More

    ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ: ಮೋಹನ್ ನಾಯಕ್ ಜಾಮೀನು ಮಂಜೂರು

    ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪ ಎದುರಿಸುತ್ತಿರುವ ಎನ್.ಮೋಹನ್ ನಾಯಕ್ ಅಲಿಯಾಸ್ ಸಂಪಾಜೆಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.


    ಈ ಒಟ್ಟು ಪ್ರಕರಣದಲ್ಲಿ ೧೮ ಆರೋಪಿಗಳಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಲಿರುವ ಮೊದಲ ಆರೋಪಿ ಮೋಹನ್ ನಾಯಕ್ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಎನ್.ಮೋಹನ್ ನಾಯಕ್ ಅವರು ಸಲ್ಲಿಸಿದ್ದ ಅರ್ಜಿಯನ್ನುನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.


    ಪ್ರಕರಣದಲ್ಲಿ ೧೧ನೇ ಆರೋಪಿಯಾಗಿರುವ ಮೋಹನ್ ನಾಯಕ್ ೧ ಲಕ್ಷ ರೂ.ಮೌಲ್ಯದ ವೈಯಕ್ತಿಕ ಬಾಂಡ್, ಇಬ್ಬರ ಭದ್ರತಾ ಖಾತರಿ ನೀಡಬೇಕು, ವಿಚಾರಣಾಧೀನ ನ್ಯಾಯಾಲಯ ಅನುಮತಿಸದ ಹೊರತು ಪ್ರತೀ ವಿಚಾರಣೆಗೂ ಆರೋಪಿ ನ್ಯಾಯಾಲಯದ ಮುಂದೆ ಹಾಜರಾಗಬೇಕು ಮತ್ತು ನ್ಯಾಯಾಲಯದ ವ್ಯಾಪ್ತಿಯಿಂದ ಹೊರ ಹೋಗುವಂತಿಲ್ಲ. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ಇಂಥದ್ದೇ ಪ್ರಕರಣದಲ್ಲಿ ಭಾಗಿಯಾಗುವಂತಿಲ್ಲ ಎಂಬ ಷರತ್ತುಗಳನ್ನು ಕೋರ್ಟ್ ವಿಧಿಸಿದೆ.


    ಈ ಪ್ರಕರಣದಲ್ಲಿ ಒಟ್ಟಾರೆ ೫೨೭ ಸಾಕ್ಷಿಗಳಿದ್ದು, ಇದುವರೆಗೆ ೯೦ ಸಾಕ್ಷಿಗಳ ವಿಚಾರಣೆಯಾಗಿದೆ. ೨೦೨೧ರ ಅ. ೩೦ರಂದು ಆರೋಪಿಗಳ ವಿರುದ್ಧ ಆರೋಪ ನಿಗದಿಯಾಗಿದೆ. ಕಳೆದ ಎರಡೂ ವರ್ಷಗಳಿಗೂ ಹೆಚ್ಚು ಕಾಲದಿಂದ ೯೦ ಸಾಕ್ಷಿಗಳನ್ನು ಮಾತ್ರ ವಿಚಾರಣೆ ನಡೆಸಲಾಗಿದೆ. ಇನ್ನೂ ೪೦೦ಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಬೇಕಿದೆ. ಎರಡು ವರ್ಷವಾದರೂ ೯೦ ಸಾಕ್ಷಿಗಳು ಮಾತ್ರ ವಿಚಾರಣೆಯಾಗಿರುವುದರಿಂದ ಪ್ರಕರಣದ ವಿಚಾರಣೆ ಶೀಘ್ರದಲ್ಲಿ ಮುಗಿಯುವ ಸಾಧ್ಯತೆ ಇಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.


    ಆರೋಪ ಎದುರಿಸುತ್ತಿರುವ ಮೋಹನ್ ನಾಯಕ್ ೨೦೧೮ರ ಜುಲೈ ೧೮ರಿಂದ ಕಸ್ಟಡಿಯಲ್ಲಿದ್ದಾರೆ. ಇತರೆ ಆರೋಪಿಗಳಿಗೆ ಹಣಕಾಸಿನ ನೆರವನ್ನು ಮೋಹನ್ ನಾಯಕ್ ನೀಡಿದ್ದಾರೆ ಎಂಬುದು ಪ್ರಾಸಿಕ್ಯೂಷನ್ ವಾದವಲ್ಲ ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.
    ಯಾವೊಬ್ಬ ಸಾಕ್ಷಿಯು ಆರೋಪಿಗಳ ಸಭೆಯಲ್ಲಿ ಮೋಹನ್ ನಾಯಕ್ ಭಾಗಿಯಾಗಿರಲಿಲ್ಲ. ಬಹುತೇಕ ಸಾಕ್ಷಿಗಳು ಬೆಂಗಳೂರಿನ ಕುಂಬಳಗೋಡಿನಲ್ಲಿ ಮೋಹನ್ ನಾಯಕ್ ಮನೆ ಬಾಡಿಗೆ ಪಡೆದಿದ್ದರು ಎಂದಷ್ಟೇ ಹೇಳಿದ್ದಾರೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
    ಅರ್ಜಿದಾರರ ಪರವಾಗಿ ವಕೀಲ ಅಮರ್ ಕೊರಿಯಾ ವಾದಿಸಿದ್ದರು. ರಾಜ್ಯ ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್ ಎ ನಾಯಕ್ ವಾದಿಸಿದ್ದರು.

    ಪ್ರಕರಣದ ಹಿನ್ನೆಲೆ:
    ೨೦೧೭ರ ಸೆ. ೫ರಂದು ಗೌರಿ ಲಂಕೇಶ್ ಅವರು ಕೆಲಸ ಮುಗಿಸಿ ಮನೆಗೆ ಮರಳಿದ ವೇಳೆ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಹತ್ಯೆಯ ಸಂಚು ರೂಪಿಸಿದ ಪ್ರಮುಖ ರೂವಾರಿ ಎಂದು ಅಮೋಲ್ ಕಾಳೆ ಮೇಲೆ ಆರೋಪವಿದ್ದರೆ, ಗುಂಡು ಹಾರಿಸಿದ ಆರೋಪ ಪರಶುರಾಮ್ ವಾಗ್ಮೋರೆ ಮೇಲೂ ಹಾಗೂ ಆತನನ್ನು ಕೂರಿಸಿಕೊಂಡು ಬೈಕ್ ಚಲಾಯಿಸಿ ತಪ್ಪಿಸಿಕೊಳ್ಳಲು ನೆರವಾದ ಆರೋಪ ಗಣೇಶ್ ಮಿಸ್ಕಿನ್ ಮೇಲಿದ್ದು, ಈ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts