

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಆರನೇ ತಿಂಗಳಿಗೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿಯೇ ಹುಬ್ಬಳ್ಳಿಯಲ್ಲಿ ಮಂಗಳವಾರ ಮತ್ತು ಬುಧವಾರ (ಡಿ.28, 29) ನಡೆಯುತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆ ರಾಜಕೀಯವಾಗಿ ಗಮನ ಸೆಳೆದಿದೆ. ಹಾನಗಲ್ ಸೋಲು, ಮೇಲ್ಮನೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದೆ ಇರುವುದರಿಂದ ಈ ಸಭೆ ಮಹತ್ವ ಪಡೆದುಕೊಂಡಿದೆ.
ಬಿ.ಎಸ್. ಯಡಿಯೂರಪ್ಪ ನಂತರ ರಾಜ್ಯದ ಚುಕ್ಕಾಣಿ ಹಿಡಿದ ಬೊಮ್ಮಾಯಿ, ಸರ್ಕಾರ ಮುನ್ನೆಡೆಸಿರುವ ರೀತಿಯೂ ಸಭೆಯಲ್ಲಿ ಚರ್ಚೆಗೆ ಬರಲಿದೆ. ಅಷ್ಟೇ ಅಲ್ಲ, ಸಚಿವರು ಎಷ್ಟರಮಟ್ಟಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತರು ಮತ್ತು ಮುಖಂಡರಿಗೆ ಯಾವ್ಯಾವ ರೀತಿಯಲ್ಲಿ ಸ್ಪಂದನೆ ನೀಡುತ್ತಿದ್ದಾರೆ. ಚುನಾವಣೆಗೆ ಪಕ್ಷ ಸಂಘಟನೆ ಮಾಡುವ ದೃಷ್ಟಿಯಲ್ಲಿ ಏನೇನು ಕ್ರಮ ಕೈಗೊಳ್ಳಬೇಕಿದೆ ಎನ್ನುವ ಅಂಶಗಳ ಬಗ್ಗೆಯೂ ಕೂಲಂಕಷವಾಗಿ ಚರ್ಚೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮಹತ್ವದ ಕೋರ್ ಕಮಿಟಿ: ಮುಖ್ಯಮಂತ್ರಿ ತವರು ಜಿಲ್ಲೆಯ ಹಾನಗಲ್ ಕ್ಷೇತ್ರದ ಸೋಲು ಹಾಗೂ ಮೇಲ್ಮನೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದೆ ಇರುವುದು, ಚುನಾವಣೆಯಲ್ಲಿ ಕೆಲ ಸಚಿವರು ಕೈ ಕೊಟ್ಟಿರುವ ಬಗ್ಗೆ ದೂರುಗಳಿರುವುದರಿಂದ ಕೋರ್ ಕಮಿಟಿಯಲ್ಲಿ ಚರ್ಚೆಗೆ ಒಳಪಡುವ ಸಾಧ್ಯತೆಗಳಿವೆ. ಬೆಳಗಾವಿ ಹಾಗೂ ಮೈಸೂರಿನಲ್ಲಿ ಸೋತಿದ್ದರೆ, ಧಾರವಾಡ ಹಾಗೂ ವಿಜಯಪುರದಲ್ಲಿ ಪ್ರಯಾಸದ ಗೆಲುವು ಪಡೆಯಲಾಗಿದೆ. ಮಂಡ್ಯ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸಚಿವರು ಕೈ ಕೊಟ್ಟಿದ್ದಾರೆಂಬ ಮಾಹಿತಿ ಪಕ್ಷಕ್ಕೆ ಲಭ್ಯವಾಗಿದೆ. ಮುಂದಿನ ಚುನಾವಣೆ ವೇಳೆಗೆ ಕೆಲವರು ಬೇರೆ ಕಡೆ ಹೋಗಲಿದ್ದಾರೆ ಎಂಬ ಸಂದೇಹ ಪಕ್ಷದ ಮುಖಂಡರಿಗೆ ಬಂದಿದೆ. ಆದ್ದರಿಂದ ಕೋರ್ ಕಮಿಟಿ ಮಹತ್ವ ಪಡೆದಿದೆ.
ಪಕ್ಷದ ಸಂಘಟನೆಗೆ ಸಚಿವರನ್ನು ನಿಯೋಜಿಸುವ ವಿಷಯ ಸೇರಿದಂತೆ ಹಲವು ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಕಾರ್ಯಕಾರಿಣಿಯಲ್ಲಿ ಕೇವಲ ಸಂಘಟನೆಯ ವಿಚಾರಗಳು ಮಾತ್ರ ಚರ್ಚೆಗೆ ಒಳಪಡಲಿವೆ. ಆದರೆ ಕೋರ್ ಕಮಿಟಿಯಲ್ಲಿ ಸರ್ಕಾರ, ರಾಜಕೀಯ ವಿಚಾರ ಮೊದಲಾದವು ಚರ್ಚೆಗೆ ಒಳಪಡಲಿವೆ.
ಎರಡು ನಿರ್ಣಯ: ದೇಶ ಹಾಗೂ ರಾಜ್ಯದ ಹಿತ ಗಮನದಲ್ಲಿ ಇಟ್ಟುಕೊಂಡು 2 ಪ್ರಮುಖ ನಿರ್ಣಯಗಳನ್ನು ಕಾರ್ಯಕಾರಿಣಿಯಲ್ಲಿ ಅಂಗೀಕರಿಸಲಾಗುವುದು ಎಂದು ನಾಯಕರು ಮಾಹಿತಿ ನೀಡಿದ್ದಾರೆ. ಪಕ್ಷದ ಮೂಲ ಸಿದ್ಧಾಂತಗಳ ಚೌಕಟ್ಟಿನಲ್ಲಿ ಸಂಘಟನೆ ಬಲಪಡಿಸಲು ಪೂರಕ ಸಂಗತಿಗಳು, ಸಂಘಟನೆ ಬೆಳವಣಿಗೆಗೆ ಅನುಕೂಲವಾಗುವಂತೆ ಆಡಳಿತ ನಡೆಯುವ ಕುರಿತು ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಬಿಜೆಪಿ ಪಾಲಿನ ಅದೃಷ್ಟನಗರಿ: ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್ ಆವರಣದಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಹಲವು ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ರಾಷ್ಟ್ರಮಟ್ಟದ ನಾಯಕರು ಹಾಗೂ 568 ಜನ ಅಪೇಕ್ಷಿತರು ಪಾಲ್ಗೊಳ್ಳಲಿದ್ದಾರೆ. 10 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ನಡೆದಿತ್ತು. ಪಕ್ಷವನ್ನು ರಾಜ್ಯಮಟ್ಟದಲ್ಲಿ ಇನ್ನಷ್ಟು ಬಲಿಷ್ಟಗೊಳಿಸಲು ಪೂರಕವಾಗಿ ಪ್ರತಿ ಜಿಲ್ಲೆಯಲ್ಲಿ ಕಾರ್ಯಕಾರಿಣಿ ಆಯೋಜಿಸಲು ಬಿಜೆಪಿ ರಾಜ್ಯ ಸಮಿತಿ ನಿರ್ಧರಿಸಿದೆ. ಈಗಾಗಲೆ ಮಂಗಳೂರಿನಲ್ಲಿ ವಿಶೇಷ ಕಾರ್ಯಕಾರಿಣಿ, ಬೆಳಗಾವಿ, ಶಿವಮೊಗ್ಗ, ದಾವಣಗೆರೆಯಲ್ಲಿ ಕಾರ್ಯಕಾರಿಣಿ ಜರುಗಿದೆ. ಹುಬ್ಬಳ್ಳಿ ಬಿಜೆಪಿ ಪಾಲಿಗೆ ಒಂದು ರೀತಿಯಲ್ಲಿ ಅದೃಷ್ಟದ ನಗರ. ರಾಜ್ಯದಲ್ಲಿ ಜನಪ್ರಿಯತೆ ಇಲ್ಲದ ಕಾಲದಲ್ಲಿ ಬಿಜೆಪಿ ನಾಯಕರು ವಿವಿಧ ಹೋರಾಟ ರೂಪಿಸಲು ಹುಬ್ಬಳ್ಳಿಯನ್ನು ಕೇಂದ್ರವಾಗಿಸಿಕೊಂಡಿದ್ದರು. ಮುಖ್ಯಮಂತ್ರಿ ಬದಲಾವಣೆ ಗಾಳಿಸುದ್ದಿ ಕೇಳಿಬರುತ್ತಿರುವಾಗಲೇ ಬಸವರಾಜ ಬೊಮ್ಮಾಯಿ ತವರು ನಗರದಲ್ಲಿ ಕಾರ್ಯಕಾರಿಣಿ ಏರ್ಪಾಟಾಗಿದೆ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿ.ಅರುಣಾ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ನಿರ್ಮಲಾ ಸೀತಾರಾಮನ್, ರಾಜೀವ ಚಂದ್ರಶೇಖರ್, ಭಗವಂತ ಖೂಬಾ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್ ಮತ್ತು ಸಚಿವರು ಪಾಲ್ಗೊಳ್ಳುವರು.