

ಬೆಂಗಳೂರು: ನಗರದ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೋರ್ವ ಹರಿದ ಬಟ್ಟೆ ಧರಿಸಿದ್ದ ಎಂಬ ಕಾರಣಕ್ಕೆ ಸಿಬ್ಬಂದಿ ಆತನಿಗೆ ಪ್ರವೇಶ ನಿರಾಕರಿಸಲಾಗಿದ ಎಂದು ಮಂಗಳವಾರ (ಏಪ್ರಿಲ್ 09) ಸುದ್ದಿ ಪ್ರಕಟಿಸಲಾಗಿತ್ತು. ಈ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು ಮತ್ತು ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿತ್ತು. ಹಲವರು ಮೆಟ್ರೋ ಸಿಬ್ಬಂದಿಯ ನಡೆಗೆ ಕಿಡಿಕಾರಿದ್ದರು.
ಭಾನುವಾರ (ಏಪ್ರಿಲ್ 07) ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣಕ್ಕೆ ಬಂದ ವ್ಯಕ್ತಿಗೆ ಶರ್ಟ್ ಬಟನ್ ಹಾಕಿ ಶುಭ್ರವಾಗಿ ಬರಬೇಕು ಇಲ್ಲದೇ ಇದ್ದಲ್ಲಿ ಪ್ರವೇಶ ನೀಡುವುದಿಲ್ಲ ಎಂದು ಮೆಟ್ರೋ ಸಿಬ್ಬಂದಿಗಳು ಆತನಿಗೆ ಪ್ರವೇಶ ನಿರಾಕರಿಸಿದ್ದು, ಆತ ನಿಲ್ದಾಣದಲ್ಲೇ ಕೈ ಕಟ್ಟಿಕೊಂಡು ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ಹಲವರು ಆಕ್ರೋಶ ಹೊರಹಾಕಿದ್ದರು. ಇದೀಗ ಈ ವಿಚಾರವಾಗಿ ಬಿಎಂಆರ್ಸಿಎಲ್ ಪ್ರತಿಕ್ರಿಯಿಸಿದೆ.
ಏಪ್ರಿಲ್ 7, 2024 ರಂದು, ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ರಾತ್ರಿ 7:34 ರ ಸುಮಾರಿಗೆ, ಭದ್ರತಾ ತಪಾಸಣೆಯಲ್ಲಿ ವ್ಯಕ್ತಿಯೊಬ್ಬರಿಂದ ಮದ್ಯ ಪಾನದ ವಾಸನೆ ಗಮನಿಸಿ ಸೂಕ್ತ ವಿಚಾರಣೆ ನಡೆಸಾಲಾಗಿ, ಈ ಮೊದಲೇ ಮದ್ಯಪಾನ ಮಾಡಿರುವುದನ್ನು ಒಪ್ಪಿಕೊಂಡಿರುತ್ತಾನೆ. ಭದ್ರತಾ ಸಿಬ್ಬಂದಿ ವ್ಯಕ್ತಿಯ ಸ್ಥಿತಿಯನ್ನು ಮೌಲ್ಯಮಾಪನ ಮಾಡಿ ವ್ಯಕ್ತಿಯ ಸ್ಥಿತಿಯನ್ನು ದೃಢೀಕರಿಸಿ ಇತರ ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಸಲು ಅವಕಾಶ ನೀಡಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ತಿಳಿಸಿರುವಂತೆ ಸಮಸ್ಯೆ ವ್ಯಕ್ತಿಯ ಉಡುಪಿನ ಬಗ್ಗೆ ಸಂಬಂಧವಿರುವುದಿಲ್ಲ ಎಂದು ಬಿಎಂಆರ್ಸಿಎಲ್ ಸ್ಪಷ್ಟನೆ ನೀಡಿದೆ.
ಈ ಹಿಂದೆ, ಬಿಎಂಆರ್ಸಿಎಲ್ ಸಿಬ್ಬಂದಿ ರೈತನಿಗೆ ಮೆಟ್ರೋ ಪ್ರವೇಶಕ್ಕೆ ಅವಕಾಶ ನೀಡದ ಬಗ್ಗೆ ಸಾರ್ವಜನಿಕರ ಆಕ್ರೋಶದ ನಂತರ ಬೆಂಗಳೂರು ಮೆಟ್ರೋ ರೈಲು ನಿಗಮವು ಭದ್ರತಾ ಸಿಬ್ಬಂದಿಯನ್ನು ವಜಾಗೊಳಿಸಲಾಗಿತ್ತು.