ಸೇತುವೆ ಪಯಣ ‘ಅಪಾಯ’ಕಾರಿ

bridge
ಎರಡೂ ಗ್ರಾಮದ ಸಂಪರ್ಕಕ್ಕಿರುವ ಅಪಾಯಕಾರಿ ಕಿರು ಸೇತುವೆ
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಒಂದು ಗ್ರಾಮದಿಂದ ಇನ್ನೊಂದು ಗ್ರಾಮ ಸಂಪರ್ಕ ಸಾಧಿಸಲು ರಸ್ತೆ ವ್ಯವಸ್ಥೆಯಿಲ್ಲದೆ ಗ್ರಾಮಸ್ಥರು ಅಪಾಯಕಾರಿ ಅಣೆಕಟ್ಟಿನ ಮೇಲೆ ಕಾಲ್ನಡಿಗೆಯಲ್ಲೇ ಸಾಗಬೇಕಾದ ಅನಿವಾರ್ಯತೆ ಮುಂಡ್ಕೂರು ಹಾಗೂ ಉಳೆಪಾಡಿ ನಡುವೆ ಹರಿಯುತ್ತಿರುವ ಶಾಂಭವಿ ನದಿ ತೀರದಲ್ಲಿದೆ.

ಕಾಲು ನಡಿಗೆಯಲ್ಲಿ ಸಂಚಾರ

ತುಂಬಿ ಹರಿಯುವ ಶಾಂಭವಿ ನದಿಗೆ ಅಡ್ಡಲಾಗಿ ಕಟ್ಟಲಾದ ಹಳೇ ಅಣೆಕಟ್ಟಿನ ಸೇತುವೆ ನೋಡಲು ಸುಂದರವಾಗಿದ್ದರೂ ಇಲ್ಲಿ ಯಾವುದೇ ವಾಹನ ಓಡಾಡುವುದಿಲ್ಲ. ಒಂದೆಡೆ ಕಾರ್ಕಳ ತಾಲೂಕಿನ ಮುಂಡ್ಕೂರು ಹಾಗೂ ಮಂಗಳೂರು ಮೂಲ್ಕಿ ತಾಲೂಕಿನ ಉಳೆಪಾಡಿ ಬಳ್ಕುಂಜೆಗೆ ಸಂಪರ್ಕ ಕಲ್ಪಿಸುವ ಹತ್ತಿರದ ದಾರಿಯಾಗಿದ್ದು, ಎರಡು ಗ್ರಾಮದ ಜನ ನಿತ್ಯ ಕೆಲಸಕ್ಕೆ ಹಾಗೂ ವಿದ್ಯಾರ್ಥಿಗಳು ಅಣೆಕಟ್ಟಿನ ಮೇಲೇರಿ ಕಾಲುನಡಿಗೆಯಲ್ಲಿ ಸರ್ಕಸ್ ಮಾಡಿಕೊಂಡು ಸಾಗುವುದು ಅನಿವಾರ್ಯ. ಸೇತುವೆ ಒಂದು ಭಾಗದಲ್ಲಿ ಜನ ಹಿಡಿಯಲು ಬಳಸುತ್ತಿದ್ದ ಕಬ್ಬಿಣದ ರಾಡು ತುಕ್ಕು ಹಿಡಿದು ನದಿ ನೀರುಪಾಲಾಗಿ ಜನರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವ ಸ್ಥಿತಿ ಇದೆ.

ವಾಹನ ಸಂಚಾರ ಅಸಾಧ್ಯ

ಕಿರು ಸೇತುವೆ ಮೂಲಕ ಉಳೆಪಾಡಿಯ ಬಹುತೇಕ ಮಂದಿ ಹಲವು ಕಾರಣಗಳಿಗೆ ಮುಂಡ್ಕೂರಿಗೆ ಬರಲೇ ಬೇಕು. ವಿಪರ್ಯಾಸ ಎಂದರೆ ಉಳೆಪಾಡಿ ದ.ಕ. ಜಿಲ್ಲೆಯ ಐಕಳ ಗ್ರಾಪಂ ವ್ಯಾಪ್ತಿಗೆ ಬಂದರೆ, ಇಲ್ಲಿನ ಜನರಿಗೆ ವಿಳಾಸ ಹೇಳಲು ಅಂಚೆ ಮುಂಡ್ಕೂರು..! ಈ ಕಾರಣಕ್ಕಾಗಿ ಇಲ್ಲಿನ ಜನ ಅಂಚೆ ಕಚೇರಿ ಸಹಿತ ಮತ್ತಿತರ ಸಾಮಗ್ರಿ ಖರೀದಿಗೆ ಈ ಕಿರುಸೇತುವೆ ಮೂಲಕವೇ ಮುಂಡ್ಕೂರು ಸೇರಬೇಕು. ಮುಂಡ್ಕೂರಿನಿಂದ ಮೂಲ್ಕಿ, ಬಳ್ಕುಂಜೆ, ಕರ್ನಿರೆ, ಪಲಿಮಾರು, ಮಂಗಳೂರು ಕಡೆಗೆ ತೆರಳುವವರಿಗೆ ಇದು ಹತ್ತಿರದ ಮಾರ್ಗವಾದರೂ ಸೂಕ್ತ ರಸ್ತೆ ಸಹಿತ ಸೇತುವೆ ಇಲ್ಲದಿರುವುದರಿಂದ ವಾಹನ ಸಂಚಾರ ನಡೆಸಲಾಗದ ಸ್ಥಿತಿ. ಉಳೆಪಾಡಿ, ಬಳ್ಕುಂಜೆ ಭಾಗದ ಜನರಿಗೂ ಕಾರ್ಕಳ ಸೇರಲು ಇದು ಹತ್ತಿರದ ಒಳದಾರಿಯಾಗಿದೆ. ಹೀಗಾಗಿ ಹಲವು ದಶಕಗಳಿಂದ ರಸ್ತೆ ಸಹಿತ ಸೇತುವೆ ನಿರ್ಮಾಣದ ಬೇಡಿಕೆಯಿದ್ದರೂ ಇನ್ನೂ ಪೂರೈಕೆಯಾಗಿಲ್ಲ.

ಸಂಪರ್ಕ ಕಡಿತ

ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ತುಂಬಿ ಹರಿಯುವ ಶಾಂಭನಿ ನದಿಯ ನೀರಿನಿಂದ ಈ ಅಣೆಕಟ್ಟು ಮುಳುಗಡೆಯಾಗುತ್ತದೆ. ಈ ಸಂದರ್ಭದಲ್ಲಿ ಮುಂಡ್ಕೂರು ಹಾಗೂ ಉಳೆಪಾಡಿ ಉಳೆಪಾಡಿಗೆ ಕ್ರಮಿಸಲು ಜನರು ಹಾಗೂ ವಿದ್ಯಾರ್ಥಿಗಳು 4ರಿಂದ 5 ಕಿ.ಮೀ. ದೂರವಾಗಿ ಕೆಸರು ತುಂಬಿದ ಗದ್ದೆ, ಹಳ್ಳ ದಾಟಿ ಹರ ಸಾಹಸ ಪಡೆಯುತ್ತಿದ್ದರೆ, ವಾಹನ ಹೊಂದಿದವರು ಸಂಕಲಕರಿಯ ಪೇಟೆ ಕ್ರಾಸ್ ಮೂಲಕ ಸುಮಾರು 15ರಿಂದ 20 ಕಿ.ಮೀ ಸುತ್ತಿ ಬಳಸಿಕೊಂಡು ಸಾಗಬೇಕಾಗಿದೆ.

ರಸ್ತೆ ನಿರ್ಮಾಣಕ್ಕೆ ಶತ ಪ್ರಯತ್ನ

ಮುಂಡ್ಕೂರು-ಉಳೆಪಾಡಿಗೆ ಬ್ರಹತ್ ಸೇತುವೆ ಸಹಿತ ಸುಸಜ್ಜಿತ ರಸ್ತೆ ನಿರ್ಮಿಸಲು ಜನಪ್ರತಿನಿಧಿಗಳು ಶತ ಪ್ರಯತ್ನ ನಡೆಸಿದರೂ ಯೋಜನೆ ಕಗ್ಗಂಟಾಗಿಯೇ ಉಳಿದಿದೆ.

ನೆನಗುದಿಗೆ ಬಿದ್ದ ಯೋಜನೆ

2016ರಲ್ಲಿ 10 ಕೋಟಿ ರೂ.ಗಳ ಯೋಜನೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಚಿವರಿಗೆ ಸಲ್ಲಿಸಿದ್ದರು. 2018ರಲ್ಲಿ ಕೆ.ಆರ್.ಡಿ.ಎಲ್. ಸಂಸ್ಥೆಯವರು ಎರಡು ಬಾರಿ ಸ್ಥಳಕ್ಕೆ ಬಂದು ಸಮೀಕ್ಷೆ ನಡೆಸಿದ್ದರು. ಚೆನೈ ಮೂಲದ ಸಂಸ್ಥೆಯವರೂ ಡಿಪಿಆರ್ ತಯಾರಿಸಿವ ಸಲುವಾಗಿ ಸ್ಥಳಕ್ಕೆ ಆಗಮಿಸಿ ಆಳತೆ ಮಾಡಿದ್ದರು. 2016ರಲ್ಲಿಯೇ 5 ಕೋಟಿ ರೂ. ವೆಚ್ಚದ ಯೋಜನೆಗೆ ಅಂದಾಜು ಪಟ್ಟಿ ತಯಾರಿಸಲಾಗಿತ್ತು. ಆದರೆ ಎರಡೂ ಗ್ರಾಮಕ್ಕೆ ಅಗತ್ಯವಿರುವ ಸಂಪರ್ಕಕೊಂಡಿ ಮಾತ್ರ ಇನ್ನೂ ನಿರ್ಮಾಣವಾಗಿಲ್ಲ.

ಈ ಭಾಗದಲ್ಲೊಂದು ಸುಂದರ ಸೇತುವೆ ಬೇಕೆನ್ನುವುದು ಇಂದು ನಿನ್ನೆಯ ಕನಸ್ಸಲ್ಲ. ಹಲವು ದಶಕಗಳಿಂದ ಬೇಡಿಕೆಯನ್ನು ಸಲ್ಲಿಸುತ್ತ ಬಂದರೂ ಇಲ್ಲಿವರೆಗೂ ಕನಸ್ಸು ಮಾತ್ರ ನನಸ್ಸಾಗಿಲ್ಲ.-ಅರುಣ್ ಕುಮಾರ್, ಗ್ರಾಮಸ್ಥರು

ಇಲ್ಲಿನ ಅಣೆಕಟ್ಟಿನ ಸೇತುವೆ ತುಂಬಾ ಅಪಾಯಕಾರಿಯಾಗಿದೆ. ತಳಭಾಗದಲ್ಲಿ ಪಿಲ್ಲರ್‌ಗಳು ಬಿರುಕುಬಿಟ್ಟಿವೆ. ಯಾವುದೇ ಸಂದರ್ಭದಲ್ಲಿ ಈ ಕಿರು ಸೇತುವೆ ಕುಸಿದು ಬೀಳುವ ಸಾಧ್ಯತೆಗಳಿದ್ದು ಭಾರಿ ಅನಾಹುತ ನಡೆಯುವ ಮುನ್ನ ಅಧಿಕಾರಿಗಳು ಎಚ್ಚೆತ್ತು ಎರಡೂ ಗ್ರಾಮದ ಉಪಯೋಗಕ್ಕೆ ಒಂದು ಸೇತುವೆ ನಿರ್ಮಿಸಿಕೊಡಬೇಕಾಗಿದೆ.-ಹರೀಶ್ ಸ್ಥಳೀಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net