More

    ಕೆಳಪೇಟೆಯಲ್ಲಿ ಹೊಂಡಗಳ ಭರಾಟೆ

    ಅನಂತ ನಾಯಕ್ ಮುದ್ದೂರು ಕೊಕ್ಕರ್ಣೆ

    ವಾರಾಹಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲು ಇತ್ತೀಚೆಗೆ ಕೊಕ್ಕರ್ಣೆ ಕೆಳಪೇಟೆಯಲ್ಲಿ ರಸ್ತೆಯ ಬಲಭಾಗವನ್ನು ಅಗೆಯಲಾಗಿತ್ತು. ಇದೀಗ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಯಲ್ಲಿ ಹೊಂಡ-ಗುಂಡಿಗಳು ನಿರ್ಮಾಣವಾಗಿವೆ.

    ಸ್ಥಳೀಯರ ವಿರೋಧದ ನಡುವೆಯೂ ಸುಮಾರು 200 ಮೀಟರ್‌ನಷ್ಟು ಉದ್ದದಲ್ಲಿ 8 ಫೀಟ್ ಆಳದ ಪೈಪ್‌ಲೈನ್ ಕಾಮಗಾರಿಗೆ ರಸ್ತೆ ಅಗೆದಿದ್ದು, ಸುಗಮ ಸಂಚಾರಕ್ಕೆ ತೊಡಕಾಗಿದೆ.

    ಪ್ರಮುಖ ರಸ್ತೆ

    ಮಂದಾರ್ತಿ, ಕಾಡೂರು, ಕೊಕ್ಕರ್ಣೆ ಮಾರ್ಗವಾಗಿ ನಡೂರು ಸೇರಿದಂತೆ ನಾಲ್ಕೂರು, ಸಂತೆಕಟ್ಟೆ, ಹೆಬ್ರಿ, ಬ್ರಹ್ಮಾವರ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ನಿತ್ಯವೂ ಭಾರಿ ವಾಹನ ಸಹಿತ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವ ರಸ್ತೆ ಇದಾಗಿದ್ದು, ಹೊಂಡಗಳ ಭರಾಟೆಯಿಂದಾಗಿ ಸವಾರರು ತೊಂದರೆ ಪಡುವಂತಾಗಿದೆ. ಸ್ಥಳೀಯ ಜನಪ್ರತಿನಿಧಿಗಳ ಸೂಚನೆಯ ಮೇರೆಗೆ ಹೊಂಡಗಳಿಗೆ ಜಲ್ಲಿ ಹಾಕಿದ್ದರೂ ಧಾರಾಕಾರ ಮಳೆಯಿಂದಾಗಿ ಅವು ಮತ್ತೆ ಮತ್ತೆ ಕಿತ್ತು ಹೋಗುತ್ತಿವೆ.

    ಸಂಚಾರಕ್ಕೆ ತೊಡಕು

    ಬೈಕ್ ಸವಾರರು ಹಾಗೂ ಪಾದಚಾರಿಗಳಿಗೆ ಈ ಮಾರ್ಗದಲ್ಲಿ ಸಂಚರಿಸಲು ಕಷ್ಟವಾಗುತ್ತಿದೆ. ಇದೇ ಮಾರ್ಗದಲ್ಲಿಯೇ ಕೆನರಾ ಬ್ಯಾಂಕ್ ಇದ್ದು, ಗ್ರಾಹಕರು ಇಲ್ಲಿಗೆ ಬರಲು ಪರದಾಡಬೇಕಾಗಿದೆ. ತಮ್ಮ ವಾಹನವನ್ನು ರಸ್ತೆಯಲ್ಲಿಯೇ ಪಾರ್ಕಿಂಗ್ ಮಾಡುತ್ತಿದ್ದು, ಏಕಮುಖ ಸಂಚಾರಕ್ಕೂ ತೊಡಕುಂಟಾಗಿದೆ. ಆಗಾಗ ವಾಹನ ದಟ್ಟಣೆ ಇಲ್ಲಿ ಸಾಮಾನ್ಯ ಎಂಬಂತಾಗಿದೆ.

    ಅಗಲೀಕರಣಕ್ಕೆ ಬೇಡಿಕೆ

    ಸ್ಥಳೀಯರು, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ರಸ್ತೆ ಅಗಲೀಕರಣಕ್ಕಾಗಿ ಹಲವು ವರ್ಷದ ಹಿಂದೆಯೇ ಯೋಜನೆ ರೂಪಿಸಿದ್ದವು. ರಸ್ತೆಯ ಇಕ್ಕೆಲಗಳಲ್ಲಿ ಅನೇಕರ ಮನೆ ಇರುವುದರಿಂದ ರಸ್ತೆ ಅಗಲೀಕರಣಕ್ಕೆ ಹಿನ್ನಡೆಯಾಗಿದೆ. ಹೀಗಾಗಿ ಇಲ್ಲಿ ಏಕಮುಖ ಸಂಚಾರವೇ ಮುಂದುವರಿದಿದೆ.

    ಸಮರ್ಪಕ ಚರಂಡಿಯೂ ಇಲ್ಲ

    ಕೊಕ್ಕರ್ಣೆ ಪೇಟೆಯಲ್ಲಿ ಕೇವಲ ಹೊಂಡ-ಗುಂಡಿಯದ್ದಷ್ಟೇ ಸಮಸ್ಯೆ ಇಲ್ಲ. ಇಲ್ಲಿ ಎಲ್ಲಿಯೂ ಚರಂಡಿ ವ್ಯವಸ್ಥೆಯೇ ಸಮರ್ಪಕವಾಗಿಲ್ಲ. ಹೀಗಾಗಿ ಮಳೆಯ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು, ಸಾರ್ವಜನಿಕರಿಗೆ ಪ್ರತಿನಿತ್ಯ ಕಿರಿಕಿರಿಯಾಗುತ್ತಿದೆ. ವಾರಾಹಿ ಯೋಜನೆಯ ಅಧಿಕಾರಿಗಳ ನಿರ್ಲಕ್ಷೃದಿಂದ ರಸ್ತೆ ಹಾಳಾಗಿದೆ. ಇದೀಗ ಮಳೆಗಾಲವಾಗಿದ್ದರಿಂದ ಪೈಪ್‌ಲೈನ್ ಕಾಮಗಾರಿ ನಡೆಸಲೂ ಸಾಧ್ಯವಿಲ್ಲ. ರಸ್ತೆಯಲ್ಲಿರುವ ಹೊಂಡದಿಂದಾಗಿ ಅಪಘಾತ ಸಂಭವಿಸಿದರೆ ಯಾರು ಹೊಣೆ? ಸುಗಮ ಸಂಚಾರಕ್ಕಾಗಿ ಉತ್ತಮ ರಸ್ತೆ, ಚರಂಡಿ ನಿರ್ಮಿಸಲೇಬೇಕಿದೆ ಎನ್ನುತ್ತಾರೆ ಸ್ಥಳೀಯರಾದ ಎಚ್.ಹರೀಶ ಶ್ಯಾನುಭಾಗ್.

    ವಾರಾಹಿ ಕಾಮಗಾರಿಗಾಗಿ ಜೆಸಿಬಿಯಿಂದ ರಸ್ತೆ ಅಗೆದಿದ್ದು ಸಂಚಾರಕ್ಕೆ ಅನನುಕೂಲವಾಗಿದೆ. ವಾರಾಹಿ ಯೋಜನೆಯ ಅಧಿಕಾರಿಗಳಿಗೆ ರಸ್ತೆ ಸರಿಪಡಿಸುವಂತೆ ಈಗಾಗಲೇ ಎರಡು ಬಾರಿ ಸೂಚಿಸಿದ್ದೇನೆ. ಇಲ್ಲಿನ ರಸ್ತೆ ಅಗಲೀಕರಣ ಮಾಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

    ಗಿರೀಶ
    ಸಹಾಯಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಉಡುಪಿ ವಿಭಾಗ

    ಅಧಿಕ ಮಳೆಯ ಕಾರಣದಿಂದಾಗಿ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ಮಳೆ ನಿಂತರೆ ಕೂಡಲೇ ರಸ್ತೆಗೆ ಡಾಂಬರೀಕರಣ ಮಾಡುತ್ತೇವೆ. ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು.

    ರಮೇಶ
    ಪಿಎಂಡಿಆರ್‌ಎಸ್, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts