More

    ಧೂಳು ನಿಯಂತ್ರಣಕ್ಕೆ ಮುಂದಾದ ಕಂಪನಿ

    ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

    ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಎರಡನೇ ಹಂತದ ಕಾಮಗಾರಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ನಡೆಯುತ್ತಿದ್ದು, ಈ ವೇಳೆ ಏಳುತ್ತಿರುವ ಧೂಳನ್ನು ನಿಯಂತ್ರಿಸಲು ಗುತ್ತಿಗೆದಾರ ಕಂಪನಿ ಮುಂದಾಗಿದೆ.

    ಅರ್ಧಂಬರ್ಧ ಕೆಲಸ ನಡೆಸುತ್ತಿರುವ ಕೆಲವು ಸ್ಥಳಗಳಲ್ಲಿ ಜಲ್ಲಿ ಹಾಕಿ ರಸ್ತೆಯನ್ನು ಸಮತಟ್ಟಗೊಳಿಸಲು ಗುತ್ತಿಗೆದಾರರು ಮುಂದಾಗಿದ್ದಾರೆ. ಉಜಿರೆ ಪರಿಸರದಲ್ಲಿ ಮಾತ್ರ ರಸ್ತೆಗೆ ನೀರು ಹಾಕುತ್ತಿದ್ದ ಟ್ಯಾಂಕರ್ ಈಗ ಮುಂಡಾಜೆ ತನಕ ನೀರು ಹಾಯಿಸುತ್ತಿದೆ. ನನೆಗುದಿಗೆ ಬಿದ್ದಿದ್ದ ಕಿರು ಸೇತುವೆ ರಚನೆ ಕಾಮಗಾರಿ ಮತ್ತೆ ಕೆಲವೆಡೆ ಆರಂಭವಾಗಿದೆ. ಉಜಿರೆ ಪರಿಸರದಲ್ಲಿ ನಿಗದಿಗಿಂತ ಅಧಿಕ ನೀರನ್ನು ರಸ್ತೆಗೆ ಹಾಯಿಸಿ ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಆಗುತ್ತಿದ್ದ ಪ್ರದೇಶದಲ್ಲಿ ಈಗ ನಿಗದಿತ ಮಟ್ಟದಲ್ಲಿ ನೀರನ್ನು ರಸ್ತೆಗೆ ಹಾಕಲಾಗುತ್ತಿದೆ.

    ಕಳೆದ ಆರು ತಿಂಗಳಿನಿಂದ ಕಾಮಗಾರಿ ನಡೆಯುತ್ತಿದ್ದು, ರಸ್ತೆ ವಿಸ್ತರಣೆ ನೆಪದಲ್ಲಿ ಎಲ್ಲೆಂದರಲ್ಲಿ ಅಗೆದು ಹಾಕಲಾಗಿದೆ. ಕಾಮಗಾರಿ ಧೂಳಿನಿಂದ ವಾಹನ ಸವಾರರು ಮತ್ತು ಸ್ಥಳೀಯರು ನಾನಾ ಸಮಸ್ಯೆಗಳಿಂದ ಕಂಗೆಟ್ಟಿದ್ದರು. ಈ ಬಗ್ಗೆ ಗುತ್ತಿಗೆದಾರ ಕಂಪನಿಯವರಲ್ಲಿ ವಿನಂತಿಸಿದರೂ ಯಾವುದೇ ಕ್ರಮಕ್ಕೆ ಮುಂದಾಗದೆ ಮತ್ತೆ ಮತ್ತೆ ರಸ್ತೆಯನ್ನು ಅಗೆದು ಹಾಕುವುದನ್ನು ಮುಂದುವರಿಸಿದ್ದು, ಸಾರ್ವಜನಿಕರಲ್ಲಿ ಆಕ್ರೋಶ ಹೆಚ್ಚಲು ಕಾರಣವಾಗಿತ್ತು.

    ಒಂದೆಡೆ ರಸ್ತೆ ಅಗೆದರೆ ಅಲ್ಲಿ ಕಾಮಗಾರಿ ಪೂರ್ಣಗೊಳಿಸದೆ ಇನ್ನೊಂದೆಡೆ ರಸ್ತೆ ಅಗೆದು ಹಾಕಲಾಗುತ್ತಿದೆ. ಇದು ಸಾರ್ವಜನಿಕರಲ್ಲಿ ಆಕ್ರೋಶ ಹೆಚ್ಚಲು ಕಾರಣವಾಗಿದೆ. ಇತ್ತೀಚೆಗೆ ಉಜಿರೆಯಲ್ಲಿ ಸ್ಥಳೀಯ ನಾಗರಿಕರು ಹಾಗೂ ವಾಹನ ಸವಾರರು ಗುತ್ತಿಗೆದಾರ ಕಂಪನಿ ಅಧಿಕಾರಿಗಳ ಅವೈಜ್ಞಾನಿಕ ಕೆಲಸದ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದರು. ಧೂಳಿನಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ‘ವಿಜಯವಾಣಿ’ ವರದಿ ಪ್ರಕಟಿಸಿತ್ತು.

    ಕಣ್ಣೊರೆಸುವ ತಂತ್ರ ಆಗದಿರಲಿ

    ಈ ಹಿಂದೆ ಜನಪ್ರತಿನಿಧಿಗಳು, ವರ್ತಕರು, ಸಾರ್ವಜನಿಕರು, ಗುತ್ತಿಗೆದಾರ ಕಂಪನಿ ಅಧಿಕಾರಿಗಳು ಹಾಗೂ ಇಲಾಖೆಯ ಅಧಿಕಾರಿಗಳನ್ನು ಕರೆದು ಅಭಿವೃದ್ಧಿ ಕಾಮಗಾರಿ ಸಂದರ್ಭ ಸಾರ್ವಜನಿಕರಿಗೆ ಉಂಟಾಗುತ್ತಿದ್ದ ತೊಂದರೆಗಳ ಕುರಿತು ವಿವರಿಸಿದ್ದರು. ಇದರ ಬಳಿಕ ಕೇವಲ ನಾಲ್ಕು ದಿನ ಧೂಳು ಏಳುವ ಎಲ್ಲ ಸ್ಥಳಗಳಲ್ಲಿ ನೀರು ಹಾಯಿಸುವ ಕಾಮಗಾರಿ ಮಾಡಲಾಗಿದ್ದು, ಇದು ಕೇವಲ ನಾಲ್ಕು ದಿನಗಳಿಗೆ ಸೀಮಿತವಾಗಿತ್ತು. ಈ ಬಾರಿ ಕೂಡ ಇದು ಪುನರಾವರ್ತನೆಯಾದರೆ ನಾಗರಿಕರು ಮತ್ತೆ ಪ್ರತಿಭಟನೆ ಮಾಡುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts