More

    ಗಾಣದಕೊಟ್ಟಿಗೆಯ ನೇಗಿಲ ಯೋಗಿ

    -ನರೇಂದ್ರ ಎಸ್.ಮರಸಣಿಗೆ ಹೆಬ್ರಿ

    ತುಳುನಾಡಿನಲ್ಲಿ ನೇಗಿಲು ಹಾಗೂ ನೊಗಗಳಿಗೆ ಭಾರಿ ಬೇಡಿಕೆ. ಆದರೆ, ಇಂದಿನ ಯಾಂತ್ರೀಕೃತ ಬದುಕಿನಲ್ಲಿ ಸಾಂಪ್ರದಾಯಿಕ ಕೃಷಿ ಸಲಕರಣೆಗಳು ಅವನತಿಯ ಹಾದಿ ಹಿಡಿದಿವೆ. ಇಂತಹ ಸಂದರ್ಭದಲ್ಲೂ ಹೆಬ್ರಿ ತಾಲೂಕಿನ ಹಿರಿಯ ಬಡಗಿಯೊಬ್ಬರು ಮರದ ನೇಗಿಲು ಹಾಗೂ ನೊಗ ತಯಾರಿಸಿಕೊಡುವ ಮೂಲಕ ಬದುಕು ಸಾಗಿಸುತ್ತಿದ್ದಾರೆ.

    ಕಬ್ಬಿನಾಲೆ ಪ್ರದೇಶದ ಕೊಂಕಣಾರಬೆಟ್ಟು ಸಮೀಪದ ಗಾಣದಕೊಟ್ಟಿಗೆಯ ಕಾಳಯ್ಯ ಆಚಾರ್ಯ ಅವರು ತನ್ನ 76ರ ಇಳಿವಯಸ್ಸಿನಲ್ಲೂ ಕುಲಕಸುಬು ನಡೆಸುತ್ತಿದ್ದಾರೆ. ಅಲ್ಲದೆ, ತನ್ನ ಮಕ್ಕಳಿಗೂ ಕಸುಬು ಕಲಿಸಿಕೊಟ್ಟಿದ್ದು, ಸಂಪ್ರದಾಯ ಮುಂದುವರಿಸಿದ್ದಾರೆ.

    ಪುತ್ರನ ಕೈಚಳಕ

    ಕಾಳಯ್ಯ ಆಚಾರ್ಯ ಅವರ ಪುತ್ರ ವಾದಿರಾಜ ಆಚಾರ್ಯ ತಂದೆಯಿಂದ ಎಲ್ಲ ಕಸುಬು ಕಲಿತಿದ್ದಾರೆ. ಯಂತ್ರಗಳ ಸಹಾಯವಿಲ್ಲದೆ ವಿವಿಧ ಕೃಷಿ ಸಲಕರಣೆ, ಆಟಿಕೆ ವಸ್ತುಗಳು, ಕುರ್ಚಿ, ವಿವಿಧ ಗಾತ್ರದ ಕಡೆಗೋಲು, ಮರದ ಸೌಟುಗಳು, ಭತ್ತವನ್ನು ಗಾಳಿಯಲ್ಲಿ ಬೀಸಲು ಬಳಸುವ ಕೈಬಟ್ಟಲು, ಮುಟ್ಟಾಳೆಗಳು, ಗೊಬ್ಬರದ ಬುಟ್ಟಿ, ಹಣ್ಣು-ಕಾಯಿ ಬುಟ್ಟಿ, ದೇವರ ಪೂಜಾ ಸಾಮಗ್ರಿ ಇಡುವ ಬುಟ್ಟಿ, ಅಕ್ಕಿ ಮುಡಿ, ಅನ್ನ ಬಸಿಯುವ ತಟ್ಟೆಗಳು, ಭೂತದ ಮಣೆಗಳನ್ನು ತನ್ನ ಕೈಚಳಕದಿಂದ ಸುಂದರವಾಗಿ ಕೆತ್ತನೆ ಮಾಡುತ್ತಾರೆ.

    agriculture equipment manufacture
    ತಯಾರಿಸಿದ ವಿವಿಧ ವಸ್ತುಗಳೊಂದಿಗೆ ಕಾಳಯ್ಯ ಆಚಾರ್ಯ ಅವರ ಕುಟುಂಬ.

    ಕಲ್ಲಿನಲ್ಲೂ ಕೆತ್ತನೆ

    ತೆಂಗಿನ ಚಿಪ್ಪಿನಿಂದಲೂ ಅದ್ಭುತ ಕಲಾಕೃತಿ ತಯಾರಿಸುವ ಆಚಾರ್ಯರ ಕುಟುಂಬದವರು ಕಲ್ಲಿನ ಕೆತ್ತನೆಯಲ್ಲೂ ನಿಪುಣರಾಗಿದ್ದಾರೆ. ಕಲ್ಲಿನ ಮಣೆ, ದೇವರ ಮಂಚದ ಮಾದರಿ, ಗೋಪುರ ಮಾದರಿ ಕೆತ್ತುತ್ತಾರೆ. ಅಲ್ಲದೆ, ಕತ್ತಿ, ಚೇಣು, ಪ್ಲಾಸ್ಟಿಕ್ ಚಾಪೆ ತಯಾರಿಸಿ ಮಾರಾಟ ಮಾಡುತ್ತಾರೆ. ಬೇಡಿಕೆ ಬಂದರೆ ದೇವಿಯ ಮುಖವಾಡವನ್ನೂ ತಯಾರಿಸುತ್ತಾರೆ. ಕಾಳಯ್ಯ ಆಚಾರ್ಯ ಅವರ ಪತ್ನಿ ನೇತ್ರಾವತಿ, ಪ್ಲಾಸ್ಟಿಕ್ ಹಗ್ಗದಿಂದ ಹಾಗೂ ನೈಸರ್ಗಿಕವಾಗಿ ಸಿಗುವ ವಿವಿಧ ಗಿಡಗಳ ಬಳ್ಳಿಯಿಂದಲೂ ಚಾಪೆ ಹೆಣೆಯುತ್ತಾರೆ.

    ಕಲಾತ್ಮಕ ವಸ್ತುಗಳ ತಯಾರಿ

    ಕಂಬಳ ಕೋಣಗಳನ್ನು ಹೊಂದಿರುವ ಕೋಣಗಳ ಮಾಲೀಕರು ಕಾಳಯ್ಯ ಆಚಾರ್ಯ ಅವರಿಂದಲೇ ಮರದಿಂದ ತಯಾರಿಸಿದ ನೊಗ ಹಾಗೂ ನೇಗಿಲು ಖರೀದಿಸುತ್ತಾರೆ. ಸಾಗವಾನಿ, ಹಲಸು, ಜತ್ತಕ, ಮತ್ತಿ, ಹೊನ್ನೆ ಹಾಗೂ ಇನ್ನಿತರ ವಿವಿಧ ಮರಗಳಿಂದ ಉತ್ತಮವಾದ ನೊಗ-ನೇಗಿಲು ತಯಾರಿಸುತ್ತಾರೆ. ಮಂಗಳೂರು, ಬೆಳ್ತಂಗಡಿ, ಕುಂದಾಪುರ, ಬೈಂದೂರುಗಳಲ್ಲಿರುವ ಕೋಣಗಳ ಮಾಲೀಕರು ನೊಗಗಳಿಗೆ ಮುಂಗಡವಾಗಿ ಬುಕ್ಕಿಂಗ್ ಮಾಡುತ್ತಾರೆ. ಸಾಂಪ್ರದಾಯಿಕ ಕಸುಬು ಮುಂದುವರಿಸಿರುವ ವಾದಿರಾಜ ಆಚಾರ್ಯ, ವಿವಿಧ ಕಲಾತ್ಮಕ ಹಾಗೂ ಶೋಕೇಸ್‌ನಲ್ಲಿ ಇಡಬಹುದಾದ ಜನರಿಗೆ ಉಡುಗೊರೆ ಕೊಡಲು ಅನುಕೂಲವಾಗುವಂತಹ ಸಣ್ಣ ನೇಗಿಲುಗಳನ್ನೂ ತಯಾರಿಸುತ್ತಾರೆ.

    ಕೊಯಮತ್ತೂರಿನಲ್ಲಿ ನಾನು ಬಂಗಾರದ ಕೆಲಸ ಮಾಡುತ್ತಿದ್ದೆ. ಕರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡು ಊರಿಗೆ ಬಂದಿದ್ದೆ. ಇದೀಗ ತಂದೆಯ ಕಸುಬನ್ನೇ ಮುಂದುವರಿಸಿದ್ದು, ಜೀವನಕ್ಕೆ ಆಧಾರವಾಗಿದೆ. ಜನರಿಂದಲೂ ಉತ್ತಮ ಬೇಡಿಕೆ ಬರುತ್ತಿದೆ.
    -ವಾದಿರಾಜ ಆಚಾರ್ಯ, ಕಾಳಯ್ಯ ಆಚಾರ್ಯರ ಪುತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts