More

    ಪುಂಗನೂರು ಕರು ಜನನ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ವಿಶ್ವದ ಅತ್ಯಂತ ಚಿಕ್ಕ ಹಸು. ಲಿಟ್ಲ್ ಕೌ ಎನ್ನೋದು ಮತ್ತೊಂದು ಹೆಸರು. ಕಲಿಯುಗದ ಕಾಮಧೇನು, ಮನೆಯಲ್ಲಿದ್ದರೆ ಅದೃಷ್ಟ, ಹಾಲಿಂದ ಹಿಡಿದು ಗಂಜಳದ ತನಕ ಎಲ್ಲವೂ ಅಮೂಲ್ಯ. ಒಂದು ಕಾಲದಲ್ಲಿ ರಾಜ-ಮಹಾರಾಜರು, ಶ್ರೀಮಂತರಷ್ಟೇ ಸಾಕುತ್ತಿದ್ದ ನಶಿಸುತ್ತಿರುವ ಗೋ ತಳಿಗಳಲ್ಲಿ ಒಂದಾಗಿದ್ದ ಪುಂಗನೂರು ಕುಂದಾಪುರಕ್ಕೆ ಕಾಲಿಟ್ಟಿದೆ.

    ಸ್ಥಳೀಯ ಮಲೆನಾಡು ಗಿಡ್ಡದ ಮೂಲಕ ಪುಂಗನೂರು ಕರು ಜನನ ಆಗಿರುವುದು ವಿಶೇಷ. ಉಡುಪಿ ಜಿಲ್ಲೆಯ ಒಂದೆರಡು ಡೇರಿಯಲ್ಲಿ ಪುಂಗನೂರು ಹಸುಗಳಿದ್ದು, ಅವುಗಳ ಪ್ರಕೃತಿ ಸಹಜ ಕರುಗಳಿಗೆ ಜನ್ಮ ನೀಡಿದರೆ, ಕುಂದಾಪುರ ತಾಲೂಕು ಬೀಜಾಡಿ ಗ್ರಾಮ ಬೀಜಾಡಿ ಕಪಿಲಾ ಗೋ ಸೇವಾ ಆಶ್ರಮದಲ್ಲಿ ಮಲೆನಾಡು ಗಿಡ್ಡ ಹಸುವಿಗೆ ಪುಂಗನೂರು ಕ್ರಾಸ್ ಮಾಡಿಸಿ ಕರು ಪಡೆಯಲಾಗಿದೆ.

    ಬೀಜಾಡಿ ಕಪಿಲಾ ಗೋ ಸೇವಾ ಆಶ್ರಮ ದೇಸಿ ತಳಿಗಳ ರಕ್ಷಣೆಗಾಗಿ ಸ್ಥಾಪನೆಯಾಗಿದ್ದು, 70ಕ್ಕೂ ಮಿಕ್ಕಿ ದೇಸಿ ತಳಿಗಳ ರಕ್ಷಣೆ, ಸಂವರ್ಧನೆ ಆಗುತ್ತದೆ. ಪುಂಗನೂರು ತಳಿ ಕೊರತೆ ನೀಗಿಸಿಕೊಳ್ಳಲು ಮಾಡಿದ ಪ್ರಯತ್ನ ಫಲಕೊಟ್ಟಿದ್ದು, ಮಲೆನಾಡು ಗಿಡ್ಡ ಕಪಿಲೆ ಪುಂಗನೂರು ಕರುವಿಗೆ ಜನ್ಮ ನೀಡಿದೆ.

    ದೇಸಿ ತಳಿಗಳಲ್ಲಿ ಅಳಿವಿನಂಚಿಗೆ ತಲುಪಿದ ತಳಿಗಳಲ್ಲಿ ಪುಂಗನೂರು ಒಂದು. ಆಂಧ್ರದ ಚಿತ್ತೂರು ಜಿಲ್ಲೆ ಪುಂಗನೂರು ಈ ಹಸುವಿನ ತವರಾಗಿದ್ದರಿಂದ ಪುಂಗನೂರು ಎಂಬ ಹೆಸರು ಬಂದಿದೆ. ಹಸು ನೀಡುವ ಎಲ್ಲ ವಸ್ತುಗಳ ಅಮೂಲ್ಯ ಎನ್ನುವುದು ಹೊರ ಪ್ರಪಂಚಕ್ಕೆ ತಿಳಿದ ನಂತರ ಪುಂಗನೂರು ಹಸು ಉಳಿಸುವ ಪ್ರಯತ್ನ ನಡೆಯುತ್ತಿದೆ. ಮೂರು ದಶಕದ ಹಿಂದೆ ಚಿತ್ತೂರು ಸೇರಿ ದೇಶದಲ್ಲಿ 80 ಸಾವಿರದಷ್ಟಿದ್ದ ಪುಂಗನೂರು ಹಸುಗಳ ಸಂಖ್ಯೆ ಸದ್ಯ ಮೂರಂಕಿಗೆ ಇಳಿದಿದೆ.

    ಚಿನ್ನದ ಹಸು

    ಪುಂಗನೂರು ಹಸುವಿಗೆ ಚಿನ್ನದ ಹಸು ಎಂದು ಕರೆಯಲಾಗುತ್ತದೆ. ಈ ಹಸುವಿನ ಬಗ್ಗೆ ಚರಕ ಸಂಹಿತೆ, ಸುಶ್ರುತ ಸಂಹಿತೆಯಲ್ಲಿ ಉಲ್ಲೇಕವಿದೆ. ಕರಳು ಆಮ್ಲಾ(ಗ್ಯಾಸ್ಟ್ರಿಕ್)ಕ್ಕೆ ಪುಂಗನೂರು ಹಸುವಿನ ಹಾಲು ರಾಮಬಾಣ ಎನ್ನಲಾಗುತ್ತಿದ್ದು, ಅಪೌಷ್ಟಿಕ ಮಕ್ಕಳು ಪುಂಗನೂರು ಹಸು ಹಾಲು, ತುಪ್ಪ, ಮೊಸರು ಸೇವಿಸಿದರೆ ದಷ್ಟಪುಷ್ಟವಾಗಲು ಸಾಧ್ಯ ಎನ್ನಲಾಗುತ್ತದೆ. ಬಿಳಿ, ಬೂದು, ತುಸು ಕಂದು ಬಣ್ಣ ಹೊಂದಿದ್ದು, ಪುಂಗನೂರು ಹಸು 3 ಅಡಿಯಷ್ಟು ಎತ್ತರ ಬೆಳೆದರೆ, ಬೆರ್ಕೆ ಪುಂಗನೂರು 5 ಅಡಿ ತನಕ ಬೆಳೆಯುತ್ತದೆ. ಆಕಾರ, ಕೊಂಬುಗಳ ಮೂಲಕ ಪುಂಗನೂರು ಗುರುತಿಸಲು ಸಾಧ್ಯ.

    ಹಾಲಿಗೆ ಲೀಟರಿಗೆ 400 ರೂ.!

    ಪುಂಗನೂರು ಹಸುಗಳ ಹಾಲು, ಮೂತ್ರ, ಸಗಣಿ ಎಲ್ಲದರಲ್ಲಿ ಔಷಧೀಯ ಗುಣವಿದ್ದು, ತಿರುಪತಿ ತಿಮ್ಮಪ್ಪನ ಅಭಿಷೇಕಕ್ಕೆ ಪುಂಗನೂರು ಹಸುವಿನ ಹಾಲೇ ಆಗಬೇಕು. ಹೈಬ್ರೀಡ್ ಹಸು ತಳಿಗಳಲ್ಲಿ ಫ್ಯಾಟ್ 3.5 ಇದ್ದರೆ, ಎಮ್ಮೆ ಹಾಲಲ್ಲಿ ಫ್ಯಾಟ್ 5ರಿಂದ 6ರ ತನಕವಿರುತ್ತದೆ. ಪುಂಗನೂರು ಹಸುವಿನ ಹಾಲಲ್ಲಿ ಫ್ಯಾಟ್ ಶೇ.8ರಷ್ಟಿರುತ್ತದೆ. ಪುಂಗನೂರು ಹಸು ದಿನಕ್ಕೆ 3ರಿಂದ 6ಲೀ.ಹಾಲು ಕೊಡುತ್ತದೆ. 1ಲೀ. ಹಾಲಿಗೆ 250ರಿಂದ 400 ರೂ. ತನಕ ಇದೆ. 1 ಕೆಜಿ ತುಪ್ಪದ ಬೆಲೆ 4 ಸಾವಿರದಿಂದ 6 ಸಾವಿರ! ಪುಂಗನೂರು ಹಸು ಬೆಲೆ ಆರಂಭವಾಗುವುದೇ ಲಕ್ಷದಿಂದ. ಅಬ್ಬಬ್ಬಾ ಅಂದ್ರೂ 3 ಅಡಿಯಷ್ಟು ಎತ್ತರ ಮಾತ್ರ ಬೆಳೆಯುವ ಸುಮಾರು 100 ರಿಂದ 200 ಕೆಜಿ ತೂಗುವ ಪುಂಗನೂರು 5 ಲಕ್ಷ ರೂ. ಕೊಡುವವರಿದ್ದಾರೆ.

    ಕಪಿಲಾ ಗೋ ಸೇವಾ ಆಶ್ರಮದಲ್ಲಿ ಪುಂಗನೂರು ತಳಿಯ ಕೊರತೆಯಿತ್ತು. ನಮ್ಮಲ್ಲಿರುವ ಮಲೆನಾಡು ಗಿಡ್ಡಕ್ಕೆ ಪುಂಗನೂರು ತಳಿಯ ಸಾಮ್ಯತೆಯಿದ್ದು, ಕಪಿಲೆ ಹಸುವಿಗೆ ಕ್ರಾಸ್ ಮಾಡಿಸುವ ಮೂಲಕ ಕರು ಪಡೆಯಲಾಗಿದೆ. ಪುಂಗನೂರು ಹಸುವಿಗೆ ಬೂಸಾ, ಹಿಂಡಿ ಹಾಕಿ ಬೆಳಸಬೇಕೆಂದೇನು ಇಲ್ಲ. ಒಣ ಹುಲ್ಲು, ಹಸಿ ಹುಲ್ಲು ತಿಂದು ಇಲ್ಲಿನ ಹವಮಾನಕ್ಕೆ ಹೊಂದಿಕೊಂಡು ಹೋಗುತ್ತದೆ. ಈಗ ಹುಟ್ಟಿದ ಕರು ಗಂಡು. ಮತ್ತೊಂದು ಹೆಣ್ಣು ಕರು ಹುಟ್ಟಿದರೆ ಪುಂಗನೂರು ತಳಿ ಮತ್ತಷ್ಟು ಹೆಚ್ಚಿಸಿಕೊಳ್ಳುವ ಇರಾದೆ ಇದೆ.

    -ಕುಮಾರ್ ಕಾಂಚನ್, ಕಪಿಲಾ ಗೋ ಆಶ್ರಮ ಸಂಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts