ಮನೆ ಮಾಲಕಿಯನ್ನೇ ತುಂಡು ತುಂಡಾಗಿ ಕತ್ತರಿಸಿದ ಬಿಹಾರಿ ಗ್ಯಾಂಗ್​

Anekal murder
Published on

ಬೆಂಗಳೂರು: ಇಡೀ ದೇಶವನ್ನೆ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಲ್ಕರ್​ ಹತ್ಯೆ ಪ್ರಕರಣ ಮಾಸುವ ಮುನ್ನವೇ ಇದೀಗ ಅದೇ ರೀತಿಯ ಘಟನೆಯೊಂದು ಉದ್ಯಾನನಗರಿ ಬೆಂಗಳೂರಿನಲ್ಲಿ ನಡೆದಿದ್ದು ತಲ್ಲಣ ಸೃಷ್ಟಿಸಿದೆ.

ಘಟನೆಯೂ ಆನೇಕಲ್​ ಉಪವಿಭಾಗದ ಬನ್ನೇರುಘಟ್ಟ ಪೊಲೀಸ್​ ಠಾಣೆ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ನಡೆದಿದೆ. ಬಿಹಾರ ಮೂಲದ ಏಳು ಮಂದಿ ಯುವಕರು ಕೃತ್ಯ ಎಸಗಿದ್ದು, ಈ ಪೈಕಿ ಓರ್ವನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆಸ್ತಿ ವಿಚಾರವಾಗಿ ಹತ್ಯೆ

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಜೂನ್​ 1ರಂದು ಬನ್ನೇರುಘಟ್ಟ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಕೊಲೆಗಡುಕರ ಪತ್ತೆಗೆ ವಿಶೇಷ ತಂಡವನ್ನು ರಚಿಸಿ ಕೃತ್ಯ ಎಸಗಿದ ಏಳು ಮಂದಿ ಪೈಕಿ ಓರ್ವನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಬಂಧಿತನನ್ನು ಇಂದಲ್​ ಕುಮಾರ್​(21) ಎಂದು ತಿಳಿದು ಬಂದಿದ್ದು, ಮೃತರನ್ನು ಗೀತಾ(54) ಎಂದು ಗುರುತಿಸಲಾಗಿದೆ. ಮಹಿಳೆಯ ಮನೆಯಲ್ಲಿ ಬಾಡಿಗೆಗೆ ಇದ್ದ ಆರೋಪಿಗಳು ತಾವು ವಾಸಿಸುತ್ತಿರುವ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಹುನ್ನಾರ ಮಾಡಿದ್ದರು. ಬಳಿಕ ಗೀತಾ ಅವರಿಗೆ ಪತ್ರಕ್ಕೆ ಸಹಿ ಹಾಕುವಂತೆ ಹೇಳಿದ್ದಾರೆ. ಇದಕ್ಕೊಪ್ಪದಿದ್ಧಾಗ ಆಕೆಯನ್ನು ಕೊಲೆ ಮಾಡಿ ದೇಹವನ್ನು ಕತ್ತರಿಸಿ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಸೆದಿದ್ದಾರೆ.

Bangalore Rural SP
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ

ಮಹಿಳೆ ಕೊಲೆಯಾದ ವಿಚಾರ ಯಾರಿಗೂ ತಿಳಿಯಬಾರದು ಎಂದು ಉಪಾಯ ಮಾಡಿದ ಆರೋಪಿಗಳು ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾರೆ. ಬಳಿಕ ಅಂಗಾಂಗಗಳನ್ನು ಸಾಗಿಸಿ ಬಿಸಾಡಿದ್ದರು. ಈ ಮಧ್ಯೆ ಪಾತಕಿಗಳು ಮಹಿಳೆಯ ರುಂಡವನ್ನು ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಎಸೆದು ಕೆಲಸಕ್ಕೆ ಹೋಗಿದ್ದರು.

ತುಂಡು ತುಂಡಾಗಿ ಕತ್ತರಿಸಿದ ಪಾತಕಿಗಳು

ಮೂರು ದಿನಗಳ ಬಳಿಕ ಮನೆಯಲ್ಲಿ್ದ ದೇಹದ ಭಾಗಗಳು ದುರ್ವಾಸನೆ ಬರಲು ಆರಂಭಿಸಿದಾಗ ಭಯಗೊಂಡ ಆರೋಪಿಗಳು ಅಂಗಾಂಗಗಳನ್ನು ಮನೆಯ ಹಿಂಭಾಗ ಎಸೆದು ಪರಾರಿಯಾಗಿದ್ದರು. ಮಹಿಳೆಯ ಕೊಲೆ ಮಾಡಿರುವ ಮುಂಚೆ ಅತ್ಯಾಚಾರ ಎಸಗಿರುವ ಶಂಕೆ ವ್ಯಕ್ತವಾಗಿದ್ದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಪರಿಶೀಲನೆ ನಡೆಸಿ ತಿಳಿಸಲಾಗುವುದು.

ಆಸ್ತಿ ವಿಚಾರ ಹೊತರುಪಡಿಸಿ ಬೇರ ಯಾವ ವಿಷಯಕ್ಕೆ ಕೊಲೆ ನಡೆದಿರಬಹುದು ಎಂಬುದ ಕುರಿತು ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಪಂಕಜ್ ಕುಮಾರ್, ಸುಮೀತ್ ಸೇರಿದಂತೆ ಇನ್ನಿತರರಿಗೆ ಬಲೆ ಬೀಸಲಾಗಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net