ಪತ್ತೇದಾರಿಕೆ ಮಾಡುವವನಿಂದಲೇ ಕಳ್ಳತನ; ಕಳವಿಗೂ ಮೊದಲು ಪಡೆಯುತ್ತಿದ್ದರು ಆರ್ಡರ್!

Bike Feature
Published on

ನೆಲಮಂಗಲ: ಇವರು ಸಾಮಾನ್ಯ ಕಳ್ಳರಲ್ಲ. ಏಕೆಂದರೆ ಇವರು ಕಳವಿಗೂ ಮೊದಲು ಆರ್ಡರ್ ತೆಗೆದುಕೊಂಡೇ ಕಳ್ಳತನ ಮಾಡುತ್ತಿದ್ದರು. ಅಷ್ಟೇ ಅಲ್ಲ, ಇವರಲ್ಲಿ ಪತ್ತೇದಾರಿಕೆ ಮಾಡುವವರು ಕೂಡ ಕಳ್ಳರೇ. ಇಂಥ ಖತರ್ನಾಕ್​ ಕಳ್ಳರ ಗ್ಯಾಂಗ್​ವೊಂದನ್ನು ಪೊಲೀಸರು ಪತ್ತೆ ಹಚ್ಚಿ, ಐವರು ಬೈಕ್​ ಕಳ್ಳರನ್ನು ಬಂಧಿಸಿದ್ದಾರೆ.

ರವಿಕುಮಾರ್, ಮುನಿರಾಜು, ಜಗದೀಶ್, ಮೋಹನ್ ಕುಮಾರ್ ಮತ್ತು ಪ್ರೈವೇಟ್ ಡಿಟೆಕ್ಟಿವ್‌ ಆದ ಶಿವಶಂಕರ್ ಬಂಧಿತ ಆರೋಪಿಗಳು. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಉಪವಿಭಾಗ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರಿಂದ ಒಟ್ಟು 40 ಲಕ್ಷ ರೂಪಾಯಿ ಮೌಲ್ಯದ ದುಬಾರಿ ಬೆಲೆಯ 46 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ಡಿಸೆಂಬರ್‌ನಿಂದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಬೈಕ್‌ ಕಳ್ಳತನ‌ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಆಧರಿಸಿ ಮಾದನಾಯಕನಹಳ್ಳಿ ಪೊಲೀಸರು ಖಚಿತ ಮಾಹಿತಿ ಪಡೆದಿದ್ದರು. ಬಳಿಕ ವಿಶೇಷ ತಂಡ ರಚಿಸಿ ತನಿಖೆ ನಡೆಸುತ್ತಿದ್ದ ವೇಳೆ ಸಿಸಿಟಿವಿ ಕ್ಲಿಪ್ಪಿಂಗ್​ನಲ್ಲಿ ಆರೋಪಿ ರವಿಕುಮಾರ್ ಕುರುಹು ಪತ್ತೆಯಾಗಿತ್ತು. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಎಲ್ಲ ಬೈಕ್ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ಡಿಕನ್‌ಸನ್ ರಸ್ತೆಯಲ್ಲಿನ ವೀನಸ್ ಡಿಟೆಕ್ಟಿವ್​ ಸರ್ವೀಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಶಿವಶಂಕರ್ ಸಹೋದ್ಯೋಗಿ ಲಿಖಿತ್‌ ಮೂಲಕ ರವಿಕುಮಾರ್ ಎಂಬಾತನ ಪರಿಚಯವಾಗುತ್ತಾನೆ. ಕದ್ದ ವಾಹನಗಳನ್ನು ಶಿವಕುಮಾರ್ ಮತ್ತು ಗ್ಯಾರೇಜ್ ಮಾಲೀಕ ಮೋಹನ್ ರಾಜ್ಯದ ವಿವಿಧೆಡೆಯ ಗ್ರಾಹಕರನ್ನು ಸೆಳೆದು, ತಮ್ಮ ಬಳಿ ಲಾಕ್‌ಡೌನ್ ಟೈಮ್​ನಲ್ಲಿ ಫೈನಾನ್ಸ್‌ ಕಟ್ಟದೆ ಸೀಜ್​ ಆಗಿರುವ ಹಲವು ಬೈಕ್‌ಗಳಿವೆ. ನಿಮಗೆ ಬೇಕಾದರೆ ನಾವು ಬೈಕ್ ಕೊಡಿಸುತ್ತೇವೆ, ಡಾಕ್ಯುಮೆಂಟ್ಸ್ ಕೆಲವು ದಿನಗಳ‌ ನಂತರ ಕೊಡುತ್ತೇವೆ ಎಂದು ನಂಬಿಸಿ ದುಬಾರಿ ಬೈಕ್​​ಗಳ ಆರ್ಡರ್ ತೆಗೆದುಕೊಂಡು ನಂತರ ಬೈಕ್​ ಕದ್ದು ಮಾರುತ್ತಿದ್ದರು. ಹೀಗೆ ಬಂದ ಹಣದಿಂದ ಐಷಾರಾಮಿ ಜೀವನ, ಮೋಜು-ಮಸ್ತಿ ಮಾಡುವ ಅಭ್ಯಾಸ ಹೊಂದಿದ್ದು, ದುಶ್ಚಟಗಳಿಗಾಗಿ ಕಳ್ಳತನವನ್ನೇ ಅವಲಂಬಿಸಿದ್ದರು ಎನ್ನಲಾಗಿದೆ.

ಈ ಆರೋಪಿಗಳಿಂದ ಕೆಟಿಎಂ, ಪಲ್ಸರ್, ಬುಲೆಟ್​, ಡಿಯೋ, ಯಮಹಾ ಆರ್‌ಎಕ್ಸ್​​ನಂಥ ವಿವಿಧ ಕಂಪನಿಯ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಭರ್ಜರಿ ಕಾರ್ಯಾಚರಣೆ ನಡೆಸಿದ ಇನ್​ಸ್ಪೆಕ್ಟರ್​ ಬಿ.ಎಸ್​.ಮಂಜುನಾಥ್ ಮತ್ತು ಸಿಬ್ಬಂದಿ ವರ್ಗಕ್ಕೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಳವಾದ ವಾಹನಗಳನ್ನು ಅದರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net