

ಬೆಳಗಾವಿ: ಗ್ಯಾರಂಟಿ ಯೋಜನೆಗಳಿಗಾಗಿ ಬಳಕೆ ಮಾಡಿಕೊಂಡಿರುವ ಎಸ್ಸಿಎಸ್ಪಿ/ಟಿಎಸ್ಪಿ ಯೋಜನೆಗೆ ಸೇರಿದ 11 ಸಾವಿರ ಕೋಟಿ ರೂಪಾಯಿ ವಾಪಸ್ ಪಡೆದು ಪರಿಶಿಷ್ಟರಿಗೇ ಬಳಬೇಕೆಂದು ಪಟ್ಟು ಹಿಡಿದ ಬಿಜೆಪಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಪ್ರಸಂಗ ವಿಧಾನ ಪರಿಷತ್ನಲ್ಲಿ ಶುಕ್ರವಾರ ನಡೆಯಿತು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಎಸ್ಸಿಎಸ್ಪಿ/ಟಿಎಸ್ಪಿ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಧರಣಿ ನಡೆಸಿದರು. ಈ ವೇಳೆ ಹಿಂದಿನ ಸರ್ಕಾರದ ಅವಧಿಯಲ್ಲಿ ಹೇಗೆ ಅನ್ಯ ಉದ್ದೇಶಕ್ಕೆ ಹಣ ವರ್ಗಾವಣೆಯಾಗಿದೆ ಎಂಬುದನ್ನು ಸರ್ಕಾರ ವಿವರಿಸಿದ್ದರಿಂದ ಮಾತಿನ ಚಕಮಕಿ ನಡೆಯಿತು. ಬಜೆಟ್ನಲ್ಲಿ ಎಸ್ಸಿಎಸ್ಪಿ/ಟಿಎಸ್ಪಿ ಯೋಜನೆಗೆ ಮೀಸಲಿಟ್ಟ 11 ಸಾವಿರ ಕೋಟಿ ಹಣವನ್ನು ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಒದಗಿಸಿರುವುದು ಅಸಮಂಜಸ. ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ, ಎಸ್ಟಿ ಜನರಿಗೆ ಮೀಸಲಿಟ್ಟ ಹಣ ಏಕೆ ಬಳಸುತ್ತೀರಿ ಎಂದು ಬಿಜೆಪಿ ಸದಸ್ಯರಾದ ಛಲವಾದಿ ನಾರಾಯಣ ಸ್ವಾಮಿ, ಎನ್.ರವಿಕುಮಾರ್ ಪ್ರಶ್ನಿಸಿದರು.
ಪ್ರತಿಯಾಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಉತ್ತರಿಸಿ, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನೀರಾವರಿ, ಲೋಕೋಪಯೋಗಿ ಯೋಜನೆಗಳಿಗೆ ಹಣ ವರ್ಗಾವಣೆ ಮಾಡಿದೆ ಎಂದು ಕುಟುಕಿದರು.
ಎಸ್ಸಿಎಸ್ಪಿ/ಟಿಎಸ್ಪಿ ಅಧಿನಿಯಮ 2013 ಮತ್ತು ನಿಯಮಗಳು 2017 ರಲ್ಲಿ ಪ.ಜಾತಿ ಮತ್ತು ಪಂಗಡದ ಜನರಿಗೆ ನೇರವಾಗಿ ಪ್ರಯೋಜನವಾಗುವ ಕಾರ್ಯಕ್ರಮಗಳಿಗೆ ಈ ಅನುದಾನ ಬಳಸಲು ಅವಕಾಶವಿದೆ. ಯಾವುದೇ ಸಂದರ್ಭದಲ್ಲೂ ಅನ್ಯ ಉದ್ದೇಶಕ್ಕಾಗಿ ಬಳಸುವುದಿಲ್ಲ ಹಾಗೂ ಕಾಯ್ದೆಯ ಉಲ್ಲಂಘನೆಯ ಅವಕಾಶ ನೀಡುವುದಿಲ್ಲ ಎಂದು ಸಮರ್ಥಿಸಿದರು.
ಈ ಉತ್ತರಕ್ಕೆ ಬಿಜೆಪಿ ಸದಸ್ಯರು ತೃಪ್ತರಾಗಲಿಲ್ಲ. ಸರ್ಕಾರ ತಪು್ಪ ಮಾಹಿತಿ ನೀಡುತ್ತಿದೆ. ಜನರ ಕಣ್ಣಿಗೆ ಮಣ್ಣೆರರಚಲಾಗುತ್ತಿದೆ ಎಂದು ಸಿಟ್ಟಿಗೆದ್ದು ಸಭಾಪತಿ ಪೀಠದ ಎದುರು ಬಂದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತ ಧರಣಿ ನಡೆಸಿದರು. 3 ಸಲ ಸದನ ಮುಂದೂಡಲ್ಪಟ್ಟಿತು. ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರೆ, ದಲಿತ ವಿರೋಧಿ ಬಿಜೆಪಿ ಎಂಬ ಘೋಷಣೆಗಳನ್ನು ಪ್ರತಿಯಾಗಿ ಕಾಂಗ್ರೆಸ್ನವರು ಮೊಳಗಿಸಿದರು.
2023-24ನೇ ಸಾಲಿನ ಬಜೆಟ್ ನಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಸಾರಾಸಗಟಾಗಿ ಗ್ಯಾರಂಟಿ ಯೋಜನೆಯಲ್ಲಿ ಒದಗಿಸಿದ್ದೇವೆ ಎನ್ನುವುದನ್ನು ಸರ್ಕಾರ ಬಿಡಬೇಕು. ಗ್ಯಾರಂಟಿ ಯೋಜನೆಗಳಿಗೆ ಪ್ರತ್ಯೇಕವಾಗಿ ಹಣ ಹೊಂದಿಸಿಕೊಳ್ಳಬೇಕು.
| ಎನ್.ರವಿಕುಮಾರ್ ಬಿಜೆಪಿ ಸದಸ್ಯ
ರಾಜೀನಾಮೆ ಎಚ್ಚರಿಕೆ ನೀಡಿದ ಸಭಾಪತಿ!
ಆಡಳಿತ- ಪ್ರತಿಪಕ್ಷ ಸದಸ್ಯರ ವಾಗ್ವಾದ, ಮಾತಿನ ಜಟಾಪಟಿಗೆ ಬೇಸತ್ತು ಬಸವರಾಜ ಹೊರಟ್ಟಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದರು. ಸಭಾಪತಿ ಎದ್ದುನಿಂತು ‘43 ವರ್ಷದಿಂದ ರಾಜಕೀಯದಲ್ಲಿದ್ದೇನೆ. ನಿಮ್ಮ ನಡವಳಿಕೆಗಳನ್ನು ನೋಡಿದರೆ ನಾನು ಇಲ್ಲಿರಬಾರದು, ರಾಜಿನಾಮೆ ನೀಡಬೇಕಾಗುತ್ತದೆ’ ಎಂದು ಕೋಪದಿಂದ ನುಡಿದರು. ಸದಸ್ಯರ ಧಿಕ್ಕಾರದ ಕೂಗು, ವಾಗ್ವಾದಗಳಿಂದ ಬೇಸತ್ತಿದ್ದ ಸಭಾಪತಿ ಮೂರು ಬಾರಿ ಸದನ ಮುಂದೂಡಿದರೂ ಸದಸ್ಯರು ಧರಣಿ ಮುಂದುವರಿಸಿದ್ದರಿಂದ ಗರಂ ಆಗಿದ್ದರು. ಅನಗತ್ಯವಾಗಿ ಸದನದ ಸಮಯ ಹಾಳು ಮಾಡಬೇಡಿ ಎಂದು ತಿಳಿಸಿದ ಬಳಿಕ ಧರಣಿನಿರತರು ತಮ್ಮ ಆಸನಗಳಿಗೆ ಹಿಂದಿರುಗಿದರು.
ವಾದ- ಪ್ರತಿವಾದ
ಎಸ್ಸಿಎಸ್ಪಿ/ಟಿಎಸ್ಪಿ ಅನುದಾನದಲ್ಲಿ ಗೖಹಲಕ್ಷ್ಮೀ ಯೋಜನೆಗೆ 5,075 ಕೋಟಿ ರೂ, ಅನ್ನಬಾಗ್ಯಕ್ಕೆ 2,779.50 ಕೋಟಿ ರೂ, ಗೖಹಜ್ಯೋತಿಗೆ 2,410 ಕೋಟಿ ರೂ., ಶಕ್ತಿ ಯೋಜನೆಗೆ 812 ಕೋಟಿ ರೂ., ಯುವನಿಧಿಗೆ 67.50 ಕೋಟಿ ರೂ. ಒದಗಿಸಲಾಗಿದ್ದು, ಈ ಮೊತ್ತ ಪ.ಜಾತಿ/ಪಂಗಡದವರಿಗೆ ಉಪಯೋಗಿಸುತ್ತಿದೆ. ಅನುದಾನ ದುರ್ಬಳಕೆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವರು ಸಮರ್ಥಿಸಿಕೊಂಡರು. ಹಾಗಿದ್ದರೆ ಬೇರೆ ಯೋಜನೆಗಳಲ್ಲೂ ಹೀಗೆಯೇ ಬಳಕೆ ಮಾಡುತ್ತೀರಾ ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದರು.