-ಪುರುಷೋತ್ತಮ ಪೆರ್ಲ ಕಾಸರಗೋಡು
ಜಿಲ್ಲೆಯ ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯ ನೂರಾರು ಮನೆಗಳಿಗೆ ನೀರು ಪೂರೈಸುವ ಪೈಪ್‌ಗಳು ಅಲ್ಲಲ್ಲಿ ಒಡೆದಿರುವುದಲ್ಲದೆ ಲೋವೋಲ್ಟೇಜ್‌ನಿಂದ ಬಹುತೇಕ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ವಿತರಣೆಯಾಗುತ್ತಿಲ್ಲ.
ಅಡ್ಕಸ್ಥಳ ಸೀರೆ ಹೊಳೆಗೆ ಅಣೆಕಟ್ಟು ನಿರ್ಮಿಸಿ, ಅಲ್ಲಿಂದ ಕಾಟುಕುಕ್ಕೆ, ಪಡ್ರೆ, ಎಣ್ಮಕಜೆ, ಶೇಣಿ ಗ್ರಾಮ ವ್ಯಾಪ್ತಿಯ ನೂರಾರು ಮನೆಗಳಿಗೆ ನೀರು ಪೂರೈಸಲಾಗುತ್ತಿದೆ. ಆದರೆ ಕಳಪೆ ಪೈಪ್‌ಗಳಿಂದಾಗಿ ನೀರು ಅಲ್ಲಲ್ಲಿ ಸೋರಿಕೆಯಾಗುತ್ತಿದ್ದು, ಅದರ ದುರಸ್ತಿಗೆ ಜಲಪ್ರಾಧಿಕಾರ ಮುಂದಾಗುತ್ತಿಲ್ಲ. ಇನ್ನೊಂದೆಡೆ ಲೋವೋಲ್ಟೇಜ್‌ನಿಂದ ನೀರು ಪೂರೈಕೆಯಲ್ಲಿ ಏರುಪೇರಾಗುತ್ತಿದೆ.
ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಪೈಪ್‌ನ ನೀರನ್ನು ಆಶ್ರಯಿಸಿರುವ ಹಲವು ಕುಟುಂಬಗಳು ನೀರಿಗಾಗಿ ಪರದಾಡುವ ಸ್ಥಿತಿಯಲ್ಲಿದೆ. ತಿಂಗಳ ಹಿಂದೆ ವೋಲ್ಟೇಜ್ ಕೊರತೆ ಹಿನ್ನೆಲೆಯಲ್ಲಿ ನೀರು ಮೇಲೆತ್ತಲಾಗದಿರುವುದರಿಂದ ಹೊಳೆಯಲ್ಲಿ ಒಂದಷ್ಟು ನೀರು ದಾಸ್ತಾನಿದ್ದರೂ ಮತ್ತೆ ನಿರಂತರ ಪಂಪಿಂಗ್ ಆಗುತ್ತಿರುವುದರಿಂದ ಕೆಲವೇ ದಿನಗಳಲ್ಲಿ ಖಾಲಿಯಾಗುವ ಭೀತಿಯೂ ಎದುರಾಗಿದೆ.
ಬೃಹತ್ ಬಾವಿ ನಿರ್ಮಾಣ
ಅಡ್ಕಸ್ಥಳ ಹೊಳೆಗೆ ಕಿಂಡಿ ಅಣೆಕಟ್ಟು ನಿರ್ಮಿಸಿ ಭಾರಿ ಪ್ರಮಾಣದ ನೀರು ದಾಸ್ತಾನು ಮಾಡಿಕೊಳ್ಳಲಾಗುತ್ತಿದ್ದು, ಹೊಳೆ ಮಧ್ಯೆ ಬೃಹತ್ ಬಾವಿ ನಿರ್ಮಿಸಿ 130 ಎಚ್‌ಪಿ ಸಾಮರ್ಥ್ಯದ ಎರಡು ಮೋಟಾರ್‌ಗಳ ಮೂಲಕ ನೀರು ಪಂಪ್ ಮಾಡಿ ಗೋಳಿತ್ತಡ್ಕದ ಶುದ್ಧೀಕರಣ ಘಟಕಕ್ಕೆ ರವಾನಿಸಲಾಗುತ್ತದೆ. ಅಲ್ಲಿಂದ ಪಂಚಾಯಿತಿಯ ವಿವಿಧೆಡೆ ಹಾಗೂ ನೆರೆಯ ಬದಿಯಡ್ಕ ಪಂಚಾಯಿತಿ ವ್ಯಾಪ್ತಿಗೂ ನೀರು ರವಾನೆಯಾಗುತ್ತಿದೆ.
ಒಬ್ಬನೇ ಸಿಬ್ಬಂದಿ
ಉಕ್ಕಿನಡ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಬಜಕೂಡ್ಲು ಕಾನ ಪ್ರದೇಶದಲ್ಲಿನ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಸಾಯಿ ಟ್ರಸ್ಟ್ ನಿರ್ಮಿಸಿಕೊಟ್ಟಿರುವ ಮನೆಗಳಿಗೂ ಇದೇ ಹೊಳೆಯಿಂದ ನೀರು ಪೂರೈಸಲಾಗುತ್ತಿದೆ. ಒಡೆದ ಪೈಪ್‌ಗಳಿಂದಾಗಿ ಖಂಡಿಗೆ, ಸೇರಾಜೆ, ಪೆಲ್ತಾಜೆಯ ಕೊಲ್ಲಪದವು ಪ್ರದೇಶಕ್ಕೆ ಪೈಪ್‌ಲೈನ್ ಮೂಲಕ ನೀರು ತಲುಪುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ನೀರು ಸಮರ್ಪಕವಾಗಿ ವಿತರಣೆಯಾಗದಿದ್ದರೂ ಜಲಮಂಡಳಿ ಯಾವುದೇ ಲೋಪವುಂಟಾಗದಂತೆ ನೀರಿನ ಬಿಲ್ ಮಾತ್ರ ವಿತರಿಸುತ್ತಿದೆ. ಪಂಚಾಯಿತಿ ವ್ಯಾಪ್ತಿಗೆ ನೀರು ವಿತರಣೆಗೆ ಒಬ್ಬನೇ ಸಿಬ್ಬಂದಿಯಿದ್ದು, ಇವರಿಗೆ ಕೆಲಸದ ಒತ್ತಡವೂ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ.
ಒಡೆದ ಪೈಪ್ ದುರಸ್ತಿಗೊಳಿಸುವುದರ ಜತೆಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುವಂತೆ ಸಂಬಂಧಪಟ್ಟವರು ನೋಡಿಕೊಳ್ಳುವಂತೆ ಫಲಾನುಭವಿಗಳು ಆಗ್ರಹಿಸಿದ್ದಾರೆ.
ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬೇಸಿಗೆಯ ಬೇಗೆಯಲ್ಲಿ ಕುಡಿಯುವ ನೀರಿಗೆ ಜನರು ಪರದಾಡುವ ಸ್ಥಿತಿಯಿದೆ. ಹೊಳೆಯಲ್ಲಿ ನೀರಿದ್ದರೂ ಪೈಪ್‌ಗಳು ಒಡೆದಿರುವುದರಿಂದ ನೀರು ಸಮರ್ಪಕ ಪೂರೈಕೆಗೆ ಅಡಚಣೆಯುಂಟಾಗುತ್ತಿದೆ. ಪೈಪ್ ದುರಸ್ತಿ ಮಾಡುವಂತೆ ಸಂಬಂಧಪಟ್ಟವರಿಗೆ ದೂರು ನೀಡಿದರೂ ಅಗತ್ಯ ಸಿಬ್ಬಂದಿ ಕೊರತೆಯಿರುವುದಾಗಿ ಅಸಹಾಯಕತೆ ತೋರಿಸುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿಗಳಿಗೂ ನೀರು ಪೂರೈಸಿರುವ ಬಿಲ್ ನೀಡಲಾಗುತ್ತಿದ್ದು, ಈ ಬಿಲ್ ಪಾವತಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಜಲಮಂಡಳಿ ಕಚೇರಿ ಎದುರು ಧರಣಿ ನಡೆಸುವುದು ಅನಿವಾರ್ಯವಾಗಲಿದೆ.
-ಸೋಮಶೇಖರ ಜೆ.ಎಸ್.
ಅಧ್ಯಕ್ಷರು, ಎಣ್ಮಕಜೆ ಗ್ರಾಮ ಪಂಚಾಯಿತಿ