More

    ಕಲ್ಲುಕ್ವಾರಿ ಹೊಂಡ ಮೃತ್ಯುಕೂಪ

    ಹರಿಪ್ರಸಾದ್ ನಂದಳಿಕೆ ಕಾರ್ಕಳ

    ಹೆಬ್ರಿ ಹಾಗೂ ಕಾರ್ಕಳ ತಾಲೂಕಿನಲ್ಲಿರುವ ಕಲ್ಲುಕ್ವಾರಿಗಳ ಹೊಂಡಗಳೀಗ ಕೆರೆಯಂತಾಗಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ. ಜನವಸತಿ ಪ್ರದೇಶದ ಪಕ್ಕದಲ್ಲೇ ಇಂತಹ ಪ್ರದೇಶಗಳಿದ್ದು, ಸುರಕ್ಷಾ ಕ್ರಮ ಕೈಗೊಳ್ಳಬೇಕಿದೆ.

    ಕಾರ್ಕಳ ತಾಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ಕಲ್ಲುಕ್ವಾರಿಗಳಿದ್ದು, ಮಳೆ ನೀರು ನಿಂತು ಮೃತ್ಯುಕೂಪವಾಗಿ ಗೋಚರಿಸುತ್ತಿದೆ. ಕಲ್ಲುಕ್ವಾರಿಗಳ ಗುಂಡಿಗಳನ್ನು ಮುಚ್ಚದೆ ಹಾಗೆಯೇ ಬಿಟ್ಟಿರುವುದರಿಂದ ಮಳೆ ನೀರು ತುಂಬಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

    ನಿವಾಸಿಗಳಿಗೆ ಆತಂಕ

    ಕ್ವಾರಿಗಳ ಪಕ್ಕದ ಜನವಸತಿ ಪ್ರದೇಶದ ಮಕ್ಕಳು, ಮಹಿಳೆಯರು ಮಳೆಗಾಲದಲ್ಲಿ ಆತಂಕದಲ್ಲೇ ದಿನ ಕಳೆಯುತ್ತಾರೆ. ಬೇಸಿಗೆಯಲ್ಲಿ ಶಬ್ದ, ಪರಿಸರ ಮಾಲಿನ್ಯಗಳಿಂದ ತೊಂದರೆ ಅನಭವಿಸಿದರೆ ಮಳೆಗಾಲದಲ್ಲಿ ಹೊಂಡದ ಕೃತಕ ನೆರೆಯಿಂದ ಸಮಸ್ಯೆ ಎದುರಿಸುತ್ತಾರೆ. ನೀರು ತುಂಬಿರುವ ಬೃಹತ್ ಹೊಂಡಗಳ ಸುತ್ತ ತಡೆಬೇಲಿಯನ್ನೂ ಹಾಕಿಲ್ಲ. ಕೆಲವೊಂದು ಕಡೆಗಳಲ್ಲಿ ದಾರಿ ಸಮೀಪವೇ ಗುಂಡಿಗಳಿದ್ದು, ಜನ ಅತ್ತಿತ್ತ ಓಡಾಡುವಾಗ ಜೀವಾಪಾಯ ಸಾಧ್ಯತೆ ಇದೆ.

    ಕರಿಕಲ್ಲ ಕ್ವಾರಿಗಳು

    ಕರಿಕಲ್ಲುಗಳ ಊರು ಎಂದೇ ಪ್ರಸಿದ್ಧಿ ಪಡೆದ ಕಾರ್ಕಳದಲ್ಲಿ ತಾಲೂಕಿನ ಉದ್ದಗಲಕ್ಕೂ ಅಲ್ಲಲ್ಲಿ ಕ್ರಷರ್ ಹಾಗೂ ಕಲ್ಲು ಕ್ವಾರಿಗಳ ಸದ್ದು ನಿತ್ಯ ಕೇಳುತ್ತದೆ. ತಾಲೂಕಿನ ನಂದಳಿಕೆ, ಕಲ್ಯಾ, ನಿಟ್ಟೆ, ಧೂಪದಕಟ್ಟೆ, ಸೂಡ ಪಡುಬೆಟ್ಟು, ನೆಲ್ಲಿಗುಡ್ಡೆ, ಪಳ್ಳಿ, ಬೈಲೂರು, ಕುಕ್ಕುಂದೂರು, ಮಿಯ್ಯರು, ಮಾಳ ಭಾಗದಲ್ಲಿ ಪಾದೆಕಲ್ಲಿನ ಕ್ವಾರಿಗಳ ಕ್ರಷರ್ ನಡೆಯುತ್ತಿದೆ. ಮುಂಡ್ಕೂರು, ಬೋಳ, ಬೆಳ್ಮಣ್‌ನ ಜಂತ್ರ ಸೇರಿದಂತೆ ಇನ್ನೂ ಹಲವು ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಂಪು ಕಲ್ಲಿನ ಕ್ವಾರಿಗಳಿವೆ. ಈಗಾಗಲೇ ಭೂಮಿಯನ್ನು ಆಳವಾಗಿ ಅಗೆದು ಬೃಹತ್ ಕೆರೆಯಂತಹ ಹೊಂಡಗಳು ನಿರ್ಮಾಣವಾಗಿದೆ.

    ಸೂಚನಾ ಫಲಕಗಳಿಲ್ಲ

    ಕಲ್ಲಿನ ಕ್ವಾರಿ ಹೊಂಡಗಳ ಸುತ್ತ ತಂತಿ ಬೇಲಿಯಾಗಲೀ, ನೀರಿಗೆ ಇಳಿಯಬೇಡಿ ಎಂಬ ಸೂಚನಾ ಫಲಕ ಎಲ್ಲಿಯೂ ಕಾಣುತ್ತಿಲ್ಲ. ಒಂದೆರಡು ಕಡೆಗಳಲ್ಲಿ ಸೂಚನಾ ಫಲಕವಿದ್ದರೂ ತಡೆಬೇಲಿ ಇಲ್ಲದ್ದರಿಂದ ಜನ ನೀರಿಗಿಳಿಯುವ ಸಾಹಸ ಮಾಡುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿಯಾಗಿದೆ. ಬೇಸಿಗೆ ಕಳೆದು ಮಳೆ ಆರಂಭವಾಗುವ ವೇಳೆ ಕಲ್ಲಿನ ಕ್ವಾರಿಗಳನ್ನು ಮುಚ್ಚಬೇಕು. ಇಲ್ಲವೇ ಕಲ್ಲಿನ ಕ್ವಾರಿಗಳ ಸುತ್ತ ತಂತಿಬೇಲಿ ನಿರ್ಮಿಸಿ ಸುರಕ್ಷಾ ಕ್ರಮ ತೆಗೆದುಕೊಳ್ಳಬೇಕು. ಆದರೆ, ಈ ಬಗ್ಗೆ ಸ್ಥಳೀಯಾಡಳಿತಕ್ಕೆ ಸಮಯ ಇಲ್ಲದಾಗಿದೆ.

    ಅನಧಿಕೃತ ಕ್ವಾರಿಗಳು

    ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ 56 ಗ್ರಾಮಗಳಲ್ಲಿ ಬಹುತೇಕ ಎಲ್ಲ ಕಡೆಗಳಲ್ಲಿ ಕಲ್ಲಿನ ಕ್ವಾರಿಗಳಿವೆ. ಕಲ್ಯಾ, ಕುಕ್ಕುಂದೂರು, ಸೂಡ, ನಂದಳಿಕೆ ಗ್ರಾಪಂಗಳಲ್ಲಿ ಅಧಿಕ ಪ್ರಮಾಣದ ಕಲ್ಲಿನ ಕ್ವಾರಿಗಳಿವೆ. ಕಾರ್ಕಳ ತಾಲೂಕಿನಲ್ಲಿ 45, ಹೆಬ್ರಿ ತಾಲೂಕಿನಲ್ಲಿ 6 ಕ್ರಷರ್ ಕ್ವಾರಿ ಹೊರತುಪಡಿಸಿ, ಇನ್ನುಳಿದಂತೆ ಹಲವು ಗ್ರಾಪಂ ವ್ಯಾಪ್ತಿಯಲ್ಲಿ 200ಕ್ಕೂ ಅಧಿಕ ಅನಧಿಕೃತ ಕ್ವಾರಿಗಳಿವೆ. ಅನುಮತಿ ಪಡೆದುದಕ್ಕಿಂತ ಅನಧಿಕೃತ ಕ್ವಾರಿಗಳೇ ಹೆಚ್ಚಿವೆ. ಇಂತಹ ಅಪಾಯಕಾರಿ ಕ್ವಾರಿಗಳನ್ನು ಪತ್ತೆ ಹಚ್ಚಿ ಮಳೆಗಾಲದ ಮುನ್ನವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಶಾಸಕರು ಸೂಚಿಸಿದ್ದರೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಗಣಿ ಮಾಲೀಕರು ಅಗೆದು ಹಾಕಿದ ಬಳಿಕ ಅವುಗಳನ್ನು ಮುಚ್ಚಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

    ಜನಜೀವನಕ್ಕೆ ತೊಡಕು

    ಜನವಸತಿ ಪರಿಸರದ ಸಮೀಪದಲ್ಲಿರುವ ಕಲ್ಲು ಕ್ವಾರಿಗಳಲ್ಲಿ ರಜಾ ದಿನಗಳಲ್ಲಿ ಶಾಲಾ ಮಕ್ಕಳು ಈಜಾಡುವುದು ಕಂಡು ಬರುತ್ತಿದೆ. ಅಲ್ಲದೆ, ಮಹಿಳೆಯರು ಬಟ್ಟೆ, ಪಾತ್ರೆ ತೊಳೆಯಲು ನೀರಿಗೆ ತೆರಳುತ್ತಿದ್ದಾರೆ. ಈಗಾಲೇ ಕ್ವಾರಿಯ ಹೊಂಡಕ್ಕೆ ಬಿದ್ದು ಅನೇಕ ಸಾವು-ನೋವು ಸಂಭವಿಸಿದ ಘಟನೆ ಕಾರ್ಕಳ ತಾಲೂಕಿನಲ್ಲಿ ನಡೆದಿದೆ. ಇಂತಹ ಕಲ್ಲು ಕ್ವಾರಿಗಳಿರುವಲ್ಲಿ ಹೆಚ್ಚಾಗಿ ತಮಿಳುನಾಡು ಮೂಲದವರು ಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಂಡು, ಅಲ್ಲಿಯೇ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಸಣ್ಣಪುಟ್ಟ ಮಕ್ಕಳು ಆಟವಾಡುತ್ತ ನೀರಿರುವ ಹೊಂಡಗಳ ಕಡೆ ಹೋಗುವುದರಿಂದ ಅಪಾಯಕಾರಿಯಾಗಿದೆ.

    ಕಲ್ಲು ಕ್ವಾರಿಯಲ್ಲಿ ನೀರು ನಿಂತು ಕೆರೆಯಂತಾಗಿದೆ. ಮಕ್ಕಳು ನೀರಿನಲ್ಲಿ ಆಟವಾಡುತ್ತಿದ್ದು, ತುಂಬ ಅಪಾಯಕಾರಿಯಾಗಿದೆ. ಸುರಕ್ಷೆ ಕ್ರಮ ಕೈಗೊಳ್ಳದ್ದರಿಂದ ಪ್ರತಿ ಮಳೆಗಾಲದ ಸಂದರ್ಭ ಕ್ವಾರಿ ಸಮೀಪದ ಜನರು ಭಯದಲ್ಲೇ ದಿನ ಕಳೆಯುವಂತಾಗಿದೆ.
    -ಪ್ರತಿಭಾ ಪೂಜಾರಿ, ಗ್ರಾಮಸ್ಥೆ

    ಕಲ್ಲು ಕ್ವಾರಿಯ ಹೊಂಡಕ್ಕೆ ತಂತಿಬೇಲಿ ಅಳವಡಿಸುವಂತೆ ಈಗಾಗಲೇ ಸ್ಥಳೀಯ ಪಂಚಾಯತಿಗಳಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
    -ಅನಂತ ಶಂಕರ್, ತಹಸೀಲ್ದಾರ್, ಕಾರ್ಕಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts