ಬ್ರ್ಯಾಂಡ್ ಬೆಂಗಳೂರು ವರದಿ ಶೀಘ್ರ ಸಲ್ಲಿಕೆ

Brand Bengaluru
Published on

ಬೆಂಗಳೂರು: ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯಡಿ ಸಂಚಾರಯುಕ್ತ, ಹಸಿರು, ಸ್ವಚ್ಛ, ಜನಹಿತ, ಆರೋಗ್ಯಕರ, ಟೆಕ್, ಜಲಸುರಕ್ಷಾ ಹಾಗೂ ಶಿಕ್ಷಣ ಸಂಬಂಧಿಸಿದಂತೆ ಸಿದ್ಧಪಡಿಸಿರುವ ವರದಿಗಳನ್ನು ಕೂಡಲೇ ಸರ್ಕಾರಕ್ಕೆ ಸಲ್ಲಿಸುವುದಾಗಿ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ತಿಳಿಸಿದ್ದಾರೆ.

ಬ್ರ್ಯಾಂಡ್ ಬೆಂಗಳೂರಿನ ಸಮಾವೇಶ ನಡೆಸುವ ನಿಟ್ಟಿನಲ್ಲಿ ಶುಕ್ರವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದರು.

ಯೋಜನೆ ಅನುಷ್ಠಾನಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಈಗಾಗಲೇ ಸರ್ವಪಕ್ಷಗಳ ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಲಾಗಿದೆ. ವಿವಿಧ ಕ್ಷೇತ್ರಗಳ ಗಣ್ಯರು, ಸ್ಥಳೀಯ ನಾಗರಿಕ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ನಿವಾಸಿ ಕ್ಷೇಮಾಭಿವೃದ್ಧಿ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಸಲಹೆ ಮತ್ತು ಅಭಿಪ್ರಾಯ ಪಡೆಯಲಾಗಿದೆ ಎಂದರು.

70 ಸಾವಿರಕ್ಕೂ ಅಧಿಕ ಸಲಹೆಗಳು ಸ್ವೀಕಾರವಾಗಿದೆ. ಬೆಂಗಳೂರನ್ನು ಜ್ಞಾನದ ನಗರವನ್ನಾಗಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಬೆಂಗಳೂರು ವಿಷಯದ ಬಗ್ಗೆ ಕೂಡ ಶಿಕ್ಷಣ ತಜ್ಞರ ಸಲಹೆ ಪಡೆಯಲಾಗಿದೆ. ಸಿದ್ಧಪಡಿಸಿರುವ ವರದಿಗಳ ಆಧಾರದ ಮೇಲೆ 8 ಪ್ರತ್ಯೇಕ ಪ್ರ್ಯಾತ್ಯಕ್ಷಿಕೆಗಳನ್ನು ಸಿದ್ದಪಡಿಸಿಕೊಳ್ಳಬೇಕು. ಸಾರ್ವಜನಿಕರಿಂದ ಸ್ವೀಕೃತಿಗೊಂಡಿರುವ ಅಭಿಪ್ರಾಯಗಳ ಬಗ್ಗೆ, ತಜ್ಞರೊಂದಿಗೆ ವಿಚಾರ ವಿನಿಮಯ ನಡೆಸುವ ಬಗ್ಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸಮಾವೇಶವನ್ನು ಏರ್ಪಡಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಬ್ರ್ಯಾಂಡ್ ಬೆಂಗಳೂರು ಸಮಾವೇಶ ಸಮಿತಿ ಸದಸ್ಯರಾದ ಡಾ. ತ್ರಿಲೋಕ್ ಚಂದ್ರ, ಡಾ. ಹರೀಶ್ ಕುಮಾರ್, ನೋಡಲ್ ಅಧಿಕಾರಿಗಳು, ಸಮನ್ವಯಾಧಿಕಾರಿಗಳು ಮತ್ತು ಶೈಕ್ಷಣಿಕ ಪಾಲುದಾರ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net