ್ಯೆ ಬಗೆಹರಿದಿಲ್ಲ. ಅನೇಕ ಕಡೆ ಬೀದಿ ದೀಪಗಳು ರಾತ್ರಿ-ಹಗಲು ಬೆಳಗಿದರೆ, ಟ್ಯಾಂಕ್​ಗಳು ಭರ್ತಿಯಾಗಿ ನೀರು ಹರಿದರೂ ಮೋಟಾರು ಬಂದ್ ಆಗುವುದಿಲ್ಲ. ಇದು ಸಾಲದೆಂಬಂತೆ ಜನರು ನೇರವಾಗಿ ವಿದ್ಯುತ್ ಕಂಬಕ್ಕೆ ತಂತಿ ಹಾಕಿ ವಿದ್ಯುತ್ ಬಳಸುತ್ತಿದ್ದು, ನಿರ್ವಹಣೆಯಲ್ಲಿ ಗ್ರಾಪಂಗಳ ಜತೆಗೆ ಜನರ ಜವಾಬ್ದಾರಿಯಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net