

ಬದಿಯಡ್ಕ: ದೇವಾಲಯಗಳು ಸಮಾಜದ ಸಕಾರಾತ್ಮಕ ಶಕ್ತಿಯ ಕೇಂದ್ರಗಳಾಗಿವೆ. ನಾವು ಸಂಘಟಿತರಾಗಿ ಇಂತಹ ಕೇಂದ್ರಗಳನ್ನು ಬಲಪಡಿಸಬೇಕು. ಸಕಾರಾತ್ಮಕ ಪ್ರಾರ್ಥನೆಗೆ ಅಪರಿಮಿತ ಶಕ್ತಿ ಇದೆ ಎಂದು ವಿಶ್ವಹಿಂದು ಪರಿಷತ್ತು ಮುಖಂಡ ಹಾಗೂ ಬಂಟರ ಸಂಘದ ಅಧ್ಯಕ್ಷ ಸಂತೋಷ್ ರೈ ಗಾಡಿಗುಡ್ಡೆ ಹೇಳಿದರು.
ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಭಾನುವಾರ ನಡೆದ ಸಿದ್ಧತಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕುಂಟಾರು ರವೀಶ ತಂತ್ರಿ ಮಾರ್ಗದರ್ಶನದಲ್ಲಿ ಜುಲೈ 6 ಮತ್ತು 7ರಂದು ಶ್ರೀಕ್ಷೇತ್ರದಲ್ಲಿ ವಿವಿಧ ಹವನಗಳು ಹಾಗೂ ಅಪ್ಪ ಸೇವೆ ನಡೆಯಲಿದ್ದು, ಇದರ ನಿರ್ವಹಣೆ ಕುರಿತು ಚರ್ಚಿಸಲಾಯಿತು.
ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವೈ.ಶಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಕೃಪಾನಿಧಿ ಶಾಸ್ತ್ರಿ ಕೊಲ್ಲಂಗಾನ, ಕೋಶಾಧಿಕಾರಿ ಸುಬ್ರಹ್ಮಣ್ಯ ವೈ.ವಿ.ಉಪಸ್ಥಿತರಿದ್ದರು. ಡಾ.ಅನ್ನಪೂರ್ಣೇಶ್ವರಿ ಏತಡ್ಕ ಪ್ರಾರ್ಥಿಸಿದರು. ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.