

ಮಂಡ್ಯ: ನೀರಿನಲ್ಲಿ ಮುಳುಗಿ, ಕರೆಂಟ್ ಶಾಕ್ ತಗುಲಿ.. ಹೀಗೆ ಮಕ್ಕಳು ದುರಂತ ಅಂತ್ಯ ಕಾಣುತ್ತಿರುವ ಪ್ರಕರಣಗಳು ಮತ್ತೆ ಮತ್ತೆ ಸಂಭವಿಸುತ್ತಿದ್ದು, ಇದೀಗ ಇನ್ನೊಬ್ಬ ಬಾಲಕ ಅಂಥದ್ದೇ ಸಾವಿಗೀಡಾಗಿದ್ದಾನೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಹತ್ತು ವರ್ಷದ ಗಗನ್ ಮೃತಪಟ್ಟ ಬಾಲಕ. ಈ ಹುಡುಗ ರಸ್ತೆಯಲ್ಲಿ ಆಟವಾಡುತ್ತಿದ್ದು, ಅದೇ ಸಮಯಕ್ಕೆ ಗೋಡೆಯೊಂದು ಕುಸಿದು, ಅದರಡಿಗೆ ಸಿಲುಕಿ ಬಾಲಕ ಮೃತಪಟ್ಟಿದ್ದಾನೆ. ಜವರೇಗೌಡ ಎಂಬವರ ಮನೆಯ ಗೋಡೆ ಕುಸಿದು ಈ ದುರಂತ ಸಂಭವಿಸಿದೆ.
ಮಳೆಯಿಂದಾಗಿ ಶಿಥಿಲಗೊಂಡಿದ್ದ ಮನೆಯ ಗೋಡೆ ಕುಸಿದು ಬಾಲಕ ತೀವ್ರ ಗಾಯಗೊಂಡಿದ್ದ. ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ. ಇದೇ ಘಟನೆಯಲ್ಲಿ ಮನೆಯ ಕೊಟ್ಟಿಗೆಯಲ್ಲಿದ್ದ ಎರಡು ಹಸು, ಕುರಿಗಳು ಕೂಡ ಸಾವಿಗೀಡಾಗಿವೆ.