ತೌಡುಗೋಳಿಯಲ್ಲಿ ಸಂಶಯಕ್ಕೆ ಕಾರಣವಾದ ಪಕ್ಷಿಗಳ ಸಾವು!

web - pakshi
ನರಿಂಗಾನ ಜಂಕ್ಷನ್ ಸಮೀಪವಿರುವ ಮೊಬೈಲ್ ಟವರ್ ಬಳಿ ಕಾಗೆಯ ಕಳೇಬರ ಪತ್ತೆಯಾಗಿರುವುದು.
Published on

ಉಳ್ಳಾಲ: ತಾಲೂಕಿನ ನರಿಂಗಾನ ಜಂಕ್ಷನ್ ಸಮೀಪವಿರುವ ಮೊಬೈಲ್ ಟವರ್ ಬಳಿ ವಿವಿಧ ಜಾತಿಯ ಪಕ್ಷಿಗಳು ಸಾವೀಗೀಡಾಗಿದ್ದು, ಭಾರೀ ಸಂಶಯಕ್ಕೆ ಕಾರಣವಾಗಿದೆ.

ಸ್ಥಳದಲ್ಲಿಯೇ ಇದೆ ಟವರ್!

ಸ್ಥಳದಲ್ಲಿ ಐದು ಕಾಗೆ, ಎರಡು ಗಿಡುಗ ಹಾಗೂ ಒಂದು ಕುಪುಲು (ಕೆಂಬೂತ) ಪಕ್ಷಿಯ ಕಳೇಬರ ಪತ್ತೆಯಾಗಿದೆ. ಸ್ಥಳದಲ್ಲಿಯೇ ಟವರ್ ಇದ್ದು, ಇದು ಸ್ಥಳೀಯರ ತೀವ್ರ ವಿರೋಧದ ನಡುವೆಯೇ ಇತ್ತೀಚೆಗಷ್ಟೇ ನಿರ್ಮಿಸಲಾಗಿತ್ತು. ಇದರಿಂದಾಗಿ ಹಕ್ಕಿಗಳು, ತೆಂಗಿನಮರಕ್ಕೆ ಯಾವುದೇ ಹಾನಿಯಾಗದು ಎಂದು ಅಧಿಕಾರಿಗಳು ಭರವಸೆ ನೀಡಿದ ಬಳಿಕ ಟವರ್ ನಿರ್ಮಾಣಕ್ಕೆ ಪಂಚಾಯಿತಿ ಅವಕಾಶ ನೀಡಿತ್ತು.

ಕಳೇಬರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ

ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಮ ಪಂಚಾಯಿತಿ ಪಿಡಿಒ, ಸ್ಥಳೀಯ ಮುಖಂಡರು ಭೇಟಿ ನೀಡಿ ಪಂಚಾಯಿತಿ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ. ಹಕ್ಕಿಗಳ ಕಳೇಬರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸುವ ವ್ಯವಸ್ಥೆ ಮಾಡಲಾಗಿದ್ದು, ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ನವಾಜ್ ತಿಳಿಸಿದ್ದಾರೆ.

ಬೀದಿ ನಾಯಿಗಳ ಹಾವಳಿ ಹೆಚ್ಚಳ

ಈ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇತ್ತೀಚೆಗೆ ಬಾಲಕನ ಮೇಲೆ ನಾಯಿಗಳು ದಾಳಿ ಮಾಡಲು ಮುಂದಾದಾಗ ಆಟೋ ಚಾಲಕರು ಅಟ್ಟಾಡಿಸಿದ್ದರು. ನಾಯಿಗಳನ್ನು ಕೊಲ್ಲಲು ಯಾರಾದರೂ ವಿಷ ಪದಾರ್ಥ ಹಾಕಿದ್ದರೆ, ಅದನ್ನು ಹಕ್ಕಿಗಳು ಸೇವಿಸಿ ಸಾವಿಗೀಡಾಗಿರುವ ಸಂಶಯವೂ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net