

ವಿಜಯವಾಣಿ ಸುದ್ದಿಜಾಲ ಮಂಗಳೂರು/ಗಂಗೊಳ್ಳಿ
ಆಳ ಸಮುದ್ರ ಮೀನುಗಾರಿಕೆಯ ರಜೆಯ ಅವಧಿಯಾದ ಜೂನ್ ಮತ್ತು ಜುಲೈಯಲ್ಲಿ ನಾಡದೋಣಿ ಮೀನುಗಾರಿಕೆಗೆ ಮಾತ್ರ ಅವಕಾಶ. ಈ ಬಾರಿ ತೂಫಾನ್ ಅಭಾವದಿಂದ ಹಾಗೂ ರೆಡ್ ಅಲರ್ಟ್ ಇದ್ದುದರಿಂದ ಮೀನುಗಾರಿಕೆಗೆ ನಡೆಸಲಾಗದೆ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಾವಿರಾರು ನಾಡದೋಣಿಗಳಿವೆ. ವರ್ಷದಲ್ಲಿ ಸುಮಾರು 3 ತಿಂಗಳು ಮೀನುಗಾರಿಕೆ ನಡೆಸಲು ಅವಕಾಶವಿದ್ದು, ಆ ಅವಧಿಯಲ್ಲಿ ಹವಾಮಾನ ವೈಪರೀತ್ಯ ಎದುರಾದರೆ ಸಮುದ್ರಕ್ಕೆ ಇಳಿಯುವಂತಿಲ್ಲ. ಈ ಬಾರಿ ಜೂನ್‌ನಲ್ಲಿ ಮಳೆ ವಿಳಂಬವಾಗಿದೆ. ಆ ಬಳಿಕ ಆಗಾಗ ರೆಡ್ ಅಲರ್ಟ್ ಇದ್ದುದರಿಂದ ಸಮುದ್ರ ಪ್ರಕ್ಷುಬ್ದತೆಯಿಂದ ಕೂಡಿದ್ದು, ಹವಾಮಾನ ಇಲಾಖೆ ಎಚ್ಚರಿಕೆ ಹಿನ್ನೆಲೆಯಲ್ಲಿ ಎಲ್ಲ ಬೋಟುಗಳು ಲಂಗರು ಹಾಕಿವೆ. ತೂಫಾನ್ ಬಾರದ ಕಾರಣ ಮೀನು ಲಭ್ಯತೆಯೂ ಇಲ್ಲದಿರುವುದರಿಂದ ಇದನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಸಾವಿರಾರು ಮಂದಿಯ ಬದುಕು ಅಯೋಮಯವಾಗಿದೆ.
ನಾಡದೋಣಿ ಮೀನುಗಾರರಿಗೆ ಹೇರಳವಾಗಿ ಮೀನು ಸಿಗಬೇಕಾದರೆ ಸಮುದ್ರದಲ್ಲಿ ಎರಡು ಮೂರು ಬಾರಿ ಬಿರುಗಾಳಿ ಬರಬೇಕು. ಸಮುದ್ರದ ಅಬ್ಬರ ಹೆಚ್ಚಾಗಬೇಕು. ನೀರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸಬೇಕು. ಆಗ ಮೀನುಗಳು ಆಹಾರ ಹುಡುಕುತ್ತಾ ಸಮುದ್ರ ಕಿನಾರೆ ಕಡೆಗೆ ಹಿಂಡು ಹಿಂಡಾಗಿ ಬರುತ್ತವೆ. ಆಗ ಮಾತ್ರ ನಾಡದೋಣಿ ಮೀನುಗಾರಿಕೆ ಉತ್ತಮವಾಗಿ ನಡೆಯುತ್ತದೆ. ಈ ಬಾರಿ ಅಂತಹ ಬಿರುಗಾಳಿ ಬಾರದ ಕಾರಣ ನಾಡದೋಣಿ ಮೀನುಗಾರಿಕೆಗೆ ಭಾರಿ ನಷ್ಟ ಉಂಟಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ.
ತಾಜಾ ಮೀನು ಸಿಗುವ ಕಾರಣ ನಾಡದೋಣಿ ಮೀನಿಗೆ ಉತ್ತಮ ಬೇಡಿಕೆ ಇದೆ. ಆದರೆ ಹವಾಮಾನ ಮೀನುಗಾರಿಕೆಗೆ ಪೂರಕವಾಗಿಲ್ಲ. ನಾಡದೋಣಿಯಲ್ಲಿ ಬಂಗುಡೆ, ಬೂತಾಯಿ, ಸಿಗಡಿ, ಏಡಿ ಮೊದಲಾದ ಮೀನುಗಳು ಹೆಚ್ಚಾಗಿ ದೊರೆಯುತ್ತವೆ. ಮೀನುಗಾರರು ದಡ ತಲುಪುವ ಮೊದಲೇ ಆ ಮೀನಿಗೆ ಗ್ರಾಹಕರಿಂದ ಬೇಡಿಕೆ ಬಂದಿರುತ್ತದೆ. ಆದರೆ ತೂಫಾನ್ ಬಾರದ ಕಾರಣ ಈ ಬಾರಿಯೂ ನಾಡದೋಣಿ ಮೀನುಗಾರಿಕೆಗೆ ಹೊಡೆತ ಉಂಟಾಗಿದೆ.
ನಾಡದೋಣಿಯವರು ನೇತ್ರಾವತಿ, ಫಲ್ಗುಣಿ ಮೊದಲಾದ ನದಿಗಳಲ್ಲಿ ಮೀನುಗಾರಿಕೆ ನಡೆಸುತ್ತಾರೆ. ಆದರೆ ಈ ಬಾರಿ ನದಿಗಳಲ್ಲಿ ಮೀನುಗಾರಿಕೆ ಮಾಡಿದ್ದು ಕಡಿಮೆ ದಿನಗಳು. ಮಳೆಯಾಗಿ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾದ ಕಾರಣ ಮೀನುಗಾರರು ಮೀನುಗಾರಿಕೆಗೆ ಹೋಗಿಲ್ಲ. ನದಿಗಳಲ್ಲಿ ಸಾಮಾನ್ಯವಾಗಿ ನಂಗ್, ಏಡಿ, ಕಾನೆ, ಪಯ್ಯೆ, ಸೋಡಿ, ಸಿಗಡಿ ಮೊದಲಾದ ಮೀನುಗಳು ದೊರಕುತ್ತಿದೆ. ಇದಕ್ಕೆ ಉತ್ತಮ ಬೇಡಿಕೆ ಇದೆ.
ಪ್ರಸಕ್ತ ಸಾಲಿನ ಮೀನುಗಾರಿಕಾ ಋತು ಆಗಸ್ಟ್ 1ರಂದು ಆರಂಭವಾಗಲಿದ್ದು, ಆಳ ಸಮುದ್ರ ಮೀನುಗಾರಿಕಾ ಬೋಟುಗಳು ಕಡಲಿಗಿಳಿಯಲಿವೆ. ಹೀಗಾಗಿ ನಾಡದೋಣಿ ಮೀನುಗಾರಿಕೆಗೆ ಅವಕಾಶ ಕ್ಷೀಣಿಸಿದ್ದು, ಆಗಸ್ಟ್‌ನಲ್ಲಿ ಸಿಕ್ಕಷ್ಟು ದಿನ ಮೀನುಗಾರಿಕೆ ನಡೆಸುವ ಉತ್ಸಾಹ ನಾಡದೋಣಿ ಮೀನುಗಾರರಲ್ಲಿದೆ. ‘ಆಗಸ್ಟ್‌ನಲ್ಲಿ ನಾಡದೋಣಿ ಮೀನುಗಾರಿಕೆ ಮಾಡುತ್ತೇವೆ. ಉತ್ತಮ ಮೀನು ಸಿಗುವ ನಿರೀಕ್ಷೆ ಇದೆ’ ಎಂದು ಮಂಗಳೂರಿನ ಮೀನುಗಾರ ಸುಭಾಷ್ ಬೆಂಗ್ರೆ ತಿಳಿಸಿದ್ದಾರೆ.
ಆಗಸ್ಟ್ 1ರಿಂದ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶವಿದ್ದರೂ ಸದ್ಯ ಆರಂಭ ಸಾಧ್ಯತೆ ಕಡಿಮೆ. ‘ಕಳೆದ 3-4 ದಿನದಿಂದ ರೆಟ್ ಅಲರ್ಟ್ ಘೋಷಣೆಯಾಗಿದ್ದರಿಂದ ಮುಂದಿನ 4-5 ದಿನ ಕರಾವಳಿ ಪರಿಸ್ಥಿತಿ ಹೇಳಲು ಸಾಧ್ಯವಿಲ್ಲ. ಆಗಸ್ಟ್ 1ರಿಂದ ಯಾಂತ್ರಿಕ ಮೀನುಗಾರಿಕೆ ಆರಂಭಿಸಲು ಅನುಮತಿಯಿದ್ದರೂ ಹವಾಮಾನ ವೈಪರೀತ್ಯ ಇರುವ ಕಾರಣದಿಂದ ಯಾಂತ್ರಿಕ ಮೀನುಗಾರಿಕೆ ಆರಂಭಕ್ಕೆ ತೊಡಕಾಗಬಹುದು. ಈ ಬಗ್ಗೆ ಕೆಲವೇ ದಿನಗಳಲ್ಲಿ ಸೂಚನೆ ಮೀನುಗಾರರಿಗೆ ನೀಡಲಾಗುತ್ತದೆ’ ಎಂದು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಹರೀಶ್ ಕುಮಾರ್ ತಿಳಿಸಿದ್ದಾರೆ.
ವ್ಯತಿರಿಕ್ತ ಹವಾಮಾನದಿಂದಾಗಿ ಈ ಬಾರಿ ಆಳಸಮುದ್ರ ಮೀನುಗಾರಿಕಾ ಬೋಟ್‌ಗಳು ಕೂಡ ಮೀನುಗಾರಿಕೆಗೆ ಸಿದ್ಧತೆ ನಡೆಸಿದಂತಿಲ್ಲ. ಮೀನುಗಾರಿಕೆ ದೋಣಿಗಳಲ್ಲಿ ದುಡಿಯುವರಲ್ಲಿ ಬಹುಪಾಲು ಆಂಧ್ರ, ಒಡಿಶಾ, ತಮಿಳುನಾಡು ಸೇರಿದಂತೆ ಹೊರ ರಾಜ್ಯದ ಮೂಲದವರು. 2 ತಿಂಗಳ ಹಿಂದೆ ಊರಿಗೆ ತೆರಳಿದ ಅವರನ್ನು ಸದ್ಯ ಮೀನುಗಾರಿಕೆಗೆ ಕರೆಸಿಕೊಂಡಿಲ್ಲ. ಜುಲೈ 28ರ ಬಳಿಕವಷ್ಟೇ ಕಾರ್ಮಿಕರನ್ನು ಕರೆತರುವ ಬಗ್ಗೆ ಬಹುತೇಕ ಮೀನುಗಾರರು ನಿರ್ಧರಿಸಿದಂತಿದೆ. ಆದರೆ ಮೀನುಗಾರಿಕಾ ಬೋಟು ಹಾಗೂ ಇಂಜಿನ್‌ಗಳನ್ನು ದುರಸಿ, ಬಲೆಗಳನ್ನು ಸಿದ್ಧಗೊಳಿಸುವ ಕಾರ್ಯ ನಡೆಯುತ್ತಿವೆ. ಐಸ್‌ಪ್ಲಾಂಟ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಕ್ಕೆ ಸಿದ್ಧತೆ ನಡೆಸುತ್ತಿದೆ.
ಪ್ರಸ್ತುತ ಸಮುದ್ರದಲ್ಲಿ ಬಿರುಗಾಳಿಯ ವೇಗವು ಗಂಟೆಗೆ 40-50 ಕಿ.ಮೀ ಇದ್ದು ತಕ್ಷಣಕ್ಕೆ ಮೀನುಗಾರಿಕೆ ಆರಂಭ ಕಷ್ಟ ಸಾಧ್ಯ. ಮೀನುಗಾರಿಕೆಗೆ ತೆರಳುವ ಬಗ್ಗೆ ಮೀನುಗಾರಿಕಾ ಇಲಾಖೆಯಿಂದ ಸಮರ್ಪಕ ಮಾರ್ಗದರ್ಶಿ ಬಂದಿಲ್ಲ. ಇಲಾಖೆ ಸೂಚನೆ ನೀಡಿದ ಬಳಿಕ ಕಡಲಿಗಿಳಿಯುತ್ತೇವೆ. ಆಗಸ್ಟ್ 4ಕ್ಕೆ ಮಂಗಳೂರಿನಲ್ಲಿ ಸಮುದ್ರ ಪೂಜೆ ಇದ್ದು, ಹವಾಮಾನ ಸರಿಯಿದ್ದರೆ ಮಾತ್ರ ಆ.1ಕ್ಕೆ ಆಳಸಮುದ್ರ ಮೀನುಗಾರಿಕೆಗೆ ಕೆಲವರು ತೆರಳಲಿದ್ದಾರೆ ಎಂದು ಮೀನುಗಾರ ಮುಖಂಡ ಮೋಹನ್ ಬೆಂಗ್ರೆ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 600ಕ್ಕಿಂತಲೂ ಅಧಿಕ ನಾಡ ದೋಣಿಗಳಿವೆ. ಆದರೆ ಈ ಬಾರಿ ತೂಫಾನ್ ಆಗದ ಕಾರಣ ಮೀನುಗಾರಿಕೆ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ. ರೆಡ್ ಅಲರ್ಟ್ ಕೂಡ ಮೀನುಗಾರಿಕೆಗೆ ಹೊಡೆತ ನೀಡಿದೆ. ನಾಲ್ಕೈದು ದಿನಗಳಿಂದ ಯಾರೂ ನದಿ ಹಾಗೂ ಸಮುದ್ರಕ್ಕಿಳಿದಿಲ್ಲ. ಜೂನ್‌ನಲ್ಲಿ ಮೀನುಗಾರಿಕೆ ಆರಂಭದಲ್ಲಿ ಒಂದಷ್ಟು ಮೀನು ಲಭಿಸಿತ್ತು.-ಅಜಿತ್ ಬೆಂಗ್ರೆ, ಅಧ್ಯಕ್ಷರು, ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ, ಮಂಗಳೂರು
ಹವಾಮಾನ ವೈಪರೀತ್ಯದಿಂದ ನಾಡದೋಣಿ ಮೀನುಗಾರಿಕೆ ತಡವಾಗಿ ಆರಂಭವಾಗಿದ್ದು, ಕಡಲು ಪ್ರಕ್ಷುಬ್ಧಗೊಂಡಿರುವುದರಿಂದ ಮೀನುಗಾರಿಕೆ ಸ್ಥಗಿತಗೊಂಡಿದೆ. ಮೀನುಗಾರಿಕೆ ಸ್ಥಗಿತಗೊಂಡಿರುವುದರಿಂದ ಮೀನುಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.-ಸದಾಶಿವ ಖಾರ್ವಿ ಕಂಚುಗೋಡು, ಅಧ್ಯಕ್ಷ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘ, ಗಂಗೊಳ್ಳಿ
ಕರಾವಳಿಯಲ್ಲಿ ನಾಡದೋಣಿ ಮೀನುಗಾರಿಕೆಯು ಪರಂಪರಾಗತವಾಗಿ ನಡೆಯುತ್ತಿದೆ. ಆದರೆ ಹವಾಮಾನ ವೈಪರೀತ್ಯ ಕಾರಣದಿಂದ ಈ ಬಾರಿ ನಾಡದೋಣಿ ಮೀನುಗಾರಿಕೆ ಅಷ್ಟಾಗಿ ನಡೆದಿಲ್ಲ. ಹೀಗಾಗಿ ಮಳೆಗಾಲದಲ್ಲಿ ಮೀನು ಲಭ್ಯತೆ ಕಡಿಮೆಯಾಗಿ ದರ ಹೆಚ್ಚಿತ್ತು. ಸದ್ಯ ಕರಾವಳಿಗೆ ಐಸ್‌ಪ್ಯಾಕ್ ಮಾಡಿದ ಹೊರರಾಜ್ಯದ ಮೀನುಗಳು ಮಾರುಕಟ್ಟೆಗೆ ಬಂದಿದ್ದರೂ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ.-ಯತೀಶ್ ಬೆಂಗ್ರೆ, ನಾಡದೋಣಿ ಮೀನುಗಾರ, ಮಂಗಳೂರು