

ಕಾಸರಗೋಡು: ಬ್ಲಾಕ್ ಪಂಚಾಯಿತಿಯ 2025-26ನೇ ಸಾಲಿನ ಮಿಗತೆ ಬಜೆಟನ್ನು ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಪಿ.ಎ ಅಶ್ರಫಲಿ ಶನಿವಾರ ಮಂಡಿಸಿದರು. ಕಾಸರಗೋಡು ಬ್ಲಾಕ್ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ಅಧ್ಯಕ್ಷೆ ಸೈಮಾ ಸಿ.ಎ ಅಧ್ಯಕ್ಷತೆ ವಹಿಸಿದ್ದರು.
49,9025919ರೂ. ಆದಾಯ ನಿರೀಕ್ಷೆ ಹೊಂದಿದ ಹಾಗೂ 49,7036970 ರೂ. ಖರ್ಚು ಅಂದಾಜಿಸಿರುವ 504849ರೂ. ಮಿಗತೆ ಬಜೆಟ್ ಮಂಡಿಸಲಾಯಿತು. ಉತ್ಪಾದನಾ ವಲಯಕ್ಕೆ 5902500 ರೂ, ವಸತಿ ನಿರ್ಮಾಣಕ್ಕೆ 2.43ಕೋಟಿ ರೂ., ಮಾಲಿನ್ಯ ನಿರ್ಮೂಲನೆಗೆ 1.10 ಕೋಟಿ ರೂ., ಎಸ್‌ಸಿ-ಎಸ್‌ಟಿ ವಿಭಾಗದ ಅಬಿವೃದ್ಧಿಗೆ 1.31ಕೋಟಿ ರೂ., ಸಾರ್ವಜನಿಕ ಕಟ್ಟಡ, ಸೇತುವೆ, ರಸ್ತೆ, ಸಾರ್ವಜನಿಕ ಸ್ಥಳದಲ್ಲಿ ವಿದ್ಯುತ್ ವಿತರಣೆಗಾಗಿ 2.44ಕೋಟಿ ರೂ. ಮೀಸಲಿರಿಸಲಾಗಿದೆ.
ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಸದಸ್ಯರು, ಬ್ಲಾಕ್ ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಬ್ಲಾಕ್ ಪಂಚಾಯಿತಿ ಸಇಬ್ಬಂದಿ ಉಪಸ್ಥಿತರಿದ್ದರು.
ಕನ್ನಡ ಕಡೆಗಣನೆ
ಕಾಸರಗೋಡು ಬ್ಲಾಕ್ ಪಂಚಾಯಿತಿ ಬಜೆಟ್ ಪುಸ್ತಕ ಕನ್ನಡದಲ್ಲಿ ಪ್ರಕಟಿಸದೆ ಕನ್ನಡಿಗರಿಗೆ ವಂಚನೆಯೆಸಗಿರುವ ಬಗ್ಗೆ ಪ್ರತಿಪಕ್ಷ ಮುಖಂಡ ಸುಕುಮಾರ್ ಕುದ್ರೆಪ್ಪಾಡಿ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಕೆಲವು ವರ್ಷಗಳಿಂದ ಈ ಬಗ್ಗೆ ಬ್ಲಾಕ್ ಪಂಚಾಯಿತಿಗೆ ಮನವರಿಕೆ ಮಾಡುತ್ತಾ ಬಂದಿದ್ದರೂ ಅಧಿಕಾರಿಗಳು ಸಾಫ್ಟ್‌ವೇರ್‌ನ ತಾಂತ್ರಿಕ ದೋಷದ ಬಗ್ಗೆ ಪ್ರಸ್ತಾಪಿಸಿ ಕನ್ನಡದಲ್ಲಿ ಬಜೆಟ್ ಪುಸ್ತಕ ಪ್ರಕಟಿಸುವುದನ್ನು ಮುಂದೂಡುತ್ತಾ ಬಂದಿದ್ದರೆ ಎಂದರು.