

ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯಲ್ಲಿ ಶುಕ್ರವಾರ ರಾತ್ರಿ ಮಹಾರಥೋತ್ಸವ ನಡೆದು ಶನಿವಾರ ರಾತ್ರಿ ಅವಭೃತ ಸ್ನಾನದ ಬಳಿಕ ಧ್ವಜಾವರೋಹಣಗೊಂಡು ಜಾತ್ರೆ ಸಮಾಪ್ತಿಗೊಂಡಿತು.
ಮಾ.11ರಿಂದ 5 ದಿನಗಳ ಕಾಲ ಬ್ರಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಮೊದಲ ದಿನ ಧ್ವಜಾರೋಹಣ, ರಾತ್ರಿ ಬಲಿ ಉತ್ಸವ, ಸಭಾ ಕಾರ್ಯಕ್ರಮದ ಬಳಿಕ ಸರಪಾಡಿ ಯುವಕ ಮಂಡಲದ ಪ್ರಾಯೋಜಕತ್ವದಲ್ಲಿ ಚೈತನ್ಯ ಕಲಾವಿದರು ಬೈಲೂರು ಅವರಿಂದ ಅಷ್ಟೆಮಿ ತುಳು ನಾಟಕ ಪ್ರದರ್ಶನಗೊಂಡಿತು. ಎರಡನೇ ದಿನ ಬೆಳಗ್ಗೆ ವೈದಿಕ ಕಾರ್ಯ ಸಹಿತ ಸಾರ್ವಜನಿಕ ಸೀಯಾಳಾಭಿಷೇಕ, ರಾತ್ರಿ ಪಲ್ಲಕಿಯಲ್ಲಿ ದೇವರ ಅಗ್ರಹಾರ ಬೀದಿ ಸವಾರಿ, 3ನೇ ರಾತ್ರಿ ಧರ್ಮದೈವ ಪಂಜುರ್ಲಿ ನೇಮ, ಚಂದ್ರಮಂಡಲೋತ್ಸವ, ಫ್ರೆಂಡ್ಸ್ ಮಿಯಾರುಪಲ್ಕೆ ಸದಸ್ಯರಿಂದ ಪಿರ ಬನ್ನಗ ತುಳು ನಾಟಕ ಪ್ರದರ್ಶನಗೊಂಡಿತು.
ನಾಲ್ಕನೇ ದಿನ ಮಧ್ಯಾಹ್ನ ಶ್ರೀ ಮನ್ಮಹಾರಥಾರೋಹಣ, ರಾತ್ರಿ ಶಾಂತಿಗುಡ್ಡೆಯಲ್ಲಿ ಶ್ರೀ ರಕ್ತೇಶ್ವರೀ ನೇಮ, ದೈವ-ದೇವರ ಭೇಟಿ, ಮಹಾರಥೋತ್ಸವ, ಶನಿವಾರ ಬೆಳಗ್ಗೆ ದೇವರ ದಿವ್ಯದರ್ಶನ, ರಾತ್ರಿ ಶ್ರೀ ಕೋಡಿ ಕಲ್ಲುರ್ಟಿ ನೇಮ, ಓಕುಳಿ, ನೇತ್ರಾವತಿ ನದಿಯಲ್ಲಿ ಅವಭೃತ ಸ್ನಾನ, ಧ್ವಜಾವರೋಹಣಗೊಂಡಿತು. ಭಕ್ತರು ಪ್ರತಿದಿನ ಮಧ್ಯಾಹ್ನ-ರಾತ್ರಿ ಅನ್ನಪ್ರಸಾದ ಸ್ವೀಕರಿಸಿದರು.