More

    ಗ್ಯಾರಂಟಿಗಳಿಂದ ತಾಯಂದಿರಿಗೆ ಸಂಕಷ್ಟ

    ಕೋಲಾರ:ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ನಾಟಕ ಮಾಡುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಪರಿತಪಿಸುತ್ತಿದ್ದಾರೆ. ಬಿಟ್ಟಿ ಗ್ಯಾರಂಟಿಗಳಿಂದ ತಾಯಂದಿರನ್ನು ಸರ್ಕಾರ ಸಂಕಷ್ಟಕ್ಕೆ ದೂಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

    ನಗರದಲ್ಲಿ ಸೋಮವಾರ ಜೆಡಿಎಸ್-ಬಿಜೆಪಿ ಅಭ್ಯರ್ಥಿ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ನರೇಂದ್ರ ಮೋದಿ ಅವರ ನಾಯಕತ್ವದಿಂದ ದೇಶದ ಅಭಿವೃದ್ಧಿ, ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿದೆ. ಕಾಂಗ್ರೆಸ್ ನಾಯಕರು ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾರೆ ಹೊರತು ಬೇರೆ ವಿಷಯ ಗೊತ್ತಿಲ್ಲ. ಇದನ್ನು ನಂಬಿ ಮುಂದಿನ ದಿನಗಳಲ್ಲಿ ಮಹಿಳೆಯರು ಸಂಕಷ್ಟಕ್ಕೆ ಒಳಗಾಗಬೇಡಿ ಎಂದು ಸಲಹೆ ನೀಡಿದರು.

    • ರಾಜ್ಯ ಸರ್ಕಾರದಿಂದ 1 ಲಕ್ಷ 5 ಸಾವಿರ ಕೋಟಿ ಸಾಲ:
      ಕೊಡುತ್ತಿರುವ ೨೦೦೦ ರೂ. ಜತೆಗೆ ಇನ್ನು ಎರಡು ಸಾವಿರ ರೂ. ಕೊಡಲಿದ್ದೇವೆ ಎಂದು ಹೇಳಿದ್ದಾರೆ. ಆದರೆ ಈಗ ಕೊಡುತ್ತಿರುವ 2000 ರೂ. ಎಲ್ಲಿಂದ ತರುತ್ತಿದ್ದಾರೆ ಎಂದು ಹೇಳಿಲ್ಲ. ಇದಕ್ಕಾಗಿ ರಾಜ್ಯ ಸರ್ಕಾರವು 1 ಲಕ್ಷದ 5 ಸಾವಿರ ಕೋಟಿ ರೂ. ಸಾಲ ಮಾಡಿದ್ದು, ಸಾರ್ವಜನಿಕರ ತೆರಿಗೆಯಿಂದ ಕೊಡುತ್ತಿಲ್ಲ. ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ೫ ಸಾವಿರ ನಿಗದಿ ಮಾಡಲಾಗಿತ್ತು. ಇದನ್ನು ಸಿದ್ದರಾಮಯ್ಯ ಸರ್ಕಾರ 1 ಲಕ್ಷ ರೂ.ಗೆ ಏರಿಕೆ ಮಾಡಿದೆ. ರೈತರಿಂದ ಕಿತ್ತು ಮಹಿಳೆಗೆ ಕೊಡುತ್ತಿದ್ದಾರೆ. ಮದ್ಯದ ದರ, ಮುದ್ರಾಂಕ ನೋಂದಣಿ ದರ ಹೆಚ್ಚಿಸಿದ್ದು, 7 ತಿಂಗಳಿಂದ ಹಾಲಿನ ಪ್ರೋತ್ಸಾಹ ಧನ ನೀಡಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
    • ಹೇಳಿದ್ದು ಎತ್ತಿನಹೊಳೆ, ಕೊಟ್ಟದ್ದು ಕೊಳಚೆ ನೀರು:
      ಜಿಲ್ಲೆಗೆ ಮೂರು ವರ್ಷದಲ್ಲಿ ಎತ್ತಿನಹೊಳೆ ಯೋಜನೆಯನ್ನು ಜಾರಿಗೆ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಇದಕ್ಕಾಗಿ 13೦೦೦ ಕೋಟಿ ರೂ. ವೆಚ್ಚ ಮಾಡಿದ್ದಾರೆ. ಆದರೆ ನೀರು ಸಕಲೇಶಪುರದಲ್ಲೇ ನಿಂತಿದೆ. ಇದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದ್ದರೆ ಕಾಮಗಾರಿ ವೆಚ್ಚ ಯಾಕೆ ಜಾಸ್ತಿಯಾಗುತ್ತಿತ್ತು? ಹೇಳಿದ್ದು ಎತ್ತಿನಹೊಳೆ ನೀರು, ಕೊಟ್ಟಿದ್ದು ಬೆಂಗಳೂರಿನ ಕೊಳಚೆ ನೀರು ಎಂದು ಎಚ್‌ಡಿಕೆ ಜರಿದರು.
    • ರಮೇಶ್‌ಕುಮಾರ್‌ಗೆ ಉತ್ತರ ನೀಡಲಿದ್ದೇವೆ:
      ಶ್ರೀನಿವಾಸಪುರದ ರಮೇಶ್‌ಕುಮಾರ್ ವೆಂಕಟಶಿವಾರೆಡ್ಡಿ ಅವರ ಮೇಲಿರುವ ಕೋಪವನ್ನು ರೈತರ ಮೇಲೆ ತೋರಿಸಿದ್ದಾರೆ. ಅವರಿಗೆ ಕುರುಡುಮಲೆ ಗಣೇಶ ಒಳ್ಳೆಯ ಬುದ್ಧಿ ನೀಡಲಿ. ಆ ಸಮಾಜದಲ್ಲಿ ಹುಟ್ಟಿರುವ ವ್ಯಕ್ತಿಯ ಬಾಯಲ್ಲಿ ಆ ರೀತಿ ಮಾತನಾಡಬಾರದು. ಇದಕ್ಕೆಲ್ಲ ಮುಂದಿನ ದಿನಗಳಲ್ಲಿ ಉತ್ತರ ಕೊಡುತ್ತೇನೆ. ದಲಿತ ನಾಯಕ ಕೆ.ಎಚ್.ಮುನಿಯಪ್ಪ ಅವರ ವಿರುದ್ಧ ನಜೀರ್ ಅಹಮದ್ ಪುಟಗೋಸಿಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ. ದಲಿತರಿಗೆ ರೋಷ ಬರಲಿಲ್ವ? ಅಳಿಯನಿಗೆ ಟಿಕೆಟ್ ಕೇಳಿದ್ದಕ್ಕೆ ಈ ರೀತಿಯ ಕೀಳುಮಟ್ಟದಲ್ಲಿ ನಡೆದುಕೊಳ್ಳುವುದು ಎಷ್ಟು ಸರಿ, ಈ ವಿಚಾರದಲ್ಲಿ ಸಿದ್ದರಾಮಯ್ಯ ಮೌನ ವಹಿಸಿದ್ದು ಏಕೆ ಎಂದು ಎಚ್‌ಡಿಕೆ ಪ್ರಶ್ನಿಸಿದರು.
    • ಒಮ್ಮತದಿಂದ ಮಲ್ಲೇಶ್ ಬಾಬು ಕಣಕ್ಕೆ:
      ಕುಟುಂಬ ರಾಜಕಾರಣ ಎಂದು ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಾರೆ. ಈಗ ಕಾಂಗ್ರೆಸ್‌ನಲ್ಲಿ ೧೨ ಮಂದಿ ಸಚಿವರು ಕುಟುಂಬದ ಸದಸ್ಯರಿಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ನನ್ನ ಪಕ್ಷದಿಂದ ದಲಿತ ಸಮಾಜದವರಿಗೆ ಟಿಕೆಟ್ ನೀಡಿದ್ದೇವೆ. ಮುನಿಸ್ವಾಮಿ ವಿರುದ್ಧ ನನಗೇನೂ ಕೋಪವಿಲ್ಲ. ಸಮೃದ್ಧಿ ಮಂಜುನಾಥ್‌ರನ್ನು ಕಾಂಗ್ರೆಸ್‌ಗೆ ಬರುವಂತೆ ಅನೇಕರು ಒತ್ತಾಯಿಸಿದ್ದರು, ಆದರೆ ಅವರು ನನ್ನನ್ನು ಬಿಟ್ಟು ಹೋಗಲಿಲ್ಲ. ಅದಕ್ಕೂ ಮುಂಚೆ ಆದಿನಾರಾಯಣಗೆ ಟಿಕೆಟ್ ಕೊಡುವುದಾಗಿ ಹೇಳಿದ್ದೆ. ಅವರು ಕಾಂಗ್ರೆಸ್‌ಗೆ ಹೋಗಿ ಬಲಿಪಶು ಆಗಿದ್ದಾರೆೆ ಎಂದರು.
      ಟಿಕೆಟ್ ಹಂಚಿಕೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಆರಂಭದಲ್ಲಿ ಸಮೃದ್ಧಿ ಮಂಜುನಾಥ್, ಮಲ್ಲೇಶ್ ಬಾಬು, ನಿಸರ್ಗ ನಾರಾಯಣಸ್ವಾಮಿ ಹೆಸರು ಹರಿದಾಡಿದ್ದವು. ಮಲ್ಲೇಶ್ ಬಾಬು ಅವರನ್ನು ಒಮ್ಮತದಿಂದ ಆಯ್ಕೆ ಮಾಡಿ ಕಣಕ್ಕೆ ಇಳಿಸಲಾಗಿದೆ ಎಂದು ಎಚ್‌ಡಿ ಕುಮಾರಸ್ವಾಮಿ ತಿಳಿಸಿದರು.
    • ಕಾಂಗ್ರೆಸ್‌ನಿಂದ ಬಿಟ್ಟಿ ಪ್ರಚಾರ:
      ಬಿಜೆಪಿ-ಜೆಡಿಎಸ್ ಮೈತ್ರಿ ಇದ್ದಾಗ ಯರಗೋಳ್ ಜಲಾಶಯ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿತ್ತು. ಕೆಲಸ ಮಾಡಿದ್ದು ನಾವು, ಆದರೆ ಸಿದ್ದರಾಮಯ್ಯ ಬಂದು ಟೆಪ್‌ಕಟ್ ಮಾಡಿ ಹೋದರು. ಸೌಜನ್ಯಕ್ಕೂ ನಮ್ಮ ಹೆಸರು ಹೇಳಿಲ್ಲ. ಅಲಂಗೂರು ಶ್ರೀನಿವಾಸ್ ಯೋಜನೆ ಜಾರಿಗೆ ಕಾರಣ. ಕಾಂಗ್ರೆಸ್‌ನವರು ಬಿಟ್ಟಿ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ ಎಂದು ಎಚ್‌ಡಿಕೆ ಕಿಡಿಕಾರಿದರು.
    • ಮೊದಲು ತಮಿಳುನಾಡಿನಿಂದ ಅನುಮತಿ ತನ್ನಿ
      ಬಿಜೆಪಿ ಅಽಕಾರದಲ್ಲಿ ಇದ್ದಾಗ ರಾಜ್ಯದ ಖಜಾನೆ ಸಂಪದ್ಭರಿತವಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದನಂತರ ಅನುದಾನದ ಕೊರತೆಯಾಗಿದೆ. ಖಜಾನೆಯನ್ನು ಖಾಲಿ ಮಾಡಿ ಭಿಕ್ಷುಕರ ರೀತಿ ಖಾಲಿ ಚೊಂಬು ತೋರಿಸುತ್ತಿದ್ದಾರೆ. ಈ ಸರ್ಕಾರದಲ್ಲಿ ಕಮಿಷನ್ 65 ಪರ್ಸೆಂಟ್‌ಗೆ ಹೋಗಿದೆ. ನಮ್ಮ ನೀರು ನಮ್ಮ ಹಕ್ಕು' ಷೋಷ ವಾಕ್ಯದೊಂದಿಗೆ ಕಾಲ್ನಡಿಗೆ ಮಾಡಿದ ಸರ್ಕಾರ ಈಗನಮ್ಮ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದಾರೆ. ಮೇಕೆದಾಟಿಗೆ ಅನುಮತಿ ನೀಡಲು ತಕರಾರು ತೆಗೆದಿರುವುದು ಸಿದ್ದರಾಮಯ್ಯ ಅವರ ತಮಿಳುನಾಡಿನ ಸ್ನೇಹಿತರೇ. ಮೊದಲು ತಮಿಳುನಾಡಿನಿಂದ ಅನುಮತಿ ತನ್ನಿ, ನರೇಂದ್ರ ಮೋದಿ ಅವರಿಂದ 5 ಸೆಕೆಂಡಿನಲ್ಲಿ ಕೊಡಿಸುತ್ತೇವೆ ಎಂದು ಸಿದ್ದರಾಮಯ್ಯಗೆ ಎಚ್‌ಡಿಕೆ ಸವಾಲು ಹಾಕಿದರು.
    • ಅಭಿವೃದ್ಧಿಗಾಗಿ ಮೈತ್ರಿ:
      ದೇವೇಗೌಡರು ಹೇಳಿದ ಮಾತನ್ನು ಮೋದಿ ಅವರು ತೆಗೆದುಹಾಕುವುದಿಲ್ಲ. ಜೆಡಿಎಸ್ ಮಾರಾಟ ಮಾಡಲು ಮೈತ್ರಿ ಮಾಡಿಕೊಂಡಿಲ್ಲ. ಪಕ್ಷ÷ವನ್ನು ಕಟ್ಟಿರುವುದು ರಾಜ್ಯದ ಜನ, ರೈತರು. ರಾಜ್ಯದಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳಿಗಾಗಿ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.
    • ಸಿದ್ದರಾಮಯ್ಯಗೆ ಭಾಗ್ಯಗಳದ್ದೇ ಚಿಂತೆ:
      ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಮಾತನಾಡಿ, ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಧಿಕಾರ ಉಳಿಸಿಕೊಳ್ಳಲು ಮತ ಕೇಳುತ್ತಿದ್ದಾರೆ. ಅವರಿಗೆ ದೇಶದ ಕಾಳಜಿಯಿಲ್ಲ. ಈಗ ನಡೆಯುತ್ತಿರುವುದು ಗ್ಯಾಂರೆಂಟಿಗಳ ಚುನಾವಣೆಯಲ್ಲ. ಸಿದ್ದರಾಮಯ್ಯ ಆಡಳಿತ, ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ, ಅವರಿಗೆ ಭಾಗ್ಯಗಳದ್ದೆ ಚಿಂತೆ ಎಂದು ಆರೋಪಿಸಿದರು.
    • ಚುನಾವಣೆಯಲ್ಲಿ ಧರ್ಮ ಗೆಲ್ಲಬೇಕು
      ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಧರ್ಮ ಮತ್ತು ಅಧರ್ಮದ ಮಧ್ಯೆ ಚುನಾವಣೆ ನಡೆಯುತ್ತಿದೆ, ಇದರಲ್ಲಿ ಧರ್ಮ ಗೆಲ್ಲಬೇಕು, ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಸಮಾಜದಲ್ಲಿ ಒಂದು ಧರ್ಮವನ್ನು ಓಲೈಸುವ ಕೆಲಸ ಮಾಡುತ್ತಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

    ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್, ರವಿಕುಮಾರ್, ಸಿಮೆಂಟ್ ಮಂಜುನಾಥ್, ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಎಂಎಲ್ಸಿ ಇಂಚರ ಗೋವಿಂದ ರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ಜೆಡಿಎಸ್ ತಾಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಮಾಜಿ ಶಾಸಕರಾದ ವರ್ತೂರು ಆರ್.ಪ್ರಕಾಶ್, ಕೆ.ಎಸ್.ಮಂಜುನಾಥ್ ಗೌಡ, ಜೆ.ಕೆ.ಕೃಷ್ಣಾರೆಡ್ಡಿ, ವೆಂಕಟಮುನಿಯಪ್ಪ, ಎಂ.ನಾರಾಯಣಸ್ವಾಮಿ, ಮುಖಂಡರಾದ ಹೂಡಿ ವಿಜಯ್‌ಕುಮಾರ್, ಸಿಎಂಆರ್ ಶ್ರೀನಾಥ್ ಇದ್ದರು.

    • ರೋಡ್ ಶೋ..
      ಸಭೆಗೂ ಮುನ್ನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್-ಬಿಜೆಪಿ ಮುಖಂಡರು ರೋಡ್ ಶೋ ನಡೆಸಿದರು. ಅಂಬೇಡ್ಕರ್ ವೃತ್ತದಿಂದ ಎಂ.ಸಿ ರಸ್ತೆ ಮಾರ್ಗವಾಗಿ ನೇತಾಜಿ ಕ್ರೀಡಾಂಗಣದ ಬಳಿ ಅಂತ್ಯಗೊಂಡಿತು.
    • ಚುನಾವಣಾ ಬಾಣ

    ಸಿದ್ದರಾಮಯ್ಯ ಅವರು ಟಿಎಸ್‌ಪಿ, ಎಸ್‌ಟಿಪಿ ಯೋಜನೆಯಡಿ ಕೋಲಾರ ಅಲ್ಪಸಂಖ್ಯಾತರಿಗೆ 10 ಕೋಟಿ, ಬಂಗಾರಪೇಟೆ, ಕೋಲಾರಕ್ಕೆ ಕೊಟ್ಟಿದ್ದು 1.50 ಕೋಟಿ ರೂ.! ಮುಳಬಾಗಿಲಿಗೆ ಏನು ಕೊಟ್ಟಿದ್ದೀರಿ ?, ಆ ಶಾಸಕರು ಯಾರ ಮಕ್ಕಳು, ನಾವು ಯಾರ ಮಕ್ಕಳು? ನೀವು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ ಎಂಬುದನ್ನು ಮರೆತಿದ್ದೀರಿ. ಚುನಾವಣೆ ವೇಳೆ ದಲಿತರು, ಮುಸ್ಲಿಂರನ್ನು ನೆನಪಿಸಿಕೊಳ್ಳುವ ಕಾಂಗ್ರೆಸ್‌ನವರು ಬೇರೆ ಸಮಯದಲ್ಲಿ ಮುಸ್ಲಿಮರನ್ನು ಚಿನ್ನದಂಗಡಿಯಲ್ಲಿ ಅಡ ಇಡುತ್ತಾರೆ.
    | ಸಮೃದ್ಧಿ ಮಂಜುನಾಥ್, ಶಾಸಕ, ಮುಳಬಾಗಿಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts