ಕಾಂಗ್ರೆಸ್ ಸೇರುವವರಿಗೆ ಖಾತೆ ಸೃಷ್ಟಿಸಿ, ಅದನ್ನು ಡಿಕೆಶಿಗೆ ನೀಡಲಿ: ಬಿ.ವೈ.ವಿಜಯೇಂದ್ರ ಕಿಡಿ

b.y.Vijayendra
ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ
Published on

ಶಿವಮೊಗ್ಗ: ಬಿಜೆಪಿ ಸೇರಿ ಬೇರೆ ಪಕ್ಷಗಳ ಮಾಜಿ ಶಾಸಕರು, ಅಸಮಾಧಾನಿತರನ್ನು ಕರೆದುಕೊಂಡು ಹೋಗಿ ಊಟ ಮಾಡುವುದೇ ಕಾಂಗ್ರೆಸ್‌ನ ದೊಡ್ಡ ಕೆಲಸವಾಗಿದೆ. ಹಾಗಾಗಿ ಕಾಂಗ್ರೆಸ್ ಸೇರುವವರಿಗಾಗಿ ಒಂದು ಖಾತೆ ಸೃಷ್ಟಿಸಿ, ಆ ಖಾತೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನೀಡಲಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನ ಕೆಲ ನಾಯಕರು ಬೇರೆ ಬೇರೆ ಪಕ್ಷಗಳ ಅಸಮಾಧಾನಿತರನ್ನು ಕರೆದು ಮಾತನಾಡಿಸಿ ಜತೆಗೆ ಊಟ ಮಾಡುವ ಫೋಟೊಗಳನ್ನು ಹರಿಬಿಡುತ್ತಿದ್ದಾರೆ. ಈ ಮೂಲಕ ಬಿಜೆಪಿಯಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಅದಕ್ಕೆ ನಾವು ಸೊಪ್ಪು ಹಾಕುವುದಿಲ್ಲ ಎಂದರು.
ಬಿಜೆಪಿ, ಜೆಡಿಎಸ್‌ನ ಕೆಲವರು ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆಂದು ಗಾಳಿ ಸುದ್ದಿ ಹಬ್ಬಿಸುವ ಕೆಲಸವನ್ನು ಕಾಂಗ್ರೆಸ್ ವ್ಯವಸ್ಥಿತವಾಗಿ ಮಾಡುತ್ತಿದೆ. ಹಾಗಾಗಿ ಕಾಂಗ್ರೆಸ್ ಹೊಸದಾಗಿ ಅಂತಹವರಿಗೊಂದು ಖಾತೆ ತೆರೆಯಬೇಕು. ಆ ಖಾತೆಯನ್ನು ಸಿಎಂ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದರೆ ಸಮರ್ಥವಾಗಿ ನಿಭಾಯಿಸುವರು ಎಂದು ಗೇಲಿ ಮಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕನ ಜವಾಬ್ದಾರಿಯನ್ನು ನನಗೆ ನೀಡುವಂತೆ ಕಾರ್ಯಕರ್ತರು ಅಲ್ಲಲ್ಲಿ ಚರ್ಚೆ ಮಾಡುತ್ತಿದ್ದಾರೆ. ಆದರೆ ಯಾರಿಗೆ ಅಧಿಕಾರ ಕೊಟ್ಟರೆ ಪಕ್ಷಕ್ಕೆ ಹೆಚ್ಚಿನ ಅನುಕೂಲ ಆಗುತ್ತದೆ. ಸಂಘಟನೆಗೆ ಶಕ್ತಿ ಸಿಗಲಿದೆ ಎಂಬುದನ್ನು ವರಿಷ್ಠರೇ ನಿರ್ಧರಿಸುತ್ತಾರೆ. ಈ ಬಗ್ಗೆ ಬಹಿರಂಗವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net